E Khata ಅವ್ಯವಸ್ಥೆಗೆ ಜನರ ಹರಸಾಹಸ: ಸರ್ಕಾರಕ್ಕೆ ಚಿಂತೆಯೇ ಇಲ್ಲ

0
2

ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ದುರಂತ – ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ

ಮಂಗಳೂರು: ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಜನರು ಇನ್ನೂ ಹರಸಾಹಸ ಪಡಬೇಕಾದ ಪರಿಸ್ಥಿತಿ ಮುಂದುವರಿದಿರುವುದು ದುರಂತ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರು ಎದುರಿಸುತ್ತಿರುವ ಈ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಚಿಂತೆಯೇ ಇಲ್ಲದಂತಾಗಿದೆ ಎಂದು ಅವರು ಆರೋಪಿಸಿದರು.

ರಾಜ್ಯ ಸರ್ಕಾರವು ಅವೈಜ್ಞಾನಿಕವಾಗಿ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿದ ದಿನದಿಂದಲೇ ನಗರ ವ್ಯಾಪ್ತಿಯಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿದೆ. ದೂರದ ಊರುಗಳಲ್ಲಿ ಅಥವಾ ವಿದೇಶಗಳಲ್ಲಿ ನೆಲೆಸಿರುವ ಖರೀದಿದಾರರು ಮತ್ತು ಮಾರಾಟಗಾರರು ಮಂಗಳೂರು ನಗರಕ್ಕೆ ಬಂದು ಹಲವು ದಿನಗಳ ಕಾಲ ಕಚೇರಿಗಳ ಮುಂದೆ ಅಲೆದಾಡಿದರೂ ಕೆಲಸವಾಗದೇ ನಿರಾಶೆಯಿಂದ ಮರಳುತ್ತಿರುವ ಘಟನೆಗಳು ಹೆಚ್ಚಾಗಿವೆ ಎಂದು ಶಾಸಕರು ಹೇಳಿದರು.

ಇದನ್ನೂ ಓದಿ:  ಉದ್ಯೋಗ ಹುಡುಕುವ ಮನಸ್ಥಿತಿಯಿಂದ ಉದ್ಯೋಗ ಸೃಷ್ಟಿಸುವತ್ತ ಭಾರತ

ವಿದೇಶಕ್ಕೆ ತೆರಳುವ ಮುನ್ನ ವ್ಯಕ್ತಿಯೊಬ್ಬರ ಹತಾಶೆ: ಇತ್ತೀಚೆಗೆ ಇದೇ ರೀತಿ ಪರಿಸ್ಥಿತಿ ಎದುರಿಸಿದ ವ್ಯಕ್ತಿಯೋರ್ವರು, ವಿದೇಶಕ್ಕೆ ತೆರಳುವ ಮುನ್ನ “ಇಂತಹ ಆಡಳಿತಾತ್ಮಕ ಅವ್ಯವಸ್ಥೆಯನ್ನು ನಾನು ಹಿಂದೆಂದೂ ಕಂಡಿಲ್ಲ” ಎಂದು ತೀವ್ರ ಹತಾಶೆ ವ್ಯಕ್ತಪಡಿಸಿ ತೆರಳಿರುವ ಘಟನೆ ಈ ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತದೆ ಎಂದು ವೇದವ್ಯಾಸ ಕಾಮತ್ ವಿವರಿಸಿದರು.

ಎಲ್ಲ ವೇದಿಕೆಗಳಲ್ಲಿ ಪ್ರಸ್ತಾಪಿಸಿದರೂ ಶೂನ್ಯ ಫಲಿತಾಂಶ: ಇ-ಖಾತಾ ಸಮಸ್ಯೆ ಕುರಿತು ನಾನೇ ಖುದ್ದಾಗಿ ಅಧಿಕಾರಿಗಳ ಮುಂದೆ, ಕಂದಾಯ ಸಚಿವರ ಬಳಿ ಮತ್ತು ವಿಧಾನಸಭಾ ಅಧಿವೇಶನದಲ್ಲಿಯೂ ಹಲವು ಬಾರಿ ಪ್ರಸ್ತಾಪಿಸಿದ್ದೇನೆ. ಆದರೂ ಸರ್ಕಾರದಿಂದ ಯಾವುದೇ ಸ್ಪಷ್ಟ ಪರಿಹಾರ ಸಿಗದಿರುವುದು ಬೇಸರ ತಂದಿದೆ ಎಂದು ಶಾಸಕರು ಹೇಳಿದರು. ಜನರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಟೀಕಿಸಿದರು.

ಇದನ್ನೂ ಓದಿ:  ಕನ್ನಡದ ಮಹತ್ವ ಸಾರಲು ಚಿತ್ರಮಂದಿರಗಳಿಗೆ ಬಂದ ‘ಭಾರತಿ ಟೀಚರ್’

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರಳ ವ್ಯವಸ್ಥೆ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅರ್ಜಿ ಸಲ್ಲಿಸಿದ ಒಂದು ವಾರದಿಂದ 20 ದಿನಗಳೊಳಗೆ ಇ-ಖಾತಾ ನೀಡುವ ವ್ಯವಸ್ಥೆ ಇತ್ತು ಎಂದು ಶಾಸಕರು ನೆನಪಿಸಿದರು. ಕಾಲಕಾಲಕ್ಕೆ ಅಧಿಕಾರಿಗಳ ಸಭೆ ಕರೆದು ಜನರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಸೂಚನೆ ನೀಡಲಾಗುತ್ತಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿ ಜನಸಾಮಾನ್ಯರು ಹಿಡಿ ಶಾಪ ಹಾಕುವಂತಾಗಿದೆ ಎಂದು ಅವರು ಹೇಳಿದರು.

ತಾಂತ್ರಿಕ ದೋಷಗಳಿಗೂ ವರ್ಷಗಳ ಬೇಕೆ?: “ಯಾವುದೇ ತಾಂತ್ರಿಕ ದೋಷಗಳಿದ್ದರೂ ಅವನ್ನು ಬಗೆಹರಿಸಲು ವರ್ಷಗಟ್ಟಲೆ ಸಮಯ ಬೇಕೇ? ಜನರನ್ನು ಸರಕಾರಿ ಕಚೇರಿಗಳಿಗೆ ಅಲೆದಾಡಿಸುವುದು ಸರಿಯಲ್ಲ,” ಎಂದು ಪ್ರಶ್ನಿಸಿದ ವೇದವ್ಯಾಸ ಕಾಮತ್, ಜನರು ಬೀದಿಗಿಳಿದು ಹೋರಾಟಕ್ಕೆ ಇಳಿಯುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಂಡು ಇ-ಖಾತಾ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಎಚ್ಚರಿಸಿದರು.

Previous articleಜನಸಂಖ್ಯೆ ನಿಯಂತ್ರಣದಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ