ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಗುಂಡ್ಲುಪೇಟೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಜ್ಯ ಅರಿಶಿನ ಬೆಳೆಗಾರರ ಒಕ್ಕೂಟ ಮತ್ತು ಸೂರ್ಯಕಾಂತಿ ಬೆಳೆಗಾರರು ಅನಿರ್ಧಿಷ್ಠಾವಧಿ ಧರಣಿ ಆರಂಭಿಸಿದರು. ಪಟ್ಟಣದ ಎಪಿಎಂಸಿ ಆವರಣದ ಮುಂದೆ ಜಮಾವಣೆಗೊಂಡ ಬೆಳೆಗಾರರು ರಾಜ್ಯ ಮತ್ತು ಕೇಂದ್ರ ಸರ್ಕಾರ, ಜಿಲ್ಲಾಧಿಕಾರಿ ಹಾಗೂ ಎಪಿಎಂಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅರಿಶಿನ ಬೆಳೆಗಾರರ ಒಕ್ಕೂಟ ನಾಗಾರ್ಜುನ್‍ಕುಮಾರ್ ಮಾತನಾಡಿ, “ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯವಹಿಸಿದೆ. ಎಂಎಸ್‍ಪಿ ಯೋಜನೆಯಡಿ ಸೂರ್ಯಕಾಂತಿ ಕ್ವಿಂಟಾಲ್‍ಗೆ 7,721ರೂ. ಬೆಲೆಯಿದ್ದರೂ ಸಹ ದಲ್ಲಾಳಿಗಳು ಕಡಿಮೆ ಬೆಲೆಗೆ 5,500ರೂ.ಗೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಕ್ವಿಂಟಾಲ್‍ಗೆ 2 ಸಾವಿರಕ್ಕಿಂತ ಹೆಚ್ಚು ನಷ್ಟವಾಗುತ್ತಿದೆ. ಇದರ ಅರಿವಿದ್ದರೂ ಖರೀದಿ ಕೇಂದ್ರ ತೆರೆಯದೇ ಅಧಿಕಾರಿಗಳು ರೈತರನ್ನು ಸಾಲದ ಸುಳಿಗೆ ಸಿಲುಕಿಸುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಜುಲೈ ತಿಂಗಳಲ್ಲೇ ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿ ಹಾಗೂ ಎಪಿಎಂಸಿಎ ರೈತರು ಮನವಿ ಮಾಡಲಾಗಿದೆ. ಆದರೂ ಖರೀದಿ ಕೇಂದ್ರ ತೆರೆದಿಲ್ಲ. ಈಗಾಗಲೇ ತಾಲೂಕಿನಲ್ಲಿ 20 ಸಾವಿರ ಎಕರೆಯಷ್ಟು ಸೂರ್ಯಕಾಂತಿ ಕಟಾವಿಗೆ ಬಂದಿದೆ. ಹೀಗಿದ್ದರೂ ಖರೀದಿ ಕೇಂದ್ರ ತೆರೆಯಲು ಹಿಂದೇಟು ಹಾಕುತ್ತಿದ್ದಾರೆ” ಎಂದು ಕಿಡಿಕಾರಿದರು.
ರೈತ ಮುಖಂಡ ಕುಂದಕೆರೆ ಸಂಪತ್ತು ಮಾತನಾಡಿ, “ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿಸುವಂತೆ ಕೇಂದ್ರ ಸರ್ಕಾರದ ಆದೇಶವಿದ್ದರೂ ಜಿಲ್ಲಾಧಿಕಾರಿಗಳು ಖರೀದಿ ಕೇಂದ್ರ ತೆರೆಯಲು ಮುಖ್ಯಮಂತ್ರಿಗಳ ಹಾಗೂ ಉಸ್ತುವಾರಿ ಸಚಿವರ ಜೊತೆ ಚರ್ಚೆ ಮಾಡುವುದಾಗಿ ಸಬೂಬು ಹೇಳುತ್ತಿದ್ದಾರೆ. ಈ ಮೂಲಕ ರೈತರ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.