Home ಅಂಕಣ ಬ್ರಿಕ್ಸ್: ಭಾರತದ ಸಮತೋಲನದ ನಡೆ

ಬ್ರಿಕ್ಸ್: ಭಾರತದ ಸಮತೋಲನದ ನಡೆ

0

ಭಾರತ ದಿನೇ ದಿನೇ ಜಾಗತಿಕ ಮಟ್ಟದಲ್ಲಿ ಶಕ್ತಿಶಾಲಿಯಾಗುತ್ತಿದ್ದು, ಕೇವಲ ಒಂದು ರಾಷ್ಟ್ರದೊಡನೆ ಮಾತ್ರವಲ್ಲದೆ, ವಿವಿಧ ಪ್ರಬಲ ರಾಷ್ಟ್ರಗಳೊಡನೆ ಸಂಬಂಧ ಉತ್ತಮಪಡಿಸಲು ಪ್ರಯತ್ನಿಸುತ್ತಿದೆ. ಈ ಕಾರ್ಯತಂತ್ರ ಭಾರತಕ್ಕೆ ಸ್ವತಂತ್ರವಾಗುಳಿದು, ಯಾವುದಾದರೂ ಒಂದು ಸಹಭಾಗಿಯೊಡನೆ ಅತಿಯಾದ ಅವಲಂಬಿತವಾಗದಿರಲು ನೆರವಾಗಿದೆ. ಭಾರತ ವಿವಿಧ ರಾಷ್ಟ್ರಗಳೊಡನೆ ಸಹಯೋಗ ಹೊಂದಿ, ಪರಸ್ಪರ ಹಿತಾಸಕ್ತಿಯಿಂದ ಕಾರ್ಯಾಚರಿಸುವುದನ್ನು ಆರಿಸಿಕೊಂಡಿದೆ.
ಭಾರತ ಬ್ರಿಕ್ಸ್ ಮತ್ತು ಶಾಂಘೈ ಸಹಕಾರ ಸಂಘಟನೆಗಳಂತಹ (ಎಸ್‌ಸಿಒ) ಜಾಗತಿಕ ಗುಂಪುಗಳಲ್ಲಿ ಸಕ್ರಿಯ ಸದಸ್ಯನೂ ಹೌದು. ಇಂತಹ ವೇದಿಕೆಗಳು, ಭಾರತಕ್ಕೆ ಪಾಶ್ಚಾತ್ಯ ದೇಶಗಳ ಪಾರಮ್ಯವಿಲ್ಲದೆ ನಿರ್ಧಾರ ಕೈಗೊಳ್ಳುವಂತಹ ಜಾಗತಿಕ ಆದೇಶವನ್ನು ಉತ್ತೇಜಿಸುವ ಅವಕಾಶ ಕಲ್ಪಿಸುತ್ತವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್‌ನಂತಹ ಸಂಸ್ಥೆಗಳು ಮೂಲತಃ ಅಭಿವೃದ್ಧಿ ಹೊಂದಿದ ಪಾಶ್ಚಾತ್ಯ ದೇಶಗಳನ್ನು ಬೆಂಬಲಿಸುತ್ತಿದ್ದುದಕ್ಕೆ ಇಂತಹ ಸಂಘಟನೆಗಳು, ಅದರಲ್ಲೂ ಬ್ರಿಕ್ಸ್ ಸವಾಲಾದವು.
ಭಾರತ, ಬ್ರೆಜಿಲ್, ಚೀನಾ ಮತ್ತು ರಷ್ಯಾಗಳಂತಹ ದೇಶಗಳು ಇಂತಹ ಜಾಗತಿಕ ಸಂಸ್ಥೆಗಳಲ್ಲಿ ತಮ್ಮ ಮಾತಿಗೆ ಬೆಲೆ ಹೊಂದಲು ಬ್ರಿಕ್ಸ್ ಅನ್ನು ಬಳಸಿಕೊಂಡವು. ಭಾರತಕ್ಕೆ ತನ್ನ ಹೆಚ್ಚುತ್ತಿರುವ ಪ್ರಭಾವವನ್ನು ಪ್ರದರ್ಶಿಸಲು ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ನಾಯಕತ್ವ ವಹಿಸಲು ಬ್ರಿಕ್ಸ್ ನೆರವಾಗಿದೆ.
ಡೊನಾಲ್ಡ್ ಟ್ರಂಪ್ ನಾಯಕತ್ವದಲ್ಲಿ ಅಮೆರಿಕಾ ಅನಿಶ್ಚಿತ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದ್ದು, ಭಾರತದ ಸ್ಥಿರತೆ ಮತ್ತು ಭವಿಷ್ಯಕ್ಕೆ ಬ್ರಿಕ್ಸ್ ಹೆಚ್ಚು ಮುಖ್ಯವಾಯಿತು. ಗ್ಲೋಬಲ್ ಸೌತ್ ನೇತೃತ್ವ ವಹಿಸುವ ಗುರಿ ಹೊಂದಿರುವ ಭಾರತಕ್ಕೆ ಅವುಗಳೊಡನೆ ಸಂಪರ್ಕಿಸಲು ಬ್ರಿಕ್ಸ್ ನೆರವಾಯಿತು. ಗ್ಲೋಬಲ್ ಸೌತ್ ಎಂದರೆ, ಬಡತನ, ಅಸಮಾನತೆ, ಮತ್ತು ನ್ಯಾಯಯುತವಲ್ಲದ ಜಾಗತಿಕ ವ್ಯವಸ್ಥೆಗಳಂತಹ ಸಮಾನ ಸಮಸ್ಯೆಗಳನ್ನು ಎದುರಿಸುತ್ತಿರುವ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ ದೇಶಗಳಾಗಿವೆ.
ಆದರೆ, ನಿಜವಾದ ಪ್ರಶ್ನೆಯೆಂದರೆ, ಬ್ರಿಕ್ಸ್ ನಿಜಕ್ಕೂ ಭಾರತಕ್ಕೆ ನೆರವಾಗುತ್ತಿದೆಯೇ? ಬ್ರಿಕ್ಸ್ ಮೂಲಕ ಭಾರತಕ್ಕೆ ತನ್ನ ವಿದೇಶಾಂಗ ನೀತಿಯ ಗುರಿ ಸಾಧಿಸಲು ಸಾಧ್ಯವೇ?
ಇಂದು ಜಾಗತಿಕ ವ್ಯವಸ್ಥೆ ಬದಲಾಗುತ್ತಿದೆ. ಭವಿಷ್ಯದ ಅಧಿಕಾರ ವ್ಯವಸ್ಥೆ ಹೇಗಿರಲಿದೆ ಎಂಬುದೂ ಖಚಿತವಿಲ್ಲ. ಇಂತಹ ಅನಿಶ್ಚಿತತೆಗಳ ನಡುವೆ, ಚೀನಾದ ಬಲವಾದ ಪ್ರಭಾವ ಇರುವ ಬ್ರಿಕ್ಸ್ ಗುಂಪು ತನ್ನ ಉದ್ದೇಶಗಳಿಗೆ ನೆರವಾಗಬಹುದೇ? ಈ ಗುಂಪಿನಲ್ಲಿ ತಾನು ಮುಂದುವರಿಯಬೇಕೇ ಎಂಬುದನ್ನು ಆಲೋಚಿಸಬೇಕು.
ಬ್ರಿಕ್ಸ್ ಮತ್ತು ಎಸ್‌ಸಿಒಗಳು ಇಂದಿಗೂ ಭಾರತಕ್ಕೆ ನ್ಯಾಯಯುತ ಜಾಗತಿಕ ವ್ಯವಸ್ಥೆಗಾಗಿ ಧ್ವನಿ ಎತ್ತಲು ಅವಕಾಶ ಕಲ್ಪಿಸುತ್ತಿವೆ. ಆದರೆ, ವಾಸ್ತವದಲ್ಲಿ ಬ್ರಿಕ್ಸ್‌ನಿಂದ ಭಾರತಕ್ಕೆ ಹೇಳಿಕೊಳ್ಳುವಂತಹ ಲಾಭವಾಗಿಲ್ಲ. ಗುಂಪಿನ ಕೆಲವು ನಿರ್ಧಾರಗಳಂತೂ ಭಾರತದ ಇಚ್ಛೆಗೆ ವಿರುದ್ಧವಾಗಿಯೇ ಇದ್ದವು.
ಬ್ರಿಕ್ಸ್‌ನಲ್ಲಿ ಚೀನಾದ ಪಾರಮ್ಯ ಭಾರತಕ್ಕೆ ಪ್ರಮುಖ ಸಮಸ್ಯೆಯಾಗಿದೆ. ಚೀನಾದ ಜಿಡಿಪಿ 17.9 ಟ್ರಿಲಿಯನ್ ಡಾಲರ್ ಆಗಿದ್ದು, ಭಾರತದ ಜಿಡಿಪಿಗಿಂತ (3.56 ಟ್ರಿಲಿಯನ್ ಡಾಲರ್) ಬಹುತೇಕ ಐದು ಪಟ್ಟು ದೊಡ್ಡದಾಗಿದೆ. ಇದು ಬ್ರಿಕ್ಸ್ ನಿರ್ಧಾರಗಳಲ್ಲಿ ಚೀನಾದ ಪ್ರಭಾವವನ್ನು ಹೆಚ್ಚಾಗಿಸಿದೆ. ಬಹುತೇಕ ಬ್ರಿಕ್ಸ್ ರಾಷ್ಟ್ರಗಳೊಡನೆ ಚೀನಾ ಬಲವಾದ ವ್ಯಾಪಾರ ಮತ್ತು ಹೂಡಿಕೆ ಸಂಬಂಧ ಹೊಂದಿದ್ದು, ಇದು ಬ್ರಿಕ್ಸ್ ಮೇಲೆ ಚೀನಾದ ಹಿಡಿತವನ್ನು ಬಲಪಡಿಸಿದೆ.
ಚೀನಾ ತನ್ನ ಪ್ರಭಾವವನ್ನು ಬಳಸಿಕೊಂಡು, ಅಮೆರಿಕನ್ ಡಾಲರ್ ಬಳಕೆಯನ್ನು ಕಡಿಮೆಗೊಳಿಸುವುದು, ಬ್ರಿಕ್ಸ್ ಅನ್ನು ವಿಸ್ತರಿಸುವುದು, ಮತ್ತು ಜಾಗತಿಕ ನಾಯಕತ್ವ ಪಡೆದುಕೊಳ್ಳುವುದು ಮುಂತಾದ ಸ್ವಹಿತಗಳನ್ನು ಸಾಧಿಸಿದೆ. ಭಾರತ ಇವುಗಳಲ್ಲಿ ಒಂದಷ್ಟನ್ನು ಒಪ್ಪಿಕೊಂಡಿದ್ದರೂ, ಅದರಿಂದ ಭಾರತಕ್ಕೆ ಹೇಳಿಕೊಳ್ಳುವ ಪ್ರಯೋಜನಗಳಾಗಿಲ್ಲ.
2015ರಲ್ಲಿ, ಬ್ರಿಕ್ಸ್ ಬೆಂಬಲದಿಂದಾಗಿ ಐಎಂಎಫ್ ತನ್ನ ಮತ ಹಾಕುವ ಪ್ರಕ್ರಿಯೆಯನ್ನು ಬದಲಿಸಿ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಹೆಚ್ಚಿನ ಬೆಂಬಲ ನೀಡಿತು. ಇದು ಭಾರತದ ಪಾಲಿಗೆ ಸಣ್ಣ ಗೆಲುವಾಗಿತ್ತು. ಆದರೆ, ಇದರ ಅತಿಹೆಚ್ಚು ಪ್ರಯೋಜನವನ್ನು ಚೀನಾ ಹೊಡೆದುಕೊಂಡು, ಐಎಂಎಫ್ ಉಪ ಕಾರ್ಯನಿರ್ವಾಹಕ ನಿರ್ದೇಶಕ ಸ್ಥಾನ ಪಡೆದುಕೊಂಡಿತು.
ಭಾರತ ಗ್ಲೋಬಲ್ ಸೌತ್ ಧ್ವನಿಯಾಗಿ, ಆ ದೇಶಗಳಿಗೆ ಸಹಜ ನಾಯಕನಾಗುವ ಗುರಿ ಹೊಂದಿದೆ. ಆದರೆ, ಬ್ರಿಕ್ಸ್ ಸದಸ್ಯರೊಡನೆ ಚೀನಾ ಈಗಾಗಲೇ ಬಲವಾದ ಆರ್ಥಿಕ ಬಾಂಧವ್ಯ ಹೊಂದಿರುವುದರಿಂದ ಭಾರತಕ್ಕೆ ಬ್ರಿಕ್ಸ್ ಒಳಗೆ ನಾಯಕತ್ವದ ಕನಸನ್ನು ಸಾಧಿಸುವುದು ಕಷ್ಟ.
ಭಾರತ ದ್ವಿಪಕ್ಷೀಯ ಸಹಭಾಗಿತ್ವಗಳನ್ನು ಸಾಧಿಸುವುದರಿಂದ ಅಥವಾ ಚೀನಾ ಇಲ್ಲದ ಜಾಗತಿಕ ವೇದಿಕೆಗಳಿಗೆ ಸೇರ್ಪಡೆಯಾಗುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಇದರಿಂದ ಭಾರತದ ಸಾಮರ್ಥ್ಯದ ಮೇಲೆ ಇನ್ನಾರದೋ ನೆರಳು ಬೀರುವ ಸಾಧ್ಯತೆಗಳಿಲ್ಲ.
ಉದಾಹರಣೆಗೆ, ಬ್ರಿಕ್ಸ್ ಭಾರತದ ಇಚ್ಛೆಗೆ ವಿರುದ್ಧವಾಗಿ ಡಾಲರ್ ಬಳಕೆಯನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದೆ. ಭಾರತ ಪರ್ಯಾಯ ಪಾವತಿ ವ್ಯವಸ್ಥೆಗಳನ್ನು ಅನ್ವೇಷಿಸುತ್ತಿದ್ದರೂ, ಅಮೆರಿಕಾದೊಡನೆ ಪ್ರಬಲ ಸಂಬಂಧ ಹೊಂದಿದೆ. ಚೀನಾದ ಮೇಲಿನ ಆರ್ಥಿಕ ಅವಲಂಬನೆಯನ್ನು ಕಡಿಮೆಗೊಳಿಸಲು ಬಯಸುತ್ತಿದೆ. ಡೊನಾಲ್ಡ್ ಟ್ರಂಪ್ ಡಾಲರ್ ಕಡಿತಕ್ಕೆ ಆಗ್ರಹಿಸುತ್ತಿರುವ ದೇಶಗಳ ಮೇಲೆ ಸುಂಕ ವಿಧಿಸುವ ಬೆದರಿಕೆ ಒಡ್ಡಿದ್ದು, ಭಾರತ ಜಾಗರೂಕವಾಗಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಭಾರತ ಈ ಯೋಜನೆಗೆ ಎಂದೂ ಪೂರ್ಣ ಬೆಂಬಲ ವ್ಯಕ್ತಪಡಿಸಿರಲಿಲ್ಲ.
ಇನ್ನೊಂದು ಅಂಶವೆಂದರೆ, ಅಭಿವೃದ್ಧಿ ಯೋಜನೆಗಳಿಗಾಗಿ ಬ್ರಿಕ್ಸ್ ಆರಂಭಿಸಿರುವ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ (ಎನ್‌ಡಿಬಿ). ಭಾರತ ರಸ್ತೆ, ರೈಲ್ವೇ ನಿರ್ಮಾಣಗಳಿಗಾಗಿ ಸಾಲ ಪಡೆದಿದ್ದರೂ, ಚೀನಾದ ಆರ್ಥಿಕ ಶಕ್ತಿ ಅದಕ್ಕೆ ಬ್ಯಾಂಕಿನ ಮೇಲೆ ಹಿಡಿತ ನೀಡಿದೆ. ಇದರ ಪರಿಣಾಮವಾಗಿ, ಬಹಳಷ್ಟು ಯೋಜನೆಗಳು ಪರೋಕ್ಷವಾಗಿಯಾದರೂ ಚೀನಾದ ಬೆಲ್ಟ್ ಆ?ಯಂಡ್ ರೋಡ್ ಯೋಜನೆಗೆ ಪೂರಕವಾಗಿವೆ. ಆದ್ದರಿಂದ, ಭಾರತಕ್ಕಿಂತಲೂ ಹೆಚ್ಚಾಗಿ ಬ್ಯಾಂಕಿನ ಪ್ರಯೋಜನ ಚೀನಾಗೆ ಲಭಿಸುತ್ತಿದೆ.
ಭದ್ರತೆ ಮತ್ತು ಭಯೋತ್ಪಾದನೆಯಂತಹ ವಿಚಾರಗಳಲ್ಲೂ ಭಾರತ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಇತ್ತೀಚೆಗೆ, ಬ್ರಿಕ್ಸ್ ಪೆಹಲ್ಗಾಮ್ ದಾಳಿಯನ್ನು ವಿರೋಧಿಸಿ ಹೇಳಿಕೆ ಬಿಡುಗಡೆಗೊಳಿಸಿದ್ದರೂ, ಭಯೋತ್ಪಾದನೆಗೆ ಬೆಂಬಲಿಸುತ್ತಿರುವ ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸಿರಲಿಲ್ಲ. ಬ್ರಿಕ್ಸ್‌ನಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳಲು ಭಾರತ ಈ ಹೇಳಿಕೆಯನ್ನು ಒಪ್ಪಬೇಕಾಯಿತು. ಇದು ಗಂಭೀರ ವಿಚಾರಗಳಲ್ಲಿ ಬ್ರಿಕ್ಸ್‌ನ ರಾಜಕೀಯ ಭಾರತದ ಧ್ವನಿಯನ್ನು ಹತ್ತಿಕ್ಕುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಆರಂಭದ ವರ್ಷಗಳಲ್ಲಿ ಬ್ರಿಕ್ಸ್ ಒಕ್ಕೂಟದ ಭಾಗವಾಗಿರುವುದು ಭಾರತಕ್ಕೆ ಹೆಚ್ಚಿನ ಜಾಗತಿಕ ಗೋಚರತೆ ಮತ್ತು ಬೆಳೆಯುತ್ತಿರುವ ಆರ್ಥಿಕತೆಗಳೊಡನೆ ಸಮನ್ವಯ ಸಾಧಿಸಲು ನೆರವಾಗಿತ್ತು. ಆದರೆ, ಈಗ ಚೀನಾದ ಪ್ರಾಬಲ್ಯ ದಿನೇ ದಿನೇ ಹೆಚ್ಚಾಗುತ್ತಿದ್ದು, ಬ್ರಿಕ್ಸ್ ಭಾರತವನ್ನು ಹಿಂದಕ್ಕೆ ಸರಿಸುತ್ತಿದೆ.
ಭಾರತದ ನಾಯಕರು ಬ್ರಿಕ್ಸ್‌ನಲ್ಲಿನ ದೇಶದ ಪಾತ್ರದ ಕುರಿತು ಪುನರಾಲೋಚಿಸುವ ಅವಶ್ಯಕತೆಯಿದೆ. ಬ್ರಿಕ್ಸ್ ಮಾತುಕತೆಗೊಂದು ವೇದಿಕೆಯಾಗಿದ್ದರೂ, ಭಾರತದ ದೀರ್ಘಕಾಲೀನ ಕಾರ್ಯತಂತ್ರದ ಗುರಿಗಳನ್ನು ಸಾಧಿಸಲು ಬ್ರಿಕ್ಸ್ ಸೂಕ್ತವಾಗಿ ಉಳಿದಿಲ್ಲ.

Exit mobile version