Home ಅಂಕಣ ಅಂಕಣ ಬರಹ: ರ‍್ಯಾಂಕುಗಳ ಧಾವಂತದಲ್ಲಿ ಮಕ್ಕಳ ಬದುಕು ಕೊನೆಗೊಳ್ಳುವುದು ಬೇಡ

ಅಂಕಣ ಬರಹ: ರ‍್ಯಾಂಕುಗಳ ಧಾವಂತದಲ್ಲಿ ಮಕ್ಕಳ ಬದುಕು ಕೊನೆಗೊಳ್ಳುವುದು ಬೇಡ

0

ಸೋಮವಾರದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಕಾರ್ತಿಕ ಎಸ್ ಬಾಪಟ್ ಅವರ ಅಂಕಣ

ಎಲ್ಲ ತಂದೆ ತಾಯಂದಿರಂತೆ ಸುಖದೇಬ್ ಸಹ ಮಗಳು ಉತ್ತಮ ವಿದ್ಯಾಭ್ಯಾಸ ಪಡೆದು ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳಲಿ ಎಂದು ಬಯಸಿದ್ದರು, ಪೋಷಕರ ಮಹಾದಾಸೆಯಂತೆ ಸುಖದೇಬ್ ಮಗಳು ಕೂಡ ಒಂದು ದಿವಸ ವೈದ್ಯಳಾಗಬೇಕೆಂಬ ಹೆಬ್ಬಯಕೆಯೊಂದಿಗೆ ಬಂಗಾಳದಿಂದ ವಿಶಾಖಪಟ್ಟಣಕ್ಕೆ ನಡೆದು ಬಂದಿದ್ದಳು. ಆದರೆ ವಿಧಿ ಬರಹ ನೂರು ತರಹ ಎಂಬಂತೆ ಬರೋಬ್ಬರಿ ಎರಡು ವರುಷಗಳ ಹಿಂದೆ ವಿಶಾಖಪಟ್ಟಣದ ಆಸ್ಪತ್ರೆಯಿಂದ ಅವಳ ತಂದೆ ದೇಬ್ ಸಾಹೇಬರಿಗೆ ಮಗಳು ಹಾಸ್ಟೆಲಿನ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಅವಳ ಪರಿಸ್ಥಿತಿ ಚಿಂತಾಜನಕವಾಗಿದೆ ಎಂಬ ವಾರ್ತೆ ಬರಸಿಡಿಲಿನಂತೆ ಬಂದೆರಗಿತ್ತು. ಸುಖದೇಬ್ ವಿಶಾಖಪಟ್ಟಣದ ಆಸ್ಪತ್ರೆಯಲ್ಲಿ ಮಗಳನ್ನು ನೋಡಲು ಬಂದಾಗ ಆಕೆ ಜೀವನ್ಮರಣದ ಹೋರಾಟದಲ್ಲಿದ್ದಳು, ಅಷ್ಟರ ಮಟ್ಟಿಗೆ ದೇಬ್ ಸಾಹೇಬರಲ್ಲೊಂದು ಪುಟ್ಟ ಭರವಸೆ ಇನ್ನು ಜೀವಂತವಾಗಿಯೇ ಇತ್ತು, ಆದರೆ ಆ ಭರವಸೆ ಒಂದೇ ದಿನಕ್ಕೆ ಛಿದ್ರವಾಯಿತು. ಮಗಳ ಡಾಕ್ಟಾರಿಕೆ ಕನಸು ಕನಸಾಗಿಯೇ ಉಳಿದಿತ್ತು.

ಈ ಸಾವನ್ನು ಕೆಲವರು ಆತ್ಮಹತ್ಯೆ ಅಂದರು. ಕೆಲವರು ಆಯ ತಪ್ಪಿ ಬಿದ್ದಿರಬಹುದು ಎಂದರು. ದೇಬ್ ಸಾಹೇಬರು ಶೋಕದ ಮಡುವಲ್ಲಿದ್ದರು, ಬೇರೆಯವರಾಗಿದ್ದರೆ ಮಗಳ ನೆನಪಿನಲ್ಲಿ ದಿಕ್ಕೇ ತೋಚದಂತಾಗುತ್ತಿದ್ದರೋ ಏನೋ ಆದರೆ ದೇಬ್ ಸಾಹೇಬರಿಗೆ ಮಗಳು ಆತ್ಮಹತ್ಯೆ ಮಾಡಿಕೊಂಡಿರಲಾರಳು ಎಂದು ಅವರ ಅಂತರಂಗ ಆಗಾಗ ಹೇಳುತ್ತಿತ್ತು. ಆದರೆ ಪೊಲೀಸರು ಮಾತ್ರ ಯಾವುದೇ ರೀತಿಯ ಸುಸೈಡ್ ನೋಟ್ ಇಲ್ಲದಿದ್ದರೂ ಇದನ್ನು ಸೆಕ್ಷನ್ 174 ಅಡಿಯಲ್ಲಿ ಆತ್ಮಹತ್ಯೆ ಎಂದು ಪರಿಗಣಿಸಿತ್ತು.

ಆದರೆ ದೇಬ್ ಇದನ್ನು ಒಪ್ಪಲು ತಯಾರಿದ್ದಿಲ್ಲ ಅದಕ್ಕೆ ಪೂರಕ ಎಂಬಂತೆ ಹಾಸ್ಟೆಲಿನ ಸಿಸಿಟಿವಿ ಫೂಟೇಜಿನಲ್ಲಿ ಮಹಡಿಯ ಮೇಲೆ ನಡೆದು ಹೋದ ವಿದ್ಯಾರ್ಥಿನಿ ಹಾಕಿ ಕೊಂಡಿದ್ದ ಬಟ್ಟೆಗೂ ಕೆಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಗಳು ಹಾಕಿಕೊಂಡಿದ್ದ ಬಟ್ಟೆಗೂ ವ್ಯತ್ಯಾಸವಿತ್ತು. ಆಸ್ಪತ್ರೆಯಲ್ಲಿ ಆಕೆಗೆ ಪ್ರಜ್ಞೆ ಇದ್ದಾಗಲೂ ಕೂಡ ಆಕೆಯ ಹೇಳಿಕೆಯನ್ನು ದಾಖಲಿಸಿರಲಿಲ್ಲ. ಆಂಧ್ರ ಹೈಕೋರ್ಟ್ಗೆ ಅನೇಕ ಅರ್ಜಿಗಳನ್ನು ಹಾಕಿ, ಪತ್ರಗಳನ್ನು ಬರೆದರು. ನಾನು ಬಂಗಾಳದವನು ಬಂಗಾಲ ಹಾಗೂ ಆಂಧ್ರ ಎರಡು ಬೇರೆ ಬೇರೆ ರಾಜ್ಯಗಳು. ಆದ್ದರಿಂದ ಅಡ್ಡಾಡುವುದು ಕಷ್ಟ ಈ ತನಿಖೆಯನ್ನು ಸಿಬಿಐಗೆ ಕೊಟ್ಟು ಬಿಡಿ ಎಂದು ಪರಿಪರಿಯಾಗಿ ಬೇಡಿಕೊಂಡರು, ಆದರೆ ಆಂಧ್ರ ಹೈಕೋರ್ಟ್ ಒಪ್ಪಲಿಲ್ಲ ದೇಬ್ ಬಾಬು ವಿಧಿಯಿಲ್ಲದೇ ಸುಪ್ರೀಂ ಕದ ತಟ್ಟಿದ್ದರು.

ದೇಬ್ ಸಾಹೇಬರ ಹೋರಾಟ ವ್ಯರ್ಥವಾಗಲಿಲ್ಲ, ಕಳೆದ ವಾರವಷ್ಟೇ ಸುಪ್ರೀಂಕೋರ್ಟ್ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಆದೇಶ ನೀಡಿದೆ. ಆ ಮೂಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ 17 ವರ್ಷದ ನೀಟ್ ಆಕಾಂಕ್ಷಿಯ ತಂದೆ ಸುಖದೇಬ್ ಸಹ ಅವರ ಮನವಿಯನ್ನು ಮನ್ನಿಸಿದರೆ ಈ ತೀರ್ಪಿನೊಂದಿಗೆ ಸುಪ್ರೀಂ ಕೋರ್ಟ್ ದೇಶದ ಎಲ್ಲ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಕೆಲವು ಮಾರ್ಗ ಸೂಚಿಗಳನ್ನು ಪಾಲಿಸುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕೆಂದು ತಾಕೀತು ಮಾಡಿದೆ.

ಈ ಆದೇಶದ ಪ್ರಕಾರ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಯಾವುದೇ ಶೈಕ್ಷಣಿಕ ಸಂಸ್ಥೆಯಿರಲಿ ಮಾನಸಿಕ ಆರೋಗ್ಯ ಸಲಹೆಗಾರರನ್ನು ನೇಮಿಸುವುದು, ವೃತ್ತಿ ಸಮಾಲೋಚನೆಯನ್ನು ಪ್ರೋತ್ಸಾಹಿಸುವುದು, ಹೀಗೆ ಮಕ್ಕಳ ಮಾನಸಿಕ ಆರೋಗ್ಯಕ್ಕೆ ನೀಡಬೇಕಾದ ಮಹತ್ವವನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿ ಮಾರ್ಗಸೂಚಿಯನ್ನು ಪಾಲಿಸುವಂತೆ ನಿರ್ದೇಶಿಸಿರುವುದು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕೆ ನೀಡಬೇಕಾದ ಮಹತ್ವವನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟಂತಿದೆ. ಹೀಗಾಗಿ ಈ ತೀರ್ಪು ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ನೈತಿಕ ದಿಕ್ಸೂಚಿಯಿದ್ದಂತೆ ಎಂದರೆ ತಪಲ್ಲ.

ನಾವೆಲ್ಲರೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಒಂದು ರೀತಿಯ ಗೀಳಿಗೆ ಬಿದ್ದವರಂತೆ ಕಂಡು ಬರುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ರಾಜಸ್ತಾನದ ಕೋಟಾ. ನೀಟ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ರಾಜಧಾನಿ ಎಂದು ಕರೆಸಿಕೊಳ್ಳುವ ಕೋಟಾ 2023 ವರ್ಷವೊಂದರಲ್ಲಿಯೇ 28 ವಿದ್ಯಾರ್ಥಿಗಳ ಆತ್ಮಹತ್ಯೆಗೆ ಸಾಕ್ಷಿಯಾಗಿದೆ. ಈ ಸಾವುಗಳಲ್ಲಿ ಹಲವು ಸಾವುಗಳು ಪೋಷಕರ ಒತ್ತಡ, ಪರೀಕ್ಷಾ ವಿಫಲತೆ, ಒಂಟಿತನ ಮತ್ತು ಮಾನಸಿಕ ಆರೋಗ್ಯ ಕೊರತೆಯಿಂದಾಗಿ ಸಂಭವಿಸಿದಂತಹವುಗಳು. ಈ ನಿಟ್ಟಿನಲ್ಲಿ ಸುಪ್ರೀಂ ತೀರ್ಪು ನಿಜಕ್ಕೂ ಎಲ್ಲರ ಕಣ್ ತೆರೆಯುವಂತೆ ಮಾಡಿದೆ.

ಮಾನಸಿಕ ಆರೋಗ್ಯವನ್ನು ಕಾಪಿಟ್ಟುಕೊಳ್ಳುವುದು ಮೂಲಭೂತ ಮಾನವ ಹಕ್ಕು ಎಂದು ಮರೆಯುವಂತಿಲ್ಲ ಎಂಬುದು ಸ್ಪಷ್ಟ. ಅಲ್ಲದೆ ಈ ತೀರ್ಪು ಕೇವಲ ಕಾನೂನಿನ ಔಪಚಾರಿಕತೆಯ ತೀರ್ಪಾಗಿ ಕಂಡು ಬರುತ್ತಿಲ್ಲ. ಬದಲಾದ ವ್ಯವಸ್ಥೆಯಲ್ಲಿ ಶಿಕ್ಷಣ ವ್ಯವಸ್ಥೆ ಹೇಗೆ ತನ್ನ ಮೂಲ ಧ್ಯೇಯವನ್ನೇ ಮರೆತಿದೆ ಎಂದು ಹೇಳುವಂತಿದೆ. ಈಗಲಾದರೂ ಶಿಕ್ಷಣ ಸಂಸ್ಥೆಗಳು ಈ ಹಿಂದೆ ಇದ್ದ ಸಾಂಪ್ರದಾಯಿಕ ಗುರುಕುಲ ವ್ಯವಸ್ಥೆಯ ಕಡೆಗೆ ಗಮನ ಹರಿಸಬೇಕು, ಗುರುಕುಲ ವ್ಯವಸ್ಥೆಗಳು ನ್ಯೂನತೆಗಳಿಂದ ಮುಕ್ತವಾಗಿದ್ದವು ಎಂದಲ್ಲ. ಆದರೆ ಅಂದಿನ ಕಲಿಕೆಯ ಧ್ಯೇಯ ಕೇವಲ ಸಾಕ್ಷರತೆ ಅಥವಾ ನೌಕರಿ ಗಿಟ್ಟಿಸುವುದು ಆಗಿರದೆ ಸಮಗ್ರ ಕಲಿಕೆಗೆ ಒತ್ತು ನೀಡುವುದಾಗಿತ್ತು.

ಅಂದರೆ ಅಂದಿನ ಶಿಕ್ಷಣ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಪೂರಕವಾಗಿರುತ್ತಿತ್ತು. ಕೇವಲ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಆದವರಷ್ಟೇ ಅಲ್ಲ ಪ್ರತಿಯೊಬ್ಬ ವಿದ್ಯಾರ್ಥಿಯೂ ಮುಖ್ಯ ಅಂದರೆ ಒಂದು ದೇಶ ಅಥವಾ ದೇಶದ ಶಿಕ್ಷಣ ವ್ಯವಸ್ಥೆಯ ಸಾರ್ಥಕತೆ ಅಡಗಿರುವುದು ಎಷ್ಟು ಎಂಜಿನಿಯರ್‌ಗಳು ಅಥವಾ ವೈದ್ಯರನ್ನು ಉತ್ಪಾದಿಸುತ್ತದೆ ಎಂಬುದರಲ್ಲಲ್ಲ ಬದಲಿಗೆ ಎಷ್ಟು ಜನ ವಿದ್ಯಾರ್ಥಿಗಳು ಸತ್ಯ, ನಿಷ್ಠೆ, ಸಹಕಾರ ಹಾಗು ಕೌಟುಂಬಿಕ ಮೌಲ್ಯಗಳನ್ನು ಪಾಲಿಸುವ ಸತ್ಪ್ರಜೆಗಳಾಗಿ ಜೀವನ ಸಾಗಿಸುತ್ತಿದ್ದಾರೆ ಎಂಬ ತಳಹದಿಯ ಮೇಲೆ.

NO COMMENTS

LEAVE A REPLY

Please enter your comment!
Please enter your name here

Exit mobile version