ಮಂಗಳೂರು: ಬಿಪರ್ ಜಾಯ್ ಚಂಡಮಾರುತದ ಪರಿಣಾಮ ಕರಾವಳಿಯ ಕಡಲು ಪ್ರಕ್ಷುಬ್ಧಗೊಂಡು ಸಮುದ್ರದ ಅಲೆಗಳ ಅಬ್ಬರ ಜೋರಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಉಚ್ಚಿಲ, ಕೈಕೋ, ಸೀಗ್ರೌಂಡ್, ಮೊಗವೀರಪಟ್ಣ, ಉಡುಪಿ ಜಿಲ್ಲೆಯ ಮಲ್ಪೆ, ಪಡುಬಿದ್ರಿ, ತ್ರಾಸಿ, ಮರವಂತೆ ಕಡಲ ತೀರದಲ್ಲಿ ಬೃಹತ್ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು, ಬೀಚ್‌ಗೆ ಆಗಮಿಸುವ ಪ್ರವಾಸಿಗರು ನೀರಿಗೆ ಇಳಿಯದಂತೆ ಎಚ್ಚರಿಕೆ ವಹಿಸಲಾಗಿದೆ.
ಕಡಲ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬೀಚ್‌ಗಳಿಗೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಬೀಚ್‌ಗೆ ಆಗಮಿಸುವ ಪ್ರವಾಸಿಗರು ಕಡಲ ಕಿನಾರೆಗೆ ಇಳಿದು ಪುಟ್ಟ ಮಕ್ಕಳೊಂದಿಗೆ ನೀರಿನಲ್ಲಿ ಆಟವಾಡುತ್ತಾರೆ, ಬ್ರೇಕ್ ವಾಟರ್ ತುದಿಯಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಮೊಜು ಮಸ್ತಿಯಲ್ಲಿ ತೊಡಗಿಕೊಳ್ಳುತ್ತಾರೆ. ಬೇಸಿಗೆಯ ಅವಧಿಯಲ್ಲಿ ಕಡಲು ಶಾಂತ ರೀತಿಯಲ್ಲಿ ವರ್ತಿಸಿದರೆ ಮಳೆಗಾಲದ ಅವಧಿಯಲ್ಲಿ ಕಡಲು ಪ್ರಕ್ಷುಬ್ಧಗೊಳ್ಳುವ ಪರಿಣಾಮ ಬೃಹತ್ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತದೆ. ಮಳೆಗಾಲದ ಅವಧಿಯಲ್ಲಿ ಪ್ರವಾಸಿಗರಾಗಲಿ ಸ್ಥಳೀಯರಾಗಲಿ ಕಡಲಿಗೆ ಇಳಿಯುವುದು ಸೂಕ್ತವಲ್ಲ,
ಬ್ರೇಕ್ ವಾಟರ್ ಮೇಲೇರಿ ಸೆಲ್ಫಿ ಫೋಟೋಗಳನ್ನು ಕ್ಲಿಕ್ಕಿಸುವುದು ಕೂಡ ಅಪಾಯಕ್ಕೆ ಆಹ್ವಾನವನ್ನು ನೀಡಿದಂತೆ.
ಕಡಲು ಪ್ರಕ್ಷುಬ್ಧಗೊಂಡಿರುವುದರಿಂದ ನೀರಿಗೆ ಇಳಿಯಬೇಡಿ ಎಂದು ಪ್ರವಾಸಿಗರಿಗೆ ಸ್ಥಳೀಯರು ಕಿವಿಮಾತು ಹೇಳುತ್ತಿದ್ದರೂ ಲೆಕ್ಕಿಸದ ಪ್ರವಾಸಿರಗು ನೀರಿಗೆ ಇಳಿಯುತ್ತಿರುವುದು ಆತಂಕ ಮೂಡಿಸಿದೆ.
ಕಡಲ್ಕೊರೆತ..
ನಿರಂತರೆ ಮಳೆಗೆ ಉಳ್ಳಾಲ ಬಟ್ಟಪ್ಪಾಡಿ, ಸೀಗ್ರೌಂಡ್ ನಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಹಲವು ಮನೆಗಳು ಅಪಾಯ ಅಂಚಿನಲ್ಲಿದೆ. ಬಟ್ಟಪ್ಪಾಡಿಯಲ್ಲಿ ಕೊಡಲು ರಸ್ತೆ ದಾಟಿ ಬಂದಿದೆ. ಕಳೆದ ಬಾರಿ ಅಪಾಯ ಅಂಚಿನಲ್ಲಿದ್ದ ಗೆಸ್ಟ್ ಹೌಸ್ ಸಮುದ್ರ ಪಾಲಾಗಿದೆ. ೫೦ ತೆಂಗಿನ ಮರಗಳು ನೀರು ಪಾಲಾಗಿದೆ. ಈ ಕಡಲ ಪ್ರದೇಶದಲ್ಲಿ ವಾಸ ಮಾಡುವ ಜನರು ಭೀತಿಯಿಂದ ಬದುಕಬೇಕಾದ ಪರಿಸ್ಥಿತಿ ಬಂದಿದೆ.