ದೇವಸ್ಥಾನ ಭಕ್ತರು, ಚಾಲಕರು, ಸಾರ್ವಜನಿಕರಿಗೆ ತೀವ್ರ ತೊಂದರೆ – ಪಾಲಿಕೆಯ ನಿರ್ಲಕ್ಷ್ಯಕ್ಕೆ ಆಕ್ರೋಶ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯು 2018–19ನೇ ಸಾಲಿನಲ್ಲಿ ONGC–MRPL CSR ಅನುದಾನದಡಿ ನಿರ್ಮಿಸಿದ್ದ ಸಾರ್ವಜನಿಕ ಶೌಚಾಲಯವೊಂದು ಐದು ವರ್ಷಗಳಾದರೂ ಸಾರ್ವಜನಿಕರ ಉಪಯೋಗಕ್ಕೆ ತೆರೆಯದಿರುವುದು ತೀವ್ರ ಟೀಕೆಗೆ ಕಾರಣವಾಗಿದೆ. ಈ ಕುರಿತು ಕಳೆದ ಐದು ವರ್ಷಗಳಲ್ಲಿ ಎರಡು–ಮೂರು ಬಾರಿ ಪಾಲಿಕೆಯ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಕ್ರಮ ಕೈಗೊಳ್ಳದೇ ಇರುವುದರಿಂದ ಸಾರ್ವಜನಿಕರು ದಿನನಿತ್ಯ ತೊಂದರೆ ಅನುಭವಿಸುವಂತಾಗಿದೆ.
ವಿಶೇಷವಾಗಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು, ವಾಹನ ಚಾಲಕರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಶೌಚಾಲಯದ ಕೊರತೆಯಿಂದ ಅತೀವ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಶೌಚಾಲಯ ಬೀಗ ಹಾಕಿದ ಸ್ಥಿತಿಯಲ್ಲೇ ಉಳಿದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉದ್ಯೋಗ ಹುಡುಕುವ ಮನಸ್ಥಿತಿಯಿಂದ ಉದ್ಯೋಗ ಸೃಷ್ಟಿಸುವತ್ತ ಭಾರತ
ಶೀಘ್ರ ತೆರೆಯುವಂತೆ ಆಮ್ ಆದ್ಮಿ ಪಕ್ಷದ ಒತ್ತಾಯ: ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಿ ಶೌಚಾಲಯವನ್ನು ಸಾರ್ವಜನಿಕ ಉಪಯೋಗಕ್ಕೆ ತೆರೆಯಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಸಾರ್ವಜನಿಕರ ಮೂಲಭೂತ ಅಗತ್ಯವೊಂದನ್ನು ನಿರ್ಲಕ್ಷಿಸುವುದು ಅಸಹನೀಯ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸಾರ್ವಜನಿಕರ ಅಸಮಾಧಾನ: ಪ್ರತಿಭಟನೆಯಲ್ಲಿ ಸಾರ್ವಜನಿಕರ ಪರವಾಗಿ ಮಾತನಾಡಿದ ವಿದ್ಯಾರ್ಥಿ ಪರಶುರಾಮ, ಗೃಹಿಣಿ ಗಂಗಮ್ಮ, ಆಟೋ ಚಾಲಕಿ ಸುನೀತಾ, ಇವರು ತಮ್ಮ ಅನುಭವಗಳನ್ನು ಹಂಚಿಕೊಂಡು, “ಶೌಚಾಲಯ ಇದ್ದರೂ ಬಳಸಲು ಅವಕಾಶ ಇಲ್ಲ. ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಪಾಲಿಕೆ ಈ ಬಗ್ಗೆ ಕಣ್ಣಿಟ್ಟೇ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಭಿಮಾನಿಗಳ ಸುರಕ್ಷತೆಗೆ AI ಕ್ಯಾಮೆರಾ ಅಳವಡಿಸಲು ಆರ್‌ಸಿಬಿ ಪ್ರಸ್ತಾಪ
ಆಡಳಿತದ ವಿರುದ್ಧ ಕಿಡಿಕಾರಿಕೆ: ಪ್ರತಿಭಟನೆಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ನಾಯಕರು, “CSR ಅನುದಾನದಡಿ ನಿರ್ಮಿಸಿದ ಸಾರ್ವಜನಿಕ ಸೌಲಭ್ಯವನ್ನು ನಿರ್ವಹಿಸಲು ವಿಫಲವಾಗಿರುವುದು ಮಂಗಳೂರು ಮಹಾನಗರ ಪಾಲಿಕೆಯ ವೈಫಲ್ಯ. ಇದು ಜನರ ತೆರಿಗೆ ಹಣದ ಅವಮಾನ” ಎಂದು ಆರೋಪಿಸಿದರು. ಶೌಚಾಲಯವನ್ನು ಕೂಡಲೇ ತೆರೆಯದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ಅವರು ನೀಡಿದರು.
ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದವರು: ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಎಸ್.ಎಲ್. ಪಿಂಟೊ, ವೆಂಕಟೇಶ್ ಬಾಳಿಗ, ಪ್ರಸಾದ್ ಬಜಿಲಕೇರಿ, ಲೆಸ್ಲಿ ಫೆರ್ನಾಂಡಿಸ್, ನಜೀರ್ ಅಹ್ಮದ್ ಬಾವ, ಕಬೀರ್ ಕಾಟಿಪಳ್ಳ, ರೋಶನ್ ಪೆರಿಸ್, ವಾಸುದೇವ್, ಸಿಮಾ ಮಡಿವಾಳ, ಸುಜಾತ, ವೇಣುಗೋಪಾಲ ಪುಚ್ಚುಪಾಡಿ ಸೇರಿದಂತೆ ಹಲವಾರು ಪಕ್ಷದ ಕಾರ್ಯಕರ್ತರು ಹಾಗೂ ಸದಸ್ಯರು ಭಾಗವಹಿಸಿದ್ದರು.























