ಬಳ್ಳಾರಿ ಬ್ಯಾನರ್ ಪ್ರಕರಣ: ಮತ್ತಿಬ್ಬರು ಖಾಸಗಿ ಗನ್‌ಮ್ಯಾನ್‌ಗಳ ಬಂಧನ

0
28

CID ವಶಕ್ಕೆ ಪಂಜಾಬ್ ಮೂಲದ ಇಬ್ಬರು, ತನಿಖೆ ತೀವ್ರ

ಬಳ್ಳಾರಿ: ಜಿಲ್ಲೆಯಲ್ಲಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಜನೆವರಿ 1ರಂದು ನಡೆದ ಬ್ಯಾನರ್ ಗಲಭೆ ಹಾಗೂ ಗುಂಡೇಟಿನಿಂದ ಯುವಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಾವಂಬಾವಿಯ ಜನಾರ್ದನ ರೆಡ್ಡಿ ಅವರ ಮನೆ ಎದುರು ನಡೆದ ಗಲಭೆ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಿಂದ ಯುವಕನೊಬ್ಬ ಮೃತಪಟ್ಟಿದ್ದ ಪ್ರಕರಣ ಈಗ ಸಿಐಡಿ ತನಿಖೆಯಡಿಯಲ್ಲಿ ಮುಂದುವರಿಯುತ್ತಿದ್ದು, ಈ ಸಂಬಂಧ ಪಂಜಾಬ್ ಮೂಲದ ಖಾಸಗಿ ಗನ್‌ಮ್ಯಾನ್‌ಗಳಾದ ಬಲ್ಜಿತ್ ಸಿಂಗ್ ಹಾಗೂ ಬಲ್ವಿಂದರ್ ಸಿಂಗ್ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:  ಉದ್ಯೋಗ ಹುಡುಕುವ ಮನಸ್ಥಿತಿಯಿಂದ ಉದ್ಯೋಗ ಸೃಷ್ಟಿಸುವತ್ತ ಭಾರತ

ಬಂಧಿತರಿಬ್ಬರೂ ಶಾಸಕ ನಾರಾ ಭರತರೆಡ್ಡಿ ಅವರ ಆಪ್ತ ಹಾಗೂ ಸಂಬಂಧಿ ಸತೀಶ್ ರೆಡ್ಡಿ ಅವರ ಖಾಸಗಿ ಭದ್ರತಾ ಸಿಬ್ಬಂದಿಯಾಗಿದ್ದರು ಎನ್ನಲಾಗಿದೆ. ಸಿಐಡಿ ಪೊಲೀಸರು ಇಬ್ಬರನ್ನೂ ಬಳ್ಳಾರಿ ನಗರದ ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಜನೆವರಿ 1ರಂದು ಹಾವಂಬಾವಿ ಪ್ರದೇಶದಲ್ಲಿ ಬ್ಯಾನರ್ ವಿಚಾರವಾಗಿ ಉಂಟಾದ ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆ ವೇಳೆ ನಡೆದ ಗುಂಡೇಟಿನಿಂದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಘಟನೆ ರಾಜ್ಯಾದ್ಯಂತ ಭಾರೀ ಸಂಚಲನ ಉಂಟುಮಾಡಿತ್ತು.

ಇದನ್ನೂ ಓದಿ:  ಕನ್ನಡದ ಮಹತ್ವ ಸಾರಲು ಚಿತ್ರಮಂದಿರಗಳಿಗೆ ಬಂದ ‘ಭಾರತಿ ಟೀಚರ್’

ಈ ಪ್ರಕರಣದಲ್ಲಿ ಈ ಹಿಂದೆ ಗುಂಡು ಹಾರಿಸಿದ್ದಾನೆ ಎನ್ನಲಾದ ಒಬ್ಬ ಖಾಸಗಿ ಗನ್‌ಮ್ಯಾನ್‌ನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದರು. ಆದರೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಸರ್ಕಾರವು ತನಿಖೆಯನ್ನು ಸಿಐಡಿಗೆ ವಹಿಸಿತ್ತು.

ಸಿಐಡಿ ತನಿಖೆ ಬಳಿಕ ಹೊಸ ಬಂಧನ: ಸಿಐಡಿ ತನಿಖೆ ಆರಂಭಿಸಿದ ಬಳಿಕ ಪ್ರಕರಣದ ಎಲ್ಲ ಆಯಾಮಗಳನ್ನು ಆಳವಾಗಿ ಪರಿಶೀಲಿಸಲಾಗುತ್ತಿದ್ದು, ಅದರ ಭಾಗವಾಗಿ ಇದೀಗ ಮತ್ತಿಬ್ಬರು ಖಾಸಗಿ ಗನ್‌ಮ್ಯಾನ್‌ಗಳ ಬಂಧನ ನಡೆದಿದೆ. ಘಟನೆ ವೇಳೆ ಯಾರು ಗುಂಡು ಹಾರಿಸಿದರು, ಆದೇಶ ಯಾರಿಂದ ಬಂದಿತ್ತು, ಭದ್ರತಾ ಸಿಬ್ಬಂದಿಯ ಪಾತ್ರವೇನು ಎಂಬುದರ ಬಗ್ಗೆ ಸಿಐಡಿ ಅಧಿಕಾರಿಗಳು ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Previous articleಒಡಂಬಡಿಕೆ ಕೇವಲ ಕಾಗದದಲ್ಲಿಲ್ಲ, ಕಾರ್ಯರೂಪದಲ್ಲಿ ಸಾಗುತ್ತಿದೆ