ಬೆಂಗಳೂರು: ಕರ್ನಾಟಕದ ರೈತರಿಗೆ ಕೇಂದ್ರ ಸರ್ಕಾರದಿಂದ ದೊಡ್ಡ ಶುಭವಾರ್ತೆ ಸಿಕ್ಕಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನವಿಗೆ ಸ್ಪಂದಿಸಿ, ಭಾರತ ಸರ್ಕಾರದ ಕೃಷಿ ಸಚಿವಾಲಯವು 2025-26ರ ಋತುವಿನಲ್ಲಿ ರಾಜ್ಯದಲ್ಲಿ ಬೆಳೆದ ಪ್ರಮುಖ ಬೆಳೆಗಳನ್ನು ಬೆಂಬಲ ಬೆಲೆ ಯೋಜನೆ (Price Support Scheme – PSS) ಅಡಿಯಲ್ಲಿ ಖರೀದಿಸಲು ಅನುಮತಿ ನೀಡಿದೆ.
ಯಾವ ಯಾವ ಬೆಳೆಗಳಿಗೆ ಅನುಮತಿ?
ಕೇಂದ್ರ ಕೃಷಿ ಸಚಿವಾಲಯವು ಕೆಳಗಿನ ಬೆಳೆಗಳನ್ನು ಖರೀದಿಸಲು ಒಪ್ಪಿಗೆ ಸೂಚಿಸಿದೆ:
ಹೆಸರು ಕಾಳು – 38,000 ಮೆಟ್ರಿಕ್ ಟನ್
ಉದ್ದಿನ ಕಾಳು – 60,810 ಮೆಟ್ರಿಕ್ ಟನ್
ಸೂರ್ಯಕಾಂತಿ – 15,650 ಮೆಟ್ರಿಕ್ ಟನ್
ಕಡಲೆ ಬೀಜ – 61,148 ಮೆಟ್ರಿಕ್ ಟನ್
ಸೋಯಾಬಿನ್ – 1,15,000 ಮೆಟ್ರಿಕ್ ಟನ್
ಈ ನಿರ್ಧಾರದಿಂದ ರಾಜ್ಯದ ಸಾವಿರಾರು ರೈತರಿಗೆ ನೇರ ಲಾಭವಾಗುವ ನಿರೀಕ್ಷೆಯಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪತ್ರ ಬರೆದು ಕೇಂದ್ರ ಕೃಷಿ ಸಚಿವರ ಗಮನ ಸೆಳೆದಿದ್ದರು. ಅದಕ್ಕೆ ಸ್ಪಂದನೆ ಸಿಕ್ಕಿದ್ದು ರಾಜ್ಯದ ರೈತರಿಗೆ ದೊಡ್ಡ ನೆಮ್ಮದಿ ತಂದಿದೆ ಎಂದು ಹೇಳಿದರು. ರೈತರ ಹಿತದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಮೂಲಕ ರೈತರಿಗೆ ಹೆಚ್ಚು ಆದಾಯ ಭದ್ರತೆ ಒದಗಲಿದೆ,” ಎಂದು ಜೋಶಿ ಅಭಿಪ್ರಾಯಪಟ್ಟರು.
ಖರೀದಿ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯ : ಕೇಂದ್ರದಿಂದ ಅನುಮತಿ ಸಿಕ್ಕಿರುವುದರಿಂದ ರಾಜ್ಯ ಸರ್ಕಾರ ಈಗ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ಶೀಘ್ರದಲ್ಲೇ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಜೋಶಿ ಒತ್ತಾಯಿಸಿದ್ದಾರೆ. ರೈತರು ತಮ್ಮ ಉತ್ಪನ್ನವನ್ನು ನೇರವಾಗಿ ಖರೀದಿ ಕೇಂದ್ರಗಳಿಗೆ ತರಲು ಅವಕಾಶ ದೊರೆಯಲಿದೆ. ಮಾರುಕಟ್ಟೆಯಲ್ಲಿ ದರ ಕುಸಿತವಾದರೂ ರೈತರಿಗೆ ಕನಿಷ್ಠ ಬೆಂಬಲ ಬೆಲೆ (MSP) ಖಚಿತವಾಗಲಿದೆ.
ಈ ನಿರ್ಧಾರವು ರಾಜ್ಯದ ಕೃಷಿಕ ಸಮುದಾಯಕ್ಕೆ ದೊಡ್ಡ ಬಲವಾಗಲಿದೆ. ವಿಶೇಷವಾಗಿ ಹೆಸರು, ಉದ್ದಿನ ಕಾಳು ಮತ್ತು ಸೋಯಾಬಿನ್ ಬೆಳೆಯ ಬೆಲೆಗಳು ಮಾರುಕಟ್ಟೆಯಲ್ಲಿ ಅಸ್ಥಿರವಾಗುವ ಸಂದರ್ಭಗಳಲ್ಲಿ, ರೈತರು ಸರ್ಕಾರದ ಬೆಂಬಲ ಬೆಲೆ ಮೂಲಕ ನಷ್ಟ ತಪ್ಪಿಸಿಕೊಳ್ಳಲು ಸಾಧ್ಯವಾಗಲಿದೆ.