ಮೂವರು ದುಷ್ಕರ್ಮಿಗಳ ವಿರುದ್ಧ ತನಿಖೆ ಮುಂದುವರಿಕೆ
ಮಂಗಳೂರು: ನಗರದ ಹೊರವಲಯದಲ್ಲಿ ಮಂಗಳವಾರ ರಾತ್ರಿ ಯುವಕನ ಮೇಲೆ ನಡೆದ ಮಾರಕಾಸ್ತ್ರ ದಾಳಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಂಗಳೂರು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೂಪಾಡಿಕಲ್ಲು ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ದಾಳಿಗೆ ಒಳಗಾದ ಯುವಕನನ್ನು ಅಕಿಲೇಶ್ ಎಂದು ಗುರುತಿಸಲಾಗಿದ್ದು, ಕೈ ಭಾಗಕ್ಕೆ ತೀವ್ರ ಗಾಯವಾಗಿದೆ. ಗಾಯಗೊಂಡ ಅಕಿಲೇಶ್ ಅವರಿಗೆ ಮೂಡಬಿದ್ರೆ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವೀಡಿಯೋ ಮಾಡಿದುದನ್ನು ಆಕ್ಷೇಪಿಸಿ ದಾಳಿ: ಸಾಕ್ಷಿದಾರರ ಪ್ರಕಾರ ದಾಳಿಯ ವೇಳೆ ಬೈಕ್‌ನಲ್ಲಿ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರ ಹಿಡಿದು ಸಂಚರಿಸುತ್ತಿದ್ದರು. ಈ ದೃಶ್ಯವನ್ನು ಯುವಕ ಅಕಿಲೇಶ್ ತನ್ನ ಮೊಬೈಲ್‌ನಲ್ಲಿ ವೀಡಿಯೋ ಆಗಿ ಸೆರೆಹಿಡಿದಿದ್ದರು. ದುಷ್ಕರ್ಮಿಗಳು ಇದನ್ನು ಗಮನಿಸಿ, ವೀಡಿಯೋ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅಕಿಲೇಶ್ ಮೇಲೆ ತಲವಾರು ಬೀಸಿರುವುದು ತಿಳಿದುಬಂದಿದೆ. ದಾಳಿಯಿಂದ ಅಕಿಲೇಶ್ ಅವರ ಕೈ ಭಾಗಕ್ಕೆ ಗಂಭೀರ ಗಾಯವಾಗಿದೆ.
ಪೊಲೀಸರು ಸ್ಥಳ ಪರಿಶೀಲನೆ – ತನಿಖೆ ಪ್ರಾರಂಭ: ಘಟನೆಯ ಬಳಿಕ ಸ್ಥಳಕ್ಕೆ ಬಜಪೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ದುಷ್ಕರ್ಮಿಗಳ ಪತ್ತೆಗೆ ಸಂಬಂಧಿಸಿದ ವಿಚಾರಣೆ ನಡೆಸುತ್ತಿದ್ದಾರೆ.
