ಕರ್ನಾಟಕಕ್ಕೆ ಸೇರಲು ಮಹಾ ಗ್ರಾ.ಪಂ ಠರಾವ್

0
8

ಸಂಜೀವ ಕಾಂಬಳೆ
ಚಿಕ್ಕೋಡಿ: ಶೇ. ೯೦ರಷ್ಟು ಮರಾಠಿ ಭಾಷಿಕರೇ ಇರುವ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕಿನ ೧೦ ಗ್ರಾಮ ಪಂಚಾಯಿತಿಗಳಿಂದ ಕರ್ನಾಟಕಕ್ಕೆ ಸೇರುವ ಬಗ್ಗೆ ಠರಾವು ಪಾಸ್ ಆಗಿದೆ. ಮರಾಠಿ ಭಾಷಿಕರು ಕರ್ನಾಟಕದತ್ತ ಒಲವು ತೋರಿರುವುದು ಮಹಾರಾಷ್ಟ್ರಕ್ಕೆ ಭಾರಿ ಮುಖಭಂಗವಾಗಿದೆ.
೧೦ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು, ಮುಖಂಡರಿಂದ ಸರ್ವಾನುಮತದಿಂದ ಠರಾವ್ ಪಾಸ್ ಆಗಿದೆ. ಈ ಹಿಂದೆಯೂ ಜತ್ತ ತಾಲೂಕಿನ ೪೨ ಹಳ್ಳಿಗಳು ಕರ್ನಾಟಕಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದವು. ಇದೀಗ ಮತ್ತೆ ಮಹಾ ಸರಕಾರದಲ್ಲಿನ ಗ್ರಾಮಗಳು ಸೂಕ್ತವಾದ ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿದ್ದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಕ್ರಮಕ್ಕೆ ಮುಂದಾಗಿರುವುದು ಅಲ್ಲಿನ ಸರಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮಹಾ ಸಿಎಂ ಶಿಂಧೆ ಚಿಂತಾಕ್ರಾಂತ:
ಅಲ್ಲಿನ ಗ್ರಾಮಗಳಿಗೆ ೧,೯೦೦ ಕೋಟಿ ರೂ. ಅನುದಾನದ ಅಭಿವೃದ್ಧಿ ಪ್ಯಾಕೇಜ್ ಕೊಡುವುದಾಗಿ ಭರವಸೆ ನೀಡಿದ್ದ ಸಿಎಂ ಏಕನಾಥ ಶಿಂಧೆ ಅವರಿಗೆ ಈ ಠರಾವು ನಿರ್ಧಾರ ಚಿಂತೆಗೀಡು ಮಾಡಿದೆ. ಕರ್ನಾಟಕದೊಂದಿಗೆ ವಿಲೀನಕ್ಕೆ ಸರ್ವಾನುಮತದ ನಿರ್ಣಯ ಕೈಗೊಂಡ ಪಂಚಾಯಿತಿಗಳು ಮಹಾ ಸರ್ಕಾರ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿದ್ದು, ಮಳೆಗಾಲ ಇದ್ದರೂ ಕಾಗಲ್ ತಾಲೂಕಿನಲ್ಲಿ ನೀರಿನ ಸಮಸ್ಯೆ ಪರಿಹರಿಸಿಲ್ಲ ಎಂದು ಆರೋಪಿಸಿವೆ.
ಸರ್ಕಾರದ ಯಾವುದೇ ಆಶ್ವಾಸನೆಗೂ ಮರುಳಾಗಲ್ಲ ಎಂದು ಸಭೆಯಲ್ಲಿ ಕೈ ಮೇಲಕ್ಕೆತ್ತಿ ಕರ್ನಾಟಕಕ್ಕೆ ಸೇರುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ದೂಧಗಂಗಾ ನದಿ ನೀರನ್ನು ಇಚಲಕರಂಜಿಗೆ ಕೊಡುವುಕ್ಕೆ ತೀವ್ರ ವಿರೋಧವಿದೆ. ನೀರು ಸರಬರಾಜು ಮಾಡುವ ನಿರ್ಧಾರ ಕೈಬಿಡದಿದ್ದರೆ ಕರ್ನಾಟಕಕ್ಕೆ ಸೇರುವ ಹೋರಾಟ ನಿಲ್ಲದು ಎಂದು ಮುಖಂಡರು ಎಚ್ಚರಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಇನ್ನಾದರೂ ಕಣ್ತೆರೆದು ಗಡಿ ಭಾಗದ ಹಳ್ಳಿಗಳ ಅಭಿವೃದ್ಧಿಗೆ ಕ್ರಮ ವಹಿಸಬೇಕು. ತನ್ನ ರಾಜ್ಯದಲ್ಲಿರುವ ಹಳ್ಳಿಗಳನ್ನು ಅಭಿವೃದ್ಧಿಪಡಿಸಲಿ. ಅದನ್ನು ಬಿಟ್ಟು ಕರ್ನಾಟಕದ ಐದು ಜಿಲ್ಲೆಯ ೮೫೦ ಹಳ್ಳಿಗಳು ಮಹಾರಾಷ್ಟ್ರ ಸೇರಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದು ವಿಪರ್ಯಾಸ. ಏತನ್ಮಧ್ಯೆ, ಈಗ ಅವರ ರಾಜ್ಯದ ಹಳ್ಳಿಗಳೇ ಮಹಾ ಸರ್ಕಾರಕ್ಕೆ ತಿರುಗುಬಾಣವಾಗಿರುವುದು ನಿಜಕ್ಕೂ ಮುಖಭಂಗವೇ ಸರಿ ಎನ್ನಲಾಗುತ್ತಿದೆ.

Previous articleಪಂಚನದಿಗಳಿಗೆ ಪ್ರವಾಹ: 36 ಗ್ರಾಮಗಳಿಗೆ ನಡುಕ..!
Next articleನಿಸರ್ಗ ಪ್ರಕೋಪಕ್ಕೆ ಹೊಣೆಗಾರರು ನಾವೇ