Home ಕೃಷಿ/ವಾಣಿಜ್ಯ ಭತ್ತದ ಬೆಳೆಯಲ್ಲಿ ದುಂಡಾಣು ಮಚ್ಚೆ ರೋಗ, ನಿರ್ವಹಣೆ ಕ್ರಮಗಳು

ಭತ್ತದ ಬೆಳೆಯಲ್ಲಿ ದುಂಡಾಣು ಮಚ್ಚೆ ರೋಗ, ನಿರ್ವಹಣೆ ಕ್ರಮಗಳು

0

ಬಳ್ಳಾರಿ ಜಿಲ್ಲೆಯ ವಿವಿಧೆಡೆ ಭತ್ತದ ಬೆಳೆಯಲ್ಲಿ ದುಂಡಾಣು ಮಚ್ಚೆ ರೋಗ ಕಂಡುಬಂದಿದೆ. ಇದರ ನಿರ್ವಹಣೆಗೆ ರೈತರು ಸೂಕ್ತ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಕೃಷಿ ಇಲಾಖೆಯ ಉಪನಿರ್ದೇಶಕ ಎಸ್.ಎನ್.ಮಂಜುನಾಥ ಹೇಳಿದರು.

ಇತ್ತೀಚೆಗೆ ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದ ಭತ್ತ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮಾತನಾಡಿದ ಅವರು, “ಈ ಭಾಗದಲ್ಲಿ ಯಾವುದೇ ರೀತಿಯ ದುಂಡಾಣು ಮಚ್ಚೆ ರೋಗದ ಲಕ್ಷಣಗಳು ಸದ್ಯದ ಮಟ್ಟಿಗೆ ಕಂಡುಬಂದಿಲ್ಲವಾದರೂ, ರೈತರು ಈ ರೋಗದ ನಿಯಂತ್ರಣದ ಬಗ್ಗೆ ಅರಿವು ಹೊಂದಬೇಕು” ಎಂದು ತಿಳಿಸಿದರು.

“ಜಿಲ್ಲೆಯ ಹಲವೆಡೆ ಮುಂಗಾರು ಹಂಗಾಮಿನಲ್ಲಿ ರೈತರು ಭತ್ತವನ್ನು ಹೆಚ್ಚಾಗಿ ಬೆಳೆದಿದ್ದು, ಅಧಿಕ ಇಳುವರಿಯ ಹಂಬಲದಲ್ಲಿದ್ದ ರೈತರಿಗೆ ದುಂಡಾಣು ಮಚ್ಚೆ ರೋಗದ ತೀವ್ರತೆಯು ತಲೆ ನೋವಾಗಿ ಪರಿಣಮಿಸಿದೆ” ಎಂದರು.

“ದುಂಡಾಣು ಮಚ್ಛೆ ರೋಗದ ಚಿಹ್ನೆ ಮುಖ್ಯವಾಗಿ ಪ್ರಾರಂಭಿಕ ಹಂತದಲ್ಲಿ ಎಲೆಗಳ ಮೇಲೆ ತೇವಯುಕ್ತ ಕಂದು ಬಣ್ಣದ ಗೆರೆಗಳು ಕಂಡುಬರುತ್ತವೆ. ಕಾಲಕ್ರಮೇಣ ಎಲೆಗಳ ಗೆರೆಗಳು ಹಳದಿಯಾಗಿ ರೋಗ ತೀವ್ರತೆಯಾದಾಗ ಸಂಪೂರ್ಣವಾಗಿ ಸುಟ್ಟಂತೆ ಕಾಣುತ್ತದೆ. ಈ ರೋಗವು ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆ ಬಿದ್ದಲ್ಲಿ, ರೋಗ ಪಸರಿಸಿ ಬೇರೆ ಹೊಲಗಳಿಗೆ ವ್ಯಾಪಿಸಲಿದೆ” ಎಂದು ಹೇಳಿದರು.

ಹತೋಟಿ ಕ್ರಮಗಳು: ರೈತರು ಮುಂಜಾಗ್ರತೆಯಾಗಿ ಈ ರೋಗ ಹತೋಟಿಯಲ್ಲಿರಿಸಲು ಪ್ರಾರಂಭಿಕ ಹಂತದಲ್ಲಿ ಬ್ಯಾಕ್ಟೀರಿಯ ನಾಶಕ ಲೀ. ಗೆ 0.5 ಗ್ರಾಂ ಜೊತೆಗೆ ತಾಮ್ರದ ಆಕ್ಸಿಕ್ಲೂರೈಡ್ 2.5 ಗ್ರಾಂ/ಲೀ ಮಿಶ್ರಣ ಮಾಡಿ ಜೊತೆಗೆ ಅಂಟು ದ್ರಾಣವನ್ನು ಸೇರಿಸಿ ಸಿಂಪರಣೆ ಮಾಡಬೇಕು.

ರೋಗ ಹೆಚ್ಚಾದ ಸಂದರ್ಭದಲ್ಲಿ ಸ್ಟೋಪ್ಟೊಸೈಕ್ಲಿನ್ ಸಲ್ಫೇಟ್ 0.5 ಗ್ರಾಂ/ಲೀ ಮತ್ತು ತಾಮ್ರದ ಆಕ್ಸಿಕ್ಯುಲೋರೈಡ್ 2.5 ಗ್ರಾಂ/ಲೀ ದ್ರಾವಣವನ್ನು ತೆನೆ ಒಡೆಯದೆ ಇರುವ ಬೆಳಗೆ ಸಿಂಪಡಣೆ ಮಾಡಬೇಕಿದೆ.

ಈಗಾಗಲೇ ತೆನೆ ಬಿಚ್ಚುವ ಅಥವಾ ಹಾಲು ತುಂಬುವ ಹಂತದಲ್ಲಿರುವ ಬೆಳೆಗೆ ಸ್ಟೋಪ್ಟೊಸೈಕ್ಲಿನ್ ಸಲ್ಫೇಟ್ 0.5 ಗ್ರಾಂ/ಲೀ ಮತ್ತು ಕಾರ್ಬೆಂಡಜಿಮ್ 1 ಗ್ರಾಂ/ಲೀ ದ್ರಾವಣವನ್ನು ಬೆರೆಸಿ ಒಂದು ಎಕರೆಗೆ 180 ರಿಂದ 200 ಲೀಟರ್ ಸಿಂಪಡಣೆ ದ್ರಾವಣವನ್ನು ಉಪಯೋಗಿಸಿ ಚೆನ್ನಾಗಿ ತೊಯುವಂತೆ ಸಿಂಪಡಣೆ ಮಾಡಬೇಕು.

ಸಿಂಪಡಣೆಯಾದ ಎರಡನೇ ದಿನದಲ್ಲಿ ಲಘು ಪೋಷಕಾಂಶ ಮಿಶ್ರಣವನ್ನು ಪ್ರತಿ ಲೀಟರ್ ನೀರಿಗೆ 3 ಗ್ರಾಂ/ಲೀಟರ್ ದ್ರಾವಣವನ್ನು ಬೆರೆಸಿ ಸಿಂಪಡಣೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಈಗಾಗಲೇ ಕುಂಠಿತವಾಗಿರುವ ಬೆಳೆಯನ್ನು ಪುನಶ್ಚೇತನಗೊಳಿಸಲು ಸಹಾಯವಾಗುತ್ತದೆ.

NO COMMENTS

LEAVE A REPLY

Please enter your comment!
Please enter your name here

Exit mobile version