Home ಅಪರಾಧ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

0

ಹುಬ್ಬಳ್ಳಿ: ವಿದ್ಯಾನಗರ ಕಾಲೇಜ್ ಒಂದರ ವಿದ್ಯಾರ್ಥಿನಿಯರ ಹೆಸರಿನಲ್ಲಿ ಫೇಕ್ ಇನ್ಸ್ಟಾಗ್ರಾಮ್ ಐಡಿ ಕ್ರಿಯೇಟ್ ಮಾಡಿ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಹರಿಬಿಟ್ಟು, ಪೊಲೀಸರಿಗೆ ಚಾಲೇಂಜ್ ಮಾಡಿದ್ದ ಇನ್ನಿಬ್ಬರು ಆರೋಪಿತರನ್ನು ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ ೩ ಮೊಬೈಲ್ ಮತ್ತು ಸಿಮ್ ಕಾರ್ಡ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜಾಲತಾಣದ ಖಾತೆಯನ್ನು ಹ್ಯಾಕ್ ಮಾಡುತ್ತಿದ್ದ ಕಿರಣ ಮತ್ತು ಅವನ ಸ್ನೇಹಿತ ನವೀನ ಬಂಧಿತರು. ಆರೋಪಿಗಳಿಬ್ಬರೂ ತಾಲೂಕಿನ ಇಂಗಳಹಳ್ಳಿ ಗ್ರಾಮದವರಾಗಿದ್ದಾರೆ. ಈ ಮೊದಲು ಪೊಲೀಸರು ಅದೇ ಕಾಲೇಜಿನ ರಜನಿಕಾಂತ ತಳವಾರ ಎಂಬಾತನನ್ನು ಸಂಶಯದ ಮೇಲೆ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.
ರಜನಿಕಾಂತನ ಇಮೇಲ್ ಐಡಿ ಮತ್ತು ಇನ್ಸ್ಟಾಗ್ರಾಮ್ ಖಾತೆ ಹಾಗೂ ಸಾಮಾಜಿಕ ಜಾಲತಾಣಗಳ ವಿವಿರಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಜೊತೆಗೆ, ಹ್ಯಾಕ್ ಮಾಡಲಾದ ವಿದ್ಯಾರ್ಥಿನಿಯರ ಇನ್ಸ್ಟಾಗ್ರಾಮ್ ಖಾತೆ ವಿವರ ಸಂಗ್ರಹಿಸಿ ಫೇಸ್‌ಬುಕ್ ಸಂಸ್ಥೆಗೆ ಪತ್ರ ಬರೆದು ಮಾಹಿತಿ ನೀಡಲು ವಿನಂತಿಸಿದ್ದರು. ಅಲ್ಲಿಂದ ದೊರೆತ ಅಧಿಕೃತ ಮಾಹಿತಿಯೇ ಆರೋಪಿಗಳ ಪತ್ತೆಗೆ ಸಹಕಾರಿಯಾಗಿದೆ.
ಫೇಕ್ ಇನ್ಸ್ಟಾಗ್ರಾಮ್ ಐಡಿ ಕ್ರಿಯೇಟ್ ಮಾಡಿ ಅಶ್ಲೀಲ ಫೋಟೋಗಳನ್ನು ಮತ್ತು ರೀಲ್ಸ್ಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಹರಿಬಿಟ್ಟು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ, ಅವರ ಗೌರವ ಮತ್ತು ಘನತೆಗೆ ಧಕ್ಕೆ ನೀಡಿದ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಇನ್ಸ್‌ಪೆಕ್ಟರ್ ಎಮ್.ಎಸ್. ಹೂಗಾರ ಅವರು ತನಿಖೆ ಕೈಗೊಂಡು ವಿದ್ಯಾರ್ಥಿನಿಯರ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ ಮತ್ತು ಕ್ರಿಯೇಟ್ ಮಾಡಲು ಪ್ರೇರಣೆ ನೀಡಿದ ಇಬ್ಬರನ್ನು ಬಂಧಿಸಿದ್ದಾರೆ.

Exit mobile version