ಮೈಸೂರು: ದೇಶದಲ್ಲಿ ಜನಸಂಖ್ಯೆಯದ್ದೇ ದೊಡ್ಡ ಸಮಸ್ಯೆಯಾಗಿದ್ದು, ದೇಶ ಎಲ್ಲ ರಂಗದಲ್ಲೂ ಪ್ರಗತಿ ಸಾಧಿಸಿ ಎಷ್ಟೇ ಅಭಿವೃದ್ಧಿಯಾದರೂ ಅದನ್ನು ಜನಸಂಖ್ಯೆ ತಿನ್ನುತ್ತಿದೆ. ಹಾಗಾಗಿ, ನಾವು ಜನಸಂಖ್ಯೆ ನಿಯಂತ್ರಣದ ಕಡೆಗೆ ಹೆಚ್ಚು ಗಮನ ನೀಡುವುದು ಅಗತ್ಯವಿದೆ ಎಂದು ಮಾಜಿ ಸಚಿವ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅಭಿಪ್ರಾಯಪಟ್ಟರು.
ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ಮಾತನಾಡಿ, ನೂತನ ದಂಪತಿ ರಾಷ್ಟ್ರೀಯ ಕುಟುಂಬ ಯೋಜನೆ ಕಾರ್ಯಕ್ರಮದಲ್ಲಿ ನಂಬಿಕೆ ಇಡಬೇಕು. ಒಂದು ಅಥವಾ ಎರಡು ಮಕ್ಕಳು ಸಾಕು ಎಂಬ ನಿರ್ಧಾರ ಮಾಡಬೇಕು. ಆಗ ರಾಷ್ಟ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ. ಜೊತೆಗೆ ನಿಮಗೂ ಉಜ್ವಲ ಭವಿಷ್ಯ ಇರುತ್ತದೆ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ಮತದಾನದ ಗುರುತು: ಮಾರ್ಕರ್ ಪೆನ್ ಬಗ್ಗೆ ಸಂಶೋಧನೆ
ಬಡತನ, ನಿರುದ್ಯೋಗ ಸಮಸ್ಯೆಗಳು ಸಮಾಜದಿಂದ ಹೋಗಬೇಕು. ಇವುಗಳನ್ನು ಹೋಗಲಾಡಿಸಲು ಎಲ್ಲರೂ ನಿರಂತರವಾದ ಹೋರಾಟ ಮಾಡಬೇಕು. ಮುಖ್ಯವಾಗಿ ರಾಷ್ಟ್ರದ ಜನಸಂಖ್ಯೆ ಕಡಿಮೆಯಾಗಬೇಕು. ಹುಟ್ಟಿದ ಮಗು ಆರೋಗ್ಯವಾಗಿ ಇರಬೇಕು. ಚೆನ್ನಾಗಿ ಬೆಳೆಯಬೇಕು. ವಿದ್ಯಾವಂತ ಆಗಬೇಕು ಎಂಬ ಗುರಿ ನಮ್ಮದಾಗಬೇಕು ಎಂದರು.
ಮದುವೆ ಎನ್ನುವುದು ಜೀವನದಲ್ಲಿ ಆಗುವ ಪವಿತ್ರ ಕಾರ್ಯ. ಅದು ಇಂದು ಶ್ರೀ ಸುತ್ತೂರು ಮಠದ ಪವಿತ್ರ ಕ್ಷೇತ್ರದಲ್ಲಿ ಗುರುಗಳ ಆಶೀರ್ವಾದದಿಂದ ಆಗುತ್ತಿದೆ. ಸಾಮೂಹಿಕ ವಿವಾಹದಲ್ಲಿ ಸತಿ-ಪತಿಗಳಾದ ಎಲ್ಲರೂ ಗುರುಗಳ ಆಶೀರ್ವಾದದಿಂದ ಚೆನ್ನಾಗಿ ಬಾಳಬೇಕು. ಪ್ರೀತಿ, ವಿಶ್ವಾಸದಿಂದ ಇರಬೇಕು. ತಮ್ಮ ಕುಟುಂಬಕ್ಕೆ ಮತ್ತು ಇಡೀ ಸಮಾಜಕ್ಕೆ ಆದರ್ಶ ದಂಪತಿಗಳಾಗಬೇಕು ಎಂದರು.
ಸಾಮೂಹಿಕ ವಿವಾಹ ಮಾಡುವುದು ಪವಿತ್ರ ಮತ್ತು ಆದರ್ಶ ಕೆಲಸವಾಗಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಎಷ್ಟೇ ಕೃತಜ್ಞತೆ ಹೇಳಿದರು ಕಡಿಮೆಯಾಗುತ್ತದೆ. ಇಂದು ಸಾಮೂಹಿಕ ಮದುವೆ ಎಲ್ಲೆಡೆ ಹೆಚ್ಚಾಗಿ ನಡೆಯಬೇಕು. ಆ ಮೂಲಕ ದುಂದು ವೆಚ್ಚ ಕಡಿಮೆ ಮಾಡುವ ಜೊತೆಗೆ ಹಣ ಉಳಿಸಿ ಉತ್ತಮ ಜೀವನ ನಡೆಸಬಹುದು ಎಂದರು.
ಇದನ್ನೂ ಓದಿ: ಹೈಕಮಾಂಡ್ ಡಿಕೆಶಿ ಕಡೆಗೆ ಪಥ ಬದಲಿಸಿದೆ
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ಸುತ್ತೂರು ಜಾತ್ರಾ ಮಹೋತ್ಸವಕ್ಕೆ ತನ್ನದೇ ಆದ ಇತಿಹಾಸ ಇದೆ. ದಾಸೋಹ, ಸಾಂಸ್ಕೃತಿಕ ಮೇಳ, ಗಾಳಿಪಟ ಮೇಳ, ಕೃಷಿ ಮೇಳ, ವಿಜ್ಞಾನ ವಸ್ತು ಪ್ರದರ್ಶನ, ದನಗಳ ಜಾತ್ರೆ ಸೇರಿದಂತೆ ಸಾರ್ವಜನಿಕರ ಜೀವನಕ್ಕೆ ಹತ್ತಿರವಾದ ಅನೇಕ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗಿದೆ ಎಂದರು.
6 ದಿನಗಳು ನಡೆಯುವ ಜಾತ್ರೆಯ ಎಲ್ಲ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗಿಯಾಗುತ್ತಾರೆ. ಶ್ರೀಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳ ಜೊತೆಗೆ ಅಕ್ಷರ ದಾಸೋಹವೂ ನಿರಂತವಾಗಿ ನಡೆಯುತ್ತಿದೆ. ಶ್ರೀ ಮಠದ ಸುಮಾರು 400 ವಿದ್ಯಾ ಸಂಸ್ಥೆಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಕ್ಕಳಿಗೆ ವಿದ್ಯಾದಾನ ಮಾಡುತ್ತಿವೆ. ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶ್ರೀ ಮಠದ ವಿದ್ಯಾ ಸಂಸ್ಥೆಗಳಲ್ಲಿ ಕಲಿತಿರುವ ಲಕ್ಷಾಂತರ ಜನ ಜೀವನ ರೂಪಿಸಿಕೊಂಡಿದ್ದಾರೆ ಎಂದರು.






















