ಹುಬ್ಬಳ್ಳಿ: ಧರ್ಮಸ್ಥಳಕ್ಕೆ ಮಸಿ ಬಳಿದ ಬಳಿಕ ಆರೋಪಿ ಬಂಧಿಸೋ ನಾಟಕ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಚಾಟಿ ಬೀಸಿದ್ದಾರೆ. ಷಡ್ಯಂತ್ರದ ರೂವರಿಗಳಿಗೆ ತಕ್ಕ ಶಾಸ್ತಿ ಯಾವತ್ತು? ಎಂದು ಅವರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
“ಧರ್ಮಸ್ಥಳ ಪ್ರಕರಣದಲ್ಲಿ ಪವಿತ್ರ ಕ್ಷೇತ್ರಕ್ಕೆ ಮಸಿ ಬಳಿದ ಬಳಿಕ ಸರ್ಕಾರ ಆರೋಪಿಗಳನ್ನು ಬಂಧಿಸುವ ನಾಟಕವಾಡಿದೆ. ಈ ಪ್ರಕರಣದಲ್ಲಿ ಸರ್ಕಾರ ಆರಂಭದಲ್ಲೇ ಎಡವಿದೆ. ಹಾಗಾಗಿ ಇಷ್ಟೆಲ್ಲಾ ರಾದ್ಧಾಂತವಾಗಿದೆ. ಇದಕ್ಕೆಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಹೊರಬೇಕು” ಎಂದರು.
“ಜನರ ಧಾರ್ಮಿಕ ನಂಬಿಕೆಯ, ಪವಿತ್ರ ಕ್ಷೇತ್ರದ ಹೆಸರು ಹಾಳು ಮಾಡಿದ ಮೇಲೆ ಸರ್ಕಾರ ಆರೋಪಿಗಳನ್ನು ಬಂಧಿಸುವ ನಾಟಕವಾಡುತ್ತಿದೆ. ಸರ್ಕಾರದ ನಡೆಯಿಂದ ಸರ್ವ ಸಮುದಾಯದವರಿಗೂ ನೋವಾಗಿದೆ. ಅಸಂಖ್ಯಾತ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ” ಎಂದು ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದರು.
“ಇದೊಂದು ಪ್ರಾಯೋಜಿತ ದಾಳಿ. ಧರ್ಮಸ್ಥಳದಲ್ಲಿನ ಈ ಪ್ರಹಸನ
ಹಿಂದೂ ಧಾರ್ಮಿಕ ನಂಬಿಕೆ ಮೇಲೆ ನಡೆದ ಪ್ರಾಯೋಜಿತ ದಾಳಿ ಎಂಬುದೀಗ ಬಹಿರಂಗಗೊಂಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ಧಾರ್ಮಿಕತೆ ಮೇಲೆ ದಾಳಿ ನಡೆಸಿ, ಪುರಾತನ, ಪ್ರಸಿದ್ಧ ಹಿಂದೂ ದೇವಾಲಯದ ವಿರುದ್ಧ ಇಲ್ಲ-ಸಲ್ಲದ ಷಡ್ಯಂತ್ರದ ಟೂಲ್‌ಕಿಟ್ ಬಳಸಿಕೊಂಡಿತು” ಎಂದು ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.
“ಕಾಂಗ್ರೆಸ್ ಸರ್ಕಾರ, ಧರ್ಮಸ್ಥಳ ವಿಚಾರದಲ್ಲಿ ಹಿನ್ನೆಲೆ-ಮುನ್ನೆಲೆ ಯೋಚಿಸದೆ, ಸೂಕ್ತ ಪರಿಶೀಲನೆ ಮಾಡದೇ ಮುಸುಕುಧಾರಿ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿ ತನ್ನ ನಿಜ ಸ್ವರೂಪವನ್ನು ಪ್ರದರ್ಶಿಸಿದ್ದು, ಐತಿಹಾಸಿಕ ದುರಂತ” ಎಂದು ಖಂಡಿಸಿದ್ದಾರೆ.
“ಮುಖವಾಡಿಗನಿಂದ ಹಿಡಿದು ಪ್ರಾಯೋಜಿತ ಯೂಟ್ಯೂಬರ್‌ಗಳವರೆಗೆ ಯಾವುದೇ ಸತ್ಯಾಸತ್ಯತೆ ಪರಿಶೀಲಿಸದೆ ಸರ್ಕಾರವೇ ಧರ್ಮಸ್ಥಳದ ಪವಿತ್ರ್ಯವನ್ನು ಹಾಳುಗೆಡವಿದೆ. ಧಾರ್ಮಿಕ ನಂಬಿಕೆ ವೈಯಕ್ತಿಕವಾದರೂ ಆಡಳಿತದಲ್ಲಿ ಸಮತೋಲನ ಪ್ರಾಮುಖ್ಯವಾಗುತ್ತದೆ” ಎಂದರು.
ಅಲ್ಲದೇ, ಧರ್ಮಸ್ಥಳ ಪ್ರಹಸನದಲ್ಲಿ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರ್ಕಾರಕ್ಕೆ ಕೆಲ ಪ್ರಮುಖ ಪ್ರಶ್ನೆಗಳನ್ನೂ ಮುಂದಿಟ್ಟು ಉತ್ತರಕ್ಕೆ ಒತ್ತಾಯಿಸಿದ್ದಾರೆ.
- ಕಾಣದ ಕೈಗಳಿಂದ ಉದ್ದೇಶಪೂರ್ವಕ ಪ್ರಯತ್ನ ನಡೆದಿದೆಯಾ? ಯಾರ ಆಜ್ಞೆಯ ಮೇರೆಗೆ ಇಂತಹ ದುಸ್ಸಾಹಸಕ್ಕೆ ಕೈಹಾಕಲಾಯಿತು?
- ಪ್ರಕರಣದಲ್ಲಿ ಸತ್ಯಾಸತ್ಯಗಳು ಕಣ್ಣೆದುರೇ ಇದ್ದರೂ, ಕಾಂಗ್ರೆಸ್ ಸರ್ಕಾರ ಏಕೆ ಮೌನವಹಿಸಿದೆ?
“ಷಡ್ಯಂತ್ರ ನಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ಹಾಗಿದ್ದ ಮೇಲೆ ಇಡೀ ನಾಟಕದ ರೂವಾರಿಗೆ ಯಾವಾಗ ತಕ್ಕ ಶಾಸ್ತಿ ಮಾಡೋದು? ಹಾಗೂ ಹಣಕಾಸಿನ ವ್ಯವಹಾರದ ಮೂಲವನ್ನು ಯಾವಾಗ ಬಹಿರಂಗಪಡಿಸುತ್ತಿರಿ?” ಎಂದು ಪ್ರಶ್ನಿಸಿ, “ರಾಜ್ಯ ಸರ್ಕಾರ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ಹೊಣೆಗಾರಿಕೆ ಹೊರಬೇಕು” ಎಂದು ಒತ್ತಾಯಿಸಿದರು.