Home ನಮ್ಮ ಜಿಲ್ಲೆ ಬ್ಯಾರಲ್ ಸೇತುವೆ ನಿರ್ಮಿಸಿ ಪರಿಹಾರ ಕಂಡುಕೊಂಡ ರೈತರು

ಬ್ಯಾರಲ್ ಸೇತುವೆ ನಿರ್ಮಿಸಿ ಪರಿಹಾರ ಕಂಡುಕೊಂಡ ರೈತರು

0
ಬ್ಯಾರಲ್ ಸೇತುವೆ ನಿರ್ಮಿಸಿ ಪರಿಹಾರ ಕಂಡುಕೊಂಡ ರೈತರು

ಬಾಗಲಕೋಟೆ: ನಿತ್ಯ ಸಂಚಾರಕ್ಕೆ ಸರ್ಕಾರಕ್ಕೆ ಮನವಿ ಮಾಡಿ ಬೇಸತ್ತ ಕೃಷ್ಣಾ ತೀರದ ರೈತರು ತಮ್ಮ ಅನುಕೂಲಕ್ಕಾಗಿ ತಾವೇ ಬ್ಯಾರಲ್ ಸೇತುವೆ ನಿರ್ಮಿಸಿಕೊಂಡು ಗಮನ ಸೆಳೆದಿದ್ದಾರೆ.
ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದ ಮುಳುಗಡೆ ಸಂತ್ರಸ್ತ ರೈತರು ಹಲವು ವರ್ಷಗಳಿಂದ ಸೇತುವೆ ನಿರ್ಮಿಸಿಕೊಡುವಂತೆ ಸರ್ಕಾರಕ್ಕೆ ದುಂಬಾಲು ಬಿದ್ದಿದ್ದರು. ಆದರೆ ಆಳುವ ಸರ್ಕಾರಗಳು ನಿರ್ಲಕ್ಷಿಸುತ್ತಲೇ ಬಂದಿದ್ದವು. ಇದರಿಂದ ಬೇಸತ್ತ ರೈತರು ತಾವೇ ಸೇತುವೆಯೊಂದನ್ನು ನಿರ್ಮಿಸಿಕೊಂಡರು.
ಕೇವಲ ಬ್ಯಾರಲ್‌ಗಳನ್ನು ಬಳಸಿಕೊಂಡು ೬೦೦ ಅಡಿ ಉದ್ದ ಹಾಗೂ ೮ ಅಡಿ ಅಗಲದ ಬ್ಯಾರೇಜ್‌ನ್ನು ರೈತರು ನಿರ್ಮಿಸಿಕೊಂಡಿದ್ದು, ಜನ-ಜಾನುವಾರು, ವಾಹನಗಳು ಓಡಾಡಲು ಅವಕಾಶವಿರುವಂತೆ ಮಾಡಿಕೊಂಡಿದ್ದಾರೆ. ಎಕರೆಗೆ ೧ ಸಾವಿರದಂತೆ ವಂತಿಗೆ ಸಂಗ್ರಹಿಸಿ ೨೫ ಲಕ್ಷ ರೂ.ಗಳ ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಂಡಿದೆ.
ಕಂಕಣವಾಡಿಯ ಗುಹೇಶ್ವರ ನಡುಗಡ್ಡೆ ವ್ಯಾಪ್ತಿಯಲ್ಲಿ ೨೦೦ ರೈತರಿಗೆ ಸಂಬಂಧಿಸಿದ ೭೦೦ ಎಕರೆ ಜಮೀನು ಇದ್ದು, ಬಹುತೇಕರು ಕಬ್ಬು ಹಾಗೂ ತೋಟಗಾರಿಕೆ ಬೆಳೆಗಳನ್ನು ಹೊಂದಿದ್ದು, ಈ ಪ್ರದೇಶದಲ್ಲಿ ಸಾಗಿ ಬರುವುದು ಕಷ್ಟವಾಗಿತ್ತು. ಕಳೆದ ವರ್ಷವೂ ಎರಡು ಬೋಟ್‌ಗಳನ್ನು ಜೋಡಿಸಿ ಇಲ್ಲಿನ ರೈತರು ಟ್ರ್ಯಾಕ್ಟರ್‌ನಲ್ಲಿ ಕಬ್ಬು ಹೊತ್ತು ಬಂದು ಗಮನಸೆಳೆದಿದ್ದರು. ಸೇತುವೆಗಾಗಿ ಮನವಿ ಸಲ್ಲಿಸಿದ್ದ ರೈತರು ಬೇಸತ್ತು ಪರಿಹಾರ ಹುಡುಕುವಾಗ ಬಾಂಗ್ಲಾದೇಶದಲ್ಲಿ ಬ್ಯಾರಲ್ ಬೋಟ್ ನಿರ್ಮಿಸಿದ್ದ ವಿಡಿಯೋ ನೋಡಿದ್ದರು. ರೈತರೇ ಸೇರಿಕೊಂಡು ಸ್ವಂತ ಬ್ಯಾರೇಜ್ ನಿರ್ಮಾಣ ಮಾಡಿಕೊಂಡಿದ್ದಾರೆ. ರೈತರ ಕಾರ್ಯಕ್ಕೆ ಅಪಾರ ಶ್ಲಾಘನೆ ವ್ಯಕ್ತವಾಗಿದೆ.