ಮಂಗಳೂರು: ಮೂಲ್ಕಿ ಪಕ್ಷಿಕೆರೆ ಸಂಘಟನೆಯೊಂ GVದರ ಕಾರ್ಯಕರ್ತನೊಬ್ಬ ನೆರೆ ಮನೆಯ ಮಹಿಳೆಯೊಬ್ಬರು ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಘಟನೆಗೆ ಸಂಬಂಧಿಸಿದ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದಂತೆ ಎಚ್ಚೆತ್ತುಕೊಂಡ ಪೊಲೀಸರು, ಆರೋಪಿಯನ್ನು ರಾತ್ರಿ ಬಂಧಿಸಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ, ಘಟನೆಗೆ ಸಂಬಂಧಿಸಿ ಪ್ರಜ್ವಲ್ ಎಂಬವರು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮಹಿಳೆ ಸ್ನಾನ ಮಾಡುವಾಗ ಅನುಮಾನಗೊಂಡು ಬಚ್ಚಲು ಕೋಣೆಯಲ್ಲಿ ಪರಿಶೀಲಿಸಿದಾಗ ಮೊಬೈಲ್ ಕ್ಯಾಮರ ಇರುವುದನ್ನು ತೆಗೆದು ಪರಿಶೀಲಿಸಿದ್ದಾರೆ. ಅದು ನೆರೆ ಮನೆಯ ಸುಮಂತ್ ಅವರ ಮೊಬೈಲ್ ಫೊನ್ ಎಂದು ತಿಳಿದ ಬಳಿಕ ಮೂಲ್ಕಿ ಪೊಲೀಸರಿಗೆ ದೂರು ನೀಡಲಾಗಿದೆ. ಅದರಂತೆ ಸುಮಂತ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಮೊಬೈಲ್ ಫೋನ್ ನ್ನು ಎಫ್‌ಎಸ್‌ಎಲ್ ತನಿಖೆಗೆ ಕಳುಹಿಸಲಾಗಿದ್ದು, ವರದಿಯ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದಿದ್ದಾರೆ.
ಬಜರಂಗದಳ ಸ್ಪಷ್ಟನೆ :
ಬಂಧಿತ ಆರೋಪಿ ಈ ಹಿಂದೆ ಬಜರಂಗದಳ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಆದರೆ ವಿಪರೀತ ಮದ್ಯದ ಚಟ ಇದ್ದ ಸುಮಂತ್ ಪೂಜಾರಿಯನ್ನು ಕೆಲ ಸಮಯಗಳ ಹಿಂದೆ ಸಂಘಟನೆಯಿಂದ ದೂರ ಇಡಲಾಗಿದೆ ಎಂದು ಪಕ್ಷಿಕೆರೆ ಬಜರಂಗದಳ ಮುಖಂಡರು ಸ್ಪಷ್ಟನೆ ನೀಡಿದ್ದಾರೆ.
ಮಹಿಳೆ ಸ್ನಾನ ಮಾಡುವಾಗ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿರುವುದನ್ನು ಗಮನಿಸಿದ ಮಹಿಳೆ ಕಿರುಚಾಡಿದ್ದಾರೆ, ಕೂಡಲೇ ಸ್ಥಳದಲ್ಲಿ ಸೇರಿದ ಬಜರಂಗದಳದ ಕಾರ್ಯಕರ್ತರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಬಜರಂಗದಳಕ್ಕೆ ಸೇರಿದವನು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆ, ಇದು ಸಂಘಟನೆಯ ಹೆಸರು ಕೆಡಿಸುವ ಯತ್ನ ಎಂದಿದ್ದಾರೆ.