Home ನಮ್ಮ ಜಿಲ್ಲೆ ಧಾರವಾಡ ಗಣೇಶೋತ್ಸವ: ಹುಬ್ಬಳ್ಳಿಯಲ್ಲೇ ಪ್ರಯಾಗ್‌ರಾಜ್, ದೇವರಗುಡ್ಡ ಸೃಷ್ಟಿ..!

ಗಣೇಶೋತ್ಸವ: ಹುಬ್ಬಳ್ಳಿಯಲ್ಲೇ ಪ್ರಯಾಗ್‌ರಾಜ್, ದೇವರಗುಡ್ಡ ಸೃಷ್ಟಿ..!

0

ಹರ್ಷ ಕುಲಕರ್ಣಿ
ಹುಬ್ಬಳ್ಳಿ:
ಅಯೋಧ್ಯೆಯ ಶ್ರೀ ಬಾಲರಾಮ… ಜ್ಯೋತಿಸ್ವರೂಪ ಶ್ರೀ ಅಯ್ಯಪ್ಪ ಸ್ವಾಮಿ… ಶ್ರೀ ಮೈಲಾರ ಲಿಂಗೇಶ್ವರ ಸೇರಿದಂತೆ ಹತ್ತಾರು ದೇವರು ಗಣೇಶನ ರೂಪದಲ್ಲಿ ದರ್ಶನ ನೀಡಲು, ಭಕ್ತರನ್ನು ಆಶೀರ್ವದಿಸಲು ನಗರಕ್ಕೆ ಆಗಮಿಸುತ್ತಿದ್ದಾರೆ…!

ಪೌರಾಣಿಕ, ಐತಿಹಾಸಿಕ ಮತ್ತು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಸಾರಬಲ್ಲ ಅನೇಕ ದೃಶ್ಯ, ರೂಪಕಗಳನ್ನು ವಿವಿಧ ಗಣೇಶ ಪೆಂಡಾಲುಗಳಲ್ಲಿ ಪ್ರದರ್ಶಿಸಲು ಅಂತಿಮ ಹಂತದ ಸಿದ್ಧತೆಗಳು ನಡೆದಿವೆ. ಆ. 27ರಂದು ಗಣೇಶ ಮೂರ್ತಿ ಪ್ರತಿಷ್ಠಾಪನೆಗೊಂಡರೂ ರೂಪಕ ಮತ್ತು ವಿವಿಧ ಸನ್ನಿವೇಶಗಳು ಸೆ. 1ರ ನಂತರವೇ ಸಾರ್ವಜನಿಕರಿಗೆ ನೋಡಲು ಲಭ್ಯವಾಗಲಿವೆ.

ರೈಲ್ವೆ ಸ್ಟೇಶನ್ ರಸ್ತೆಯ ಶ್ರೀ ಗಣೇಶೋತ್ಸವ ಮಂಡಳಿಯವರು ಈ ಬಾರಿ ತ್ರಿಲೋಕಕ್ಕೆ ಕಂಟಕಪ್ರಾಯವಾಗಿದ್ದ ಮಣಿಕ-ಮಲ್ಲಾಸುರ ರಾಕ್ಷಸರನ್ನು ವಧೆ ಮಾಡಲು ಸಾಕ್ಷಾತ್ ಶಿವನು ಮೈಲಾರಲಿಂಗೇಶ್ವರನ ಅವತಾರ ಮತ್ತು ಪಾರ್ವತಿ ದೇವಿಯು ಗಂಗೆ ಮಾಳವ್ವಳಾಗಿ ಅವತಾರ ತಾಳಿ ರಾಕ್ಷಸರನ್ನು ವಧೆ ಮಾಡಿದ ಸನ್ನಿವೇಶ ಪ್ರದರ್ಶನಗೊಳ್ಳಲಿದೆ.

ಸಿಂಪಿಗಲ್ಲಿಯ ಶ್ರೀ ಮಾರುತಿ ಯುವಕ ಸೇವಾ ಸಂಘದವರು ಪ್ರತಿಷ್ಠಾಪಿಸುವ ಬೃಹದಾಕಾರದ 61 ಕೆಜಿ ಬೆಳ್ಳಿಯ ಗಣೇಶ ವಿಗ್ರಹ ಜನರನ್ನು ಕೈ ಬೀಸಿ ಕರೆಯಲಿದೆ. ಪ್ರಯಾಗ್‌ರಾಜ್ ಥೀಮ್ ಅಳವಡಿಸಿದ್ದಾರೆ. ಶೀಲವಂತರ ಓಣಿಯಲ್ಲಿ ವಿರಾಜಮಾನವಾಗಲಿರುವ ಗಣೇಶನ ಮುಂದೆ ಶಬರಿಮಲೈ ಶ್ರೀ ಅಯ್ಯಪ್ಪ ಸ್ವಾಮಿ ಜ್ಯೋತಿ ಸ್ವರೂಪನಾಗಿ ದರ್ಶನ ನೀಡಲಿದ್ದಾನೆ. ಹಿರೇಪೇಟೆ ಕಂಚಗಾರಗಲ್ಲಿಯಲ್ಲಿ ವಿಷ್ಣುವು ಜಗನ್ಮೋಹಿನಿಯ ರೂಪತಾಳಿ ದೇವತೆಗೆ ಅಮೃತ ವಿತರಿಸಿದ ಮತ್ತು ಅಮೃತದ ಹನಿಗಳು ಬಿದ್ದ ಜಾಗೆಯಲ್ಲಿ ನಡೆಯುವ ಪವಿತ್ರ ಸ್ನಾನದ ಸನ್ನಿವೇಶವನ್ನು ಅನಾವರಣಗೊಳಿಸಲಿದ್ದಾರೆ.

ಸರಾಫ ಕಟ್ಟಿಯ ವೃತ್ತದಲ್ಲಿ ನಿರ್ಮಿಸಲಾದ ಬೃಹತ್ ಪೆಂಡಾಲಿನಲ್ಲಿ 151 ಕೆಜಿಯ ಬೃಹತ್ ಬೆಳ್ಳಿ ಗಣೇಶ ವಿರಾಜಮಾನ ಆಗಲಿದ್ದಾನೆ. ಆತನ ಎದುರಿರುವ ಮೂಷಕನ ಕಿವಿಯಲ್ಲಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿದರೆ ಅದು ಈಡೇರುತ್ತದೆ ಎಂಬ ಪ್ರತೀತಿಯೂ ಹಲವು ವರ್ಷಗಳಿಂದ ಬೆಳೆದು ಬಂದಿದೆ. ದುರ್ಗದ ಬಯಲಿನಲ್ಲಿ ಜೈಪುರ ಅರಮನೆಯ ಮಾದರಿಯಲ್ಲಿ ಪೆಂಡಾಲ್ ಹಾಕಲಾಗಿದ್ದು, ಜನರಿಗೆ ಜೈಪುರ ಪ್ಯಾಲೇಸ್ ಅನುಭವ ನೀಡಲು ತಯಾರಿ ಭರದಿಂದ ಸಾಗಿವೆ.

ವಿವಿಧ ಬಡಾವಣೆಗಳಲ್ಲಿ 1000ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿವೆ. ದಾಜಿಬಾನ್ ಪೇಟೆಯ ಹುಬ್ಬಳ್ಳಿ ಕಾ ರಾಜಾ' ಹಾಗೂ ಮರಾಠಾ ಗಲ್ಲಿಯಲ್ಲಿ ಪ್ರತಿಷ್ಠಾಪನೆಯಾಗುವಹುಬ್ಬಳ್ಳಿ ಕಾ ಮಹಾರಾಜಾ’ ಲಕ್ಷಾಂತರ ಜನರನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ. ಇಡೀ ಹುಬ್ಬಳ್ಳಿಯಲ್ಲೇ ಅತ್ಯಂತ ದೊಡ್ಡ ಗಣೇಶ ವಿಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ಕಾ ಮಹಾರಾಜಾ' ಮೂರ್ತಿ 25 ಅಡಿ ಎತ್ತರವಿದ್ದರೆ,ಹುಬ್ಬಳ್ಳಿ ಕಾ ರಾಜಾ’ ಮೂರ್ತಿಯು 21 ಅಡಿ ಎತ್ತರ ಹೊಂದಿದೆ.

ರಾಣಿ ಚನ್ನಮ್ಮ ಮೈದಾನದಲ್ಲಿ (ಈದ್ಗಾ) ಕೃಷ್ಣ: ಸತತ ನಾಲ್ಕನೇ ಬಾರಿಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ಇರುವ ಮಹಾನಗರ ಪಾಲಿಕೆಯ ರಾಣಿ ಚನ್ನಮ್ಮ ಮೈದಾನದಲ್ಲಿ (ಈದ್ಗಾ) ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪಾಲಿಕೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಸುಮಾರು 6 ಅಡಿ ಎತ್ತರದ ಶ್ರೀಕೃಷ್ಣ ವೇಷಧಾರಿ ಗಣೇಶ ಈ ಬಾರಿ ಭಕ್ತರ ಗಮನ ಸೆಳೆಯಲಿದ್ದಾನೆ. 2022ಕ್ಕೆ ಸಿಂಹಾಸನಾರೂಢ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು. 2023ಕ್ಕೆ ವರದಹಸ್ತ ಗಣೇಶ ವಿಗ್ರಹ, 2024ಕ್ಕೆ ಶ್ರೀರಾಮನ ರೂಪದಲ್ಲಿನ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು.

NO COMMENTS

LEAVE A REPLY

Please enter your comment!
Please enter your name here

Exit mobile version