ಹುಬ್ಬಳ್ಳಿ: ಸಾಂಸ್ಕೃತಿಕ ನಗರಿ ಧಾರವಾಡ ಹಾಗೂ ಐಟಿ ಹಬ್ ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ ( ರೈಲು ಸಂಖ್ಯೆ – ೨೦೬೬೨) ಎಕ್ಸಪ್ರೆಸ್ ರೈಲು ಯುವಕರು ಮತ್ತು ಉದ್ಯೋಗಸ್ಥ ಸಮೂಹದ ನೆಚ್ಚಿನ ರೈಲಾಗಿ ಗುರುತಿಸಿಕೊಂಡಿದೆ.
ಶೇ ೬೨ ರಷ್ಟು ಪ್ರಯಾಣಿಕರು ೨೫ ರಿಂದ ೫೯ ವರ್ಷದೊಳಗಿನವರೇ ಆಗಿದ್ದು, ಇವರೆಲ್ಲ ಯುವಕರು ಮತ್ತು ಉದ್ಯೋಗಸ್ಥ ಸಮೂಹದವರಾಗಿದ್ದಾರೆ. ವಿಶೇಷವಾಗಿ ದಿನದಿಂದ ದಿನಕ್ಕೆ ಯುವಕರ ಅಚ್ಚುಮೆಚ್ಚಿನ ರೈಲಾಗಿ ಗೋಚರಿಸುತ್ತಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಈ ರೈಲಿನಲ್ಲಿ ಸಂಚರಿಸುವ ಒಟ್ಟು ಪ್ರಯಾಣಿಕರಲ್ಲಿ ಶೇ ೨೦ ರಷ್ಟು ಪ್ರಯಾಣಿಕರು ೧೮ರಿಂದ ೨೪ ವರ್ಷದೊಳಗಿನವರಾಗಿದ್ದರೆ ೨೫ರಿಂದ ೩೪ ವರ್ಷದೊಳಗಿನ ಪ್ರಯಾಣಿಕರೂ ಶೇ ೨೦ರಷ್ಟು ಆಗಿದ್ದಾರೆ. ಇನ್ನು ಶೇ ೩೦ ರಷ್ಟು ಪ್ರಯಾಣಿಕರು ೩೫ರಿಂದ ೪೯ ವರ್ಷದೊಳಗಿನವರಾಗಿದ್ದಾರೆ ಎಂದು ತಿಳಿಸಿದೆ. ಈ ರೈಲು ಹೆಚ್ಚು ಸುರಕ್ಷತೆ, ಉತ್ಕೃಷ್ಟ ಸೇವೆ ಹಾಗೂ ಆರಾಮದಾಯಕ ಪ್ರಯಾಣ ಉದ್ದೇಶ ಒಳಗೊಂಡು ರೂಪಿಸಿದ್ದಾಗಿದೆ.
ಪ್ರತಿ ದಿನ ಧಾರವಾಡದಿಂದ ಮಧ್ಯಾಹ್ನ ೧.೧೫ ಕ್ಕೆ ಹೊರಡಲಿದ್ದು, ಹುಬ್ಬಳ್ಳಿ ದಾವಣಗೆರೆ ಮತ್ತು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗಲಿದ್ದು, ರಾತ್ರಿ ೭.೪೫ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ತಲುಪುತ್ತದೆ ಎಂದು ತಿಳಿಸಿದೆ. ಇತರೆ ಎಕ್ಸಪ್ರೆಸ್ ರೈಲುಗಳಿಗಿಂತ ಅಂದಾಜು ೧ ತಾಸು ಮುಂಚಿತವಾಗಿ ತಲುಪಲಿದೆ. ಹೀಗಾಗಿ, ಯುವಕರು, ಉದ್ಯೋಗಸ್ಥ ಸಮೂಹ ಹೆಚ್ಚು ಈ ರೈಲು ಆಯ್ಕೆ ಮಾಡಿಕೊಂಡು ಪ್ರಯಾಣಿಸುತ್ತಿದ್ದಾರೆ ಎಂದು ನೈಋತ್ಯ ರೈಲ್ವೆ ವಲಯ ತಿಳಿಸಿದೆ.