ಅಂಕಣ ಬರಹ: ನೇಪಥ್ಯಕ್ಕೆ ಡೀಸೆಲ್ ಜನರೇಟರ್

0
55

ಸೋಮವಾರದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಎಚ್‌.ಆರ್‌. ಶ್ರೀಶ ಅವರ ಅಂಕಣ ಬರಹ

ಈಗ ಎಲ್ಲ ಕಡೆ ಡೀಸೆಲ್ ಜನರೇಟರ್‌ಗೆ ಬದಲಾಗಿ ಸೋಲಾರ್‌ನಿಂದ ವಿದ್ಯುತ್ ಪಡೆದ ಬ್ಯಾಟರಿಗಳ ಬಳಕೆ ಅಧಿಕಗೊಳ್ಳುತ್ತಿದೆ. ಇದರಿಂದ ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಪ್ಪುತ್ತಿದೆ. ಸೋಲಾರ್ ಬ್ಯಾಟರಿಗೆ ಹೆಚ್ಚಿನ ಬಂಡವಾಳ ಬೇಕು. ನಂತರದ ವೆಚ್ಚ ಬಳಕ ಕಡಿಮೆ. ಡೀಸೆಲ್ ಜನರೇಟರ್‌ಗೆ ಮೂಲ ಬಂಡವಾಳ ಕಡಿಮೆ ಇದ್ದರೂ ನಿರ್ವಹಣ ವೆಚ್ಚ ಅಧಿಕ. ಸೋಲಾರ್ ಬ್ಯಾಟರಿಯಿಂದ ವಿದ್ಯುತ್ ಪಡೆಯಲು ಪ್ರತಿ ಯೂನಿಟ್‌ಗೆ 3 ರೂ. ಜನರೇಟರ್‌ನಿಂದ ಪಡೆಯಲು ಈಗ ಪ್ರತಿ ಯೂನಿಟ್‌ಗೆ 13 ರೂ. ತೆರಬೇಕು. ಹೀಗಾಗಿ ಡಿಜಿ ಮಾರುಕಟ್ಟೆ ಇಳಿಮುಖ ಕಂಡಿದೆ.

ದೇಶದಲ್ಲಿ ಜನರೇಟರ್ ಬಳಕೆಯಲ್ಲಿ ಬೆಂಗಳೂರು ನಗರ ಮೂರನೇ ಸ್ಥಾನದಲ್ಲಿದೆ. ಜನರೇಟರ್‌ಗಳಲ್ಲಿ 5 ಕೆವಿಎಯಿಂದ ಹಿಡಿದು 750 ಕೆವಿಗೆವರೆಗೂ ವಿವಿಧ ಶ್ರೇಣಿಗಳಿವೆ. ನಮ್ಮಲ್ಲಿ 76 ಕೆವಿಎಯಿಂದ ಹಿಡಿದು 375 ಕೆವಿಎ ಸಾಮರ್ಥ್ಯದ ಜನರೇಟರ್ ಬಳಕೆ ಹೆಚ್ಚು. ಇವುಗಳು ಇಂಗಾಲಾಮ್ ಸೇರಿದಂತೆ ಹಲವು ವಿಷಕಾರಿ ಅನಿಲಗಳನ್ನು ವಾತಾವರಣಕ್ಕೆ ಬಿಡುತ್ತದೆ. ಆದರೆ ಗದ್ದೆಗಳಲ್ಲಿ ಕೂಳೆ ಕಬ್ಬು ಮತ್ತು ಗೋಧಿ, ಬತ್ತವನ್ನು ಸುಡುವುದರಿಂದ ಆಗುವ ಪರಿಸರ ಮಾಲಿನ್ಯಕ್ಕೆ ಹೋಲಿಸಿದರೆ ಇದು ಕಡಿಮೆ ಎಂದೇ ಹೇಳಬಹುದು.

ಹಿಂದೆ ಜನರೇಟರ್ ಬಳಕೆ ಅಧಿಕಗೊಂಡಿತ್ತು ಈಗ ಇಳಿಮುಖಗೊಂಡಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ. ಐಟಿ ಬಿಟಿ ಕಂಪನಿಗಳು ಹಿಂದೆ ಜನರೇಟರ್ ವಿದ್ಯುತ್ ಮೇಲೆ ಅವಲಂಬಿತವಾಗಿದ್ದವು. ಈಗ ಆ ಕಂಪನಿಗಳು ಓಪನ್ ಅಕ್ಸೆಸ್‌ನಲ್ಲಿ ಸೋಲಾರ್ ವಿದ್ಯುತ್ ಖರೀದಿ ಮಾಡುತ್ತಿರುವುದರಿಂದ ಜನರೇಟರ್ ಅಗತ್ಯ ಇಲ್ಲ. ಹಿಂದೆ ಮದುವೆ, ಸಾರ್ವಜನಿಕ ಸಮಾರಂಭಗಳು, ಹಳ್ಳಿಯ ತೇರು, ರಥೋತ್ಸವಗಳಿಗೆ ಜನರೇಟರ್ ಬಳಕೆಯಾಗುತ್ತಿದ್ದವು. ಈಗ ಎಲ್ಲ ಬ್ಯಾಟರಿ ಚಾಲಿತ ಜನರೇಟರ್ ವಾಹನಗಳು ಬಳಕೆಗೆ ಬಂದಿವೆ. ಅದರಿಂದ ಪರಿಸರ ಮಾಲಿನ್ಯದ ಪ್ರಶ್ನೆ ಬರುವುದಿಲ್ಲ.

ಕೇಂದ್ರ ಸರ್ಕಾರ ಕೂಡ ಜನರೇಟರ್ ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಜಾರಿಗೆ ತಂದಿವೆ. ಜನರೇಟರ್ ಬಳಕೆಯಲ್ಲಿ ವಾಣಿಜ್ಯ ರಂಗ ಶೇ. 40, ಕೈಗಾರಿಕೆ ಶೇ. 25 ಮತ್ತು ಗೃಹಗಳು ಶೇ. 16ರಷ್ಟು ಪಾಲು ಪಡೆದುಕೊಂಡಿವೆ. ಹೀಗಾಗಿ ಈ ರಂಗದಲ್ಲಿ ಮಾತ್ರ ಪರಿಸರ ಮಾಲಿನ್ಯಕ್ಕೆ ಅವಕಾಶ ಇದೆ. ಇಲ್ಲೂ ಬ್ಯಾಟರಿ ದಾಸ್ತಾನು ಮಾಡಿದ ವಿದ್ಯುತ್ ಬಳಕೆ ಅಧಿಕಗೊಂಡಂತೆ ಜನರೇಟರ್‌ಗಳು ನೇಪಥ್ಯಕ್ಕೆ ಸರಿಯುವುದು ಖಚಿತ. ಇದಕ್ಕೆ ಹಲವು ವರ್ಷಗಳು ಹಿಡಿಯಬಹುದು ಅಷ್ಟೆ. ಈಗ ಜನಸಾಮಾನ್ಯರು ಪರಿಸರ ಮಾಲಿನ್ಯದ ಬಗ್ಗೆ ಜಾಗೃತಗೊಂಡಿರುವುದರಿಂದ ಜನರೇಟರ್ ಬಳಕೆಯನ್ನು ಒಪ್ಪುತ್ತಿಲ್ಲ.

ರೈಲ್ವೆಯಲ್ಲಿ ಡೀಸೆಲ್ ಬಳಕೆ ಇಳಿಮುಖಗೊಂಡಿದ್ದು, ಸೋಲಾರ್ ಬಳಕೆಗೆ ಆದ್ಯತೆ ನೀಡಲಾಗಿದೆ. ಸೋಲಾರ್ ಬಳಕೆಗೆ ಬಂಡವಾಳ ಹೂಡಿಕೆ ಹೆಚ್ಚು ಬೇಕು. 25 ಕೆವಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಬೇಕು ಎಂದರೆ ಭೂಮಿಯ ದರ ಹೊರತುಪಡಿಸಿ 20 ಲಕ್ಷ ರೂ. ಬೇಕು. ಇದು 15 ವರ್ಷ ಬಾಳಿಕೆ ಬರುತ್ತದೆ. ನಿರ್ವಹಣಾ ವೆಚ್ಚ ಒಟ್ಟಾರೆ 5 ಲಕ್ಷ ರೂ. ಆಗುತ್ತದೆ. ಈ 25 ಲಕ್ಷರೂಗಳನ್ನು 3 ವರ್ಷಗಳಲ್ಲಿ ಹಿಂದಕ್ಕೆ ಪಡೆಯಬಹುದು. ಪ್ರತಿ ಯೂನಿಟ್ ದರ 5 ರೂ.ಗಳಿಗಿಂತ ಕಡಿಮೆ. ಅದರಿಂದ ಕೇಂದ್ರ ಸರ್ಕಾರ 5-75 ಕೆವಿಎ ವರೆಗೆ ಜನರೇಟರ್ ಹೊಂದಿರುವವರಿಗೆ ಬದಲಿಸಿಕೊಳ್ಳಲು ನೆರವು ನೀಡಿದರೆ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಬಹುದು.

ಈಗಲೂ ನೀರಾವರಿಯಲ್ಲಿ ಡೀಸೆಲ್ ಪಂಪ್‌ಗಳ ಬಳಕೆ ಇದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದರೆ ಸೋಲಾರ್ ಪಂಪ್‌ಸೆಟ್‌ಗೆ ಹೆಚ್ಚಿನ ನೆರವು ನೀಡಬೇಕು. ಅದರಲ್ಲೂ ನದಿಗಳ ಇಕ್ಕೆಲಗಳಲ್ಲಿರುವ ಭೂಮಿಗೆ ನೇರವಾಗಿ ಸೋಲಾರ್ ಪಂಪ್ ಅಳವಡಿಸಲು ಅವಕಾಶ ನೀಡಿದರೆ ಹೆಚ್ಚು ವಿದ್ಯುತ್ ಉಳಿತಾಯ ಮಾಡಬಹುದು. ಇದರಿಂದ ರೈತರಿಗೆ ಕಡಿಮೆ ವೆಚ್ಚದಲ್ಲಿ ನೀರು ಲಭಿಸುತ್ತದೆ. ನೈಸರ್ಗಿಕವಾಗಿ ಇರುವ ಬೆಟ್ಟಗುಡ್ಡಗಳಲ್ಲಿ ಟ್ಯಾಂಕ್ ನಿರ್ಮಿಸಿ ಅಲ್ಲಿಗೆ ಸೋಲಾರ್ ಮೂಲಕ ನೀರನ್ನು ಪಂಪ್ ಮಾಡಿದರೆ ಗುರುತ್ವಾಕರ್ಷಣೆಯ ಮೇಲೆ ನೀರು ಕೆಳಿಗಿನ ಬಯಲು ಪ್ರದೇಶಕ್ಕೆ ಹರಿದು ಹೋಗುತ್ತದೆ.

ಈಗ ಹಗಲು ಸೋಲಾರ್ ವಿದ್ಯುತ್ ವಿಪುಲವಾಗಿ ಲಭಿಸುತ್ತಿರುವುದರಿಂದ ಏತ ನೀರಾವರಿಗೆ ಸೋಲಾರ್ ವಿದ್ಯುತ್ ಅಳವಡಿಕೆ ತುರ್ತಾಗಿ ನಡೆಯಬೇಕು. ಜನರೇಟರ್ ಬಳಕೆ ಕಡಿಮೆ ಮಾಡಿದಲ್ಲಿ ರೈತರ ಹಣ ಉಳಿಯುತ್ತದೆ. ಡೀಸೆಲ್ ಜನರೇಟರ್ ಬಳಕೆ ದುಬಾರಿಯಾಗಿರುವುದರಿಂದ ಬಡ ರೈತರು ಯಾರೂ ಇದನ್ನು ಬಳಸಲು ಬಯಸುವುದಿಲ್ಲ. ಶ್ರೀಮಂತ ರೈತರು ಅದರಲ್ಲೂ ವಾಣಿಜ್ಯ ಬೆಳೆ ಬೆಳೆಯುತ್ತಿರುವವರು ಮಾತ್ರ ಡೀಸೆಲ್ ಜನರೇಟರ್ ಬಳಸುತ್ತಾರೆ. ಇದರ ವೆಚ್ಚ ಪ್ರತಿ ಯೂನಿಟ್‌ಗೆ 13 ರೂ. ಸಣ್ಣ ರೈತರಿಗೆ ಇದು ನಿಲುಕದ ವೆಚ್ಚ. ಅವರು ಸರ್ಕಾರ ಕೊಡುವ ಉಚಿತ ವಿದ್ಯುತ್‌ಗೆ ಕಾಯಲೇಬೇಕು.

ಇವರಿಗೆ ಸಣ್ಣ ಪ್ರಮಾಣದಲ್ಲಾದರೂ ಸರ್ಕಾರ ಸೋಲಾರ್ ವಿದ್ಯುತ್ ಒದಗಿಸಿದದರೆ ಅವರು ಕೃಷಿಯನ್ನು ನಂಬಿ ಜೀವನ ಮಾಡಬಹುದು. ಈಗ ಆ ಪರಿಸ್ಥಿತಿ ಇಲ್ಲ. ಭೂಸ್ವಾಧೀನ ನಿಯಮಗಳು ಬಡವರಿಗೆ ಮಾತ್ರ ಅನ್ವಯವಾಗಿವೆ. ಶ್ರೀಮಂತರು ಈಗಲೂ 100-200 ಎಕರೆ ಭೂಮಿಯನ್ನು ಬೇರೆಯವರ ಹೆಸರಿನಲ್ಲಿ ಹೊಂದಿರುವುದು ಆಶ್ಚರ್ಯದ ಸಂಗತಿ ಏನಲ್ಲ. ಇಂಥ ಶ್ರೀಮಂತ ರೈತರು ಈಗಲೂ ಡೀಸೆಲ್ ಪಂಪ್‌ಸೆಟ್ ಬಳಸಿ ನೀರು ಬಳಸಿಕೊಳ್ಳುತ್ತಾರೆ. ಬಡ ರೈತರಿಗೆ ಇದು ಕನಸಿನ ಮಾತು. ಅವರಿಗೆ ವಿಪುಲವಾಗಿ ಲಭಿಸುವ ಸೋಲಾರ್ ವಿದ್ಯುತ್ ಕೈಗೆ ಎಟಕುವಂತೆ ಮಾಡಿದರೆ ಕೃಷಿ ಲಾಭದಾಯಕ ವೃತ್ತಿಯಾಗುತ್ತದೆ.

ನಗರಗಳಲ್ಲಿ ಉಳಿದುಕೊಂಡಿರುವ ಜನರೇಟರ್ ಬಳಕೆ ಕಾಲಕ್ರಮೇಣ ಇಳಿಮುಖಗೊಳ್ಳುತ್ತದೆ. ಕೈಗಾರಿಕೆಗಳು ತಮ್ಮದೇ ಸೋಲಾರ್ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಿಕೊಂಡು ನೇರವಾಗಿ ತಮ್ಮ ಬಳಕೆಗೆ ಪಡೆಯುವುದು ಅಧಿಕಗೊಂಡಿದೆ. ಓಪನ್ ಅಕ್ಸೆಸ್ ಮೇಲಿದ್ದ ಎಲ್ಲ ಸುಂಕವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿರುವುದು ಸೋಲಾರ್ ಬಳಕೆಗೆ ಇಂಬು ದೊರಕಿದೆ. ಜನರೇಟರ್ ಬಳಕೆಯಿಂದ ಉದ್ಯಮಿಗಳು ಸೋಲಾರ್ ಬಳಕೆಗೆ ಪರಿವರ್ತನೆಗೊಳ್ಳುತ್ತಿದ್ದಾರೆ. ಒಂದು ವೇಳೆ ಬಂಜರುಭೂಮಿ ಹೊಂದಿರುವ ರೈತನಿಗೆ ಉದ್ಯಮಿ ನೆರವು ನೀಡಿ ಅವನಿಂದ ಸೋಲಾರ್ ವಿದ್ಯುತ್ ಖರೀದಿ ಮಾಡಿದರೆ ರೈತ- ಉದ್ಯಮಿ ಇಬ್ಬರೂ ಸಹಬಾಳ್ವೆ ಕಂಡು ಕೊಳ್ಳಬಹುದು.

ಈಗಿರುವ ಸಂಘರ್ಷವೂ ತಪ್ಪುತ್ತದೆ. ಅದೇರೀತಿ ಕೈಗಾರಿಕಾ ಎಸ್ಟೇಟ್‌ಗಳಲ್ಲಿ ಸ್ವಲ್ಪ ಭಾಗ ಸೋಲಾರ್ ವಿದ್ಯುತ್ ಉತ್ಪಾದನೆ ಭೂಮಿ ಮೀಸಲಿಟ್ಟಲ್ಲಿ ಕಂಪನಿಗ ವಿದ್ಯುತ್‌ಗೆ ಪರ್ಯಾಯವಾಗಿ ಸೋಲಾರ್ ಬಳಸಬಹುದು. ಇದರಿಂದ ಸ್ವಾವಲಂಬಿ ಜೀವನಕ್ಕೆ ಅನುಕೂಲವಾಗುತ್ತದೆ. ಅದೇರೀತಿ ಕೈಗಾರಿಕೆಗಳು ಸಿಎಸ್‌ಆರ್ ಫಂಡ್‌ನಲ್ಲಿ ಗ್ರಾಮಗಳ ಮನೆಗಳಿಗೆ ಸೋಲಾರ್ ವಿದ್ಯುತ್ ನೀಡಿದರೆ ಕ್ರಾಂತಿಕಾರಿ ಬದಲಾವಣೆ ತರಬಹುದು. ರೈತ – ಉದ್ಯಮಿ ಬೇರೆ ಬೇರೆ ಅಲ್ಲ ಎಂಬ ಭಾವನೆ ಮೂಡಬೇಕು. ಅದಕ್ಕೆ ಸೋಲಾರ್ ವಿದ್ಯುತ್ ಸಹಕಾರಿಯಾಗಲಿದೆ. ಪರಿಶುದ್ಧ ವಿದ್ಯುತ್ ಪರಿಶುದ್ಧ ಜೀವನಕ್ಕೆ ಹಾದಿ ಮಾಡಿಕೊಡಲಿದೆ.

ಸೂರ್ಯ ರೈತ ಬಂಧು ಆಗಿರುವ ಹಾಗೆ ಉದ್ಯಮಿಗೂ ಭಾಗ್ಯದ ಬಾಗಿಲು ತೆರೆಯಲಿದ್ದಾನೆ. ಈಗ ರಾಜ್ಯದಲ್ಲಿ ಅತಿ ಹೆಚ್ಚು ಸೌರ ವಿದ್ಯುತ್ ಲಭ್ಯ.ಅದನ್ನು ಪರಿಪೂರ್ಣವಾಗಿ ಬಳಸಿಕೊಳ್ಳಲು ಬಂಡವಾಳ ಹೂಡುವುದು ಅಗತ್ಯ. ಹಗಲು ಸೋಲಾರ್ ಎಲ್ಲ ಚಟುವಟಿಕೆಗಳಿಗೆ ಆಧಾರ. ಕೈಗಾರಿಕೆಗಳಿಗೆ ಯಂತ್ರಗಳು ಕಾರ್ಯ ಆರಂಭಿಸಲು ಹೆಚ್ಚಿನ ವಿದ್ಯುತ್ ಬೇಕು. ಅದನ್ನು ಸೋಲಾರ್ ಕೊಡಬೇಕು ಎಂದರೆ ಕೆಲವು ಬದಲಾವಣೆ ತರಬೇಕು. ಅದಕ್ಕೆ ಹೆಚ್ಚಿನ ಬಂಡವಾಳ ಹೂಡುವುದು ಅಗತ್ಯ. ಒಮ್ಮೆ ಯಂತ್ರ ಕಾರ್ಯಾರಂಭ ಮಾಡಿದರೆ ಆಮೇಲೆ ಬಳಸುವ ವಿದ್ಯುತ್‌ಗೆ ಕೊರತೆ ಇರುವುದಿಲ್ಲ. ಜನರೇಟರ್ ವಿದ್ಯುತ್ ಇತಿಹಾಸದ ಪುಟ ಸೇರುವ ಕಾಲ ದೂರವಿಲ್ಲ.

Previous articleಶಿವಮೊಗ್ಗ: ಗಣೇಶ ಚತುರ್ಥಿ ಸಡಗರ, ಸಂಭ್ರಮ, ಭದ್ರತಾ ವ್ಯವಸ್ಥೆ
Next articleಮುಧೋಳ್‌ಗೆ ಮತ್ತಷ್ಟು ಬಲ: ವಿಕ್ರಮ್ ಜೊತೆ ಕೈ ಜೋಡಿಸಿದ ವಿಜಯ್

LEAVE A REPLY

Please enter your comment!
Please enter your name here