ಬೆಳಗಾವಿ: ಹಣಕಾಸಿನ ವ್ಯವಹಾರಕ್ಕೆ ಯೋಧರಿಬ್ಬರ ನಡುವೆ ನಡೆದ ಜಗಳದಲ್ಲಿ ರಿವಾಲ್ವರ್ ನಿಂದ ಗುಂಡಿನ ದಾಳಿ ನಡೆದು ಓರ್ವ ಗಂಭೀರ ಗಾಯಗೊಂಡ ಘಟನೆ ಗೋಕಾಕ ತಾಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ಸಂಜೆ ನಡೆದಿದೆ.
ಗ್ರಾಮದ ನಂಜುಂಡಿ ಲಕ್ಷ್ಮಣ ಬೂದಿಹಾಳ(32) ಗುಂಡು ಹಾರಿಸಿದ್ದು, ಅದೇ ಗ್ರಾಮದ ಬಸಪ್ಪ ಮೈಲಪ್ಪ ಬಂಬರಗಾ(32) ಹೊಟ್ಟೆಗೆ ಗುಂಡು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಬ್ಬರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಾಲದ ಹಣ ಮರಳಿಸುವ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಯೋಧ ನಂಜುಂಡಿ ಲೈಸನ್ಸ್ ಪಡೆದು ಕಾಶ್ಮೀರದಲ್ಲಿ ಖರೀದಿಸಿದ್ದ ರಿವಾಲ್ವರ್ ನಿಂದ ಬಸಪ್ಪನಿಗೆ ಗುಂಡು ಹಾರಿಸಿದ್ದಾನೆ. ಗುಂಡು ಬಸಪ್ಪನ ಹೊಟ್ಟೆಯ ಭಾಗಕ್ಕೆ ತಗುಲಿದ್ದು, ಅಸ್ವಸ್ಥಗೊಂಡ ಅವರನ್ನು ಸ್ಥಳೀಯರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾನೆ. ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.