ದಾಂಡೇಲಿಯಲ್ಲಿ ಹಾರ್ನಬಿಲ್ ಹಬ್ಬಕ್ಕೆ ಅದ್ಧೂರಿ ಚಾಲನೆ

0
3

ಹಾರ್ನಬಿಲ್ ಸಂರಕ್ಷಣೆಗೆ ಸಮಾಜದ ಸಹಭಾಗಿತ್ವ ಅಗತ್ಯ – ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ್

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಹಾರ್ನಬಿಲ್ ಭವನದಲ್ಲಿ ಶುಕ್ರವಾರದಿಂದ ಹಾರ್ನಬಿಲ್ ಹಬ್ಬ ಆರಂಭಗೊಂಡಿದ್ದು, ಬೆಂಗಳೂರು ರಾಜ್ಯದ ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ್ ಅವರು ದೀಪ ಬೆಳಗುವ ಮೂಲಕ ಹಬ್ಬಕ್ಕೆ ಅಧಿಕೃತ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಹಾರ್ನಬಿಲ್ ಸಂರಕ್ಷಣೆ ಅತ್ಯಂತ ಮಹತ್ವದ ವಿಚಾರವಾಗಿದ್ದು, ಇದಕ್ಕೆ ಅರಣ್ಯ ಇಲಾಖೆ ಮಾತ್ರವಲ್ಲದೆ ಸಮಾಜ, ಸಾರ್ವಜನಿಕರು ಹಾಗೂ ಮಾಧ್ಯಮಗಳ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದು ಹೇಳಿದರು. ಪಕ್ಷಿಗಳ ಮಹತ್ವವನ್ನು ಸಮಾಜದಲ್ಲಿ ಬಿತ್ತಲು ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ:  ಉದ್ಯೋಗ ಹುಡುಕುವ ಮನಸ್ಥಿತಿಯಿಂದ ಉದ್ಯೋಗ ಸೃಷ್ಟಿಸುವತ್ತ ಭಾರತ

ಮಕ್ಕಳಲ್ಲೂ ಸ್ಥಳೀಯರಲ್ಲೂ ಅರಿವು ಮೂಡಬೇಕು: ಶಾಲಾ ಮಕ್ಕಳು ಹಾಗೂ ಸ್ಥಳೀಯ ಸಮುದಾಯಕ್ಕೆ ಹಾರ್ನಬಿಲ್ ಪಕ್ಷಿಗಳ ಜೀವನ ಕ್ರಮ, ವಂಶಾಭಿವೃದ್ಧಿ ಮತ್ತು ಪರಿಸರದಲ್ಲಿನ ಪಾತ್ರದ ಕುರಿತು ಅರಿವು ಮೂಡಿಸುವುದು ಬಹಳ ಮುಖ್ಯ ಎಂದು ಸಂತೋಷ ಕುಮಾರ್ ತಿಳಿಸಿದರು. ಹಾರ್ನಬಿಲ್ ಕುರಿತು ಪಕ್ಷಿತಜ್ಞರು ನೀಡುವ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಹಾರ್ನಬಿಲ್ ಹಬ್ಬವನ್ನು ಆಯೋಜಿಸಲಾಗಿದ್ದು, ಈ ಉತ್ಸವವನ್ನು ಉದ್ಘಾಟಿಸಿರುವುದು ಸಂತೋಷದ ವಿಷಯ ಎಂದು ಅವರು ಹೇಳಿದರು.

ಹಾರ್ನಬಿಲ್ ಹಬ್ಬದ ಉದ್ದೇಶ ವಿವರಿಸಿದ ಡಿಎಫ್‌ಒ ಪ್ರಶಾಂತ್ ಕುಮಾರ್: ಹಳಿಯಾಳ ವಿಭಾಗದ ಡಿಎಫ್‌ಒ ಪ್ರಶಾಂತ್ ಕುಮಾರ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಹಾರ್ನಬಿಲ್ ಉತ್ಸವದ ಉದ್ದೇಶಗಳನ್ನು ವಿವರಿಸಿದರು. ದಾಂಡೇಲಿಯ ನದಿ, ಪರಿಸರ, ಅರಣ್ಯ, ವನ್ಯಜೀವಿ ಹಾಗೂ ಪಕ್ಷಿಗಳ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಿಳಿಸುವುದೇ ಈ ಹಬ್ಬದ ಪ್ರಮುಖ ಉದ್ದೇಶವಾಗಿದೆ ಎಂದರು. ಸ್ಥಳೀಯ ಬುಡಕಟ್ಟು ಸಮುದಾಯಗಳ ಸಂಸ್ಕೃತಿಯನ್ನು ಬೇರೆ ಪ್ರದೇಶಗಳಿಗೆ ಪರಿಚಯಿಸುವುದು, ಪಕ್ಷಿ ವೀಕ್ಷಣೆ ಮತ್ತು ವಿಚಾರ ಸಂಕಿರಣಗಳ ಮೂಲಕ ಪಕ್ಷಿ ಸಂಸ್ಕೃತಿಯ ವಿನಿಮಯ ಮಾಡಿಕೊಳ್ಳುವುದು ಈ ಉತ್ಸವದ ಇನ್ನೊಂದು ಗುರಿ ಎಂದು ಹೇಳಿದರು.

ಇದನ್ನೂ ಓದಿ:  ಕನ್ನಡದ ಮಹತ್ವ ಸಾರಲು ಚಿತ್ರಮಂದಿರಗಳಿಗೆ ಬಂದ ‘ಭಾರತಿ ಟೀಚರ್’

ಹಾರ್ನಬಿಲ್ ಬಗ್ಗೆ ತಜ್ಞರ ಮಾಹಿತಿ: ದೇಶದಲ್ಲಿ ಒಟ್ಟು 9 ಬಗೆಯ ಹಾರ್ನಬಿಲ್ ಪಕ್ಷಿಗಳು ಕಂಡುಬರುತ್ತವೆ. ದೇಶದ ನಾನಾ ಭಾಗಗಳಲ್ಲಿ ಇರುವ ಹಾರ್ನಬಿಲ್‌ಗಳು ಹಾಗೂ ಟೈಗರ್ ರಿಜರ್ವ್‌ಗಳ ಮಹತ್ವದ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ ಎಂದು ಪ್ರಶಾಂತ್ ಕುಮಾರ್ ತಿಳಿಸಿದರು. ಹಾರ್ನಬಿಲ್ ಕುರಿತು ಸ್ಥಳೀಯರನ್ನು ಒಳಗೊಂಡ ಡಾಕ್ಯುಮೆಂಟರಿ ತಯಾರಿಸಲಾಗಿದ್ದು, ಸ್ಥಳೀಯರ ಭಾಗವಹಿಸುವಿಕೆಯಿಂದಲೇ ಹಾರ್ನಬಿಲ್ ಹಬ್ಬ ನಡೆಯಲಿದೆ ಎಂದರು.

ಹಾರ್ನಬಿಲ್ ಇಕೋ ಟೂರಿಜಂಗೆ ಚಿಂತನೆ: ಕೆನರಾ ಅರಣ್ಯ ವಲಯದ ಸಿಸಿಎಫ್ ಹೀರಾಲಾಲ್ ಅವರು ಮಾತನಾಡಿ, ಹಳಿಯಾಳ ವಲಯದಲ್ಲಿ ಹಾರ್ನಬಿಲ್ ಇಕೋ ಟೂರಿಜಂ ಆರಂಭಿಸುವ ಉದ್ದೇಶವಿದೆ ಎಂದರು. ಇದು ಪರಿಸರ ಸಂರಕ್ಷಣೆಯ ಜೊತೆಗೆ ಸ್ಥಳೀಯರಿಗೆ ಜೀವನೋಪಾಯದ ಅವಕಾಶಗಳನ್ನು ಒದಗಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ: ಕೊನೆಗೂ ಟ್ರಂಪ್‌ಗೆ ‘ನೊಬೆಲ್’ ಸ್ಪರ್ಶ?

ಹಾರ್ನಬಿಲ್‌ಗಳ ಜಾಗತಿಕ ಮಹತ್ವ: ವಿಶ್ವದಲ್ಲಿ 11,000ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಇದ್ದು, ಅದರಲ್ಲಿ 57 ಪ್ರಭೇದದ ಹಾರ್ನಬಿಲ್ ಪಕ್ಷಿಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ. ಭಾರತದಲ್ಲಿ 9 ಪ್ರಭೇದದ ಹಾರ್ನಬಿಲ್‌ಗಳಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ 4 ಪ್ರಭೇದದ ಹಾರ್ನಬಿಲ್ ಪಕ್ಷಿಗಳು ಕಂಡುಬರುತ್ತವೆ ಎಂದು ಅವರು ಮಾಹಿತಿ ನೀಡಿದರು. ಈ ಉತ್ಸವದಲ್ಲಿ 100ಕ್ಕೂ ಹೆಚ್ಚು ಜನ ತಜ್ಞರು ಮತ್ತು ಪರಿಸರ ಆಸಕ್ತರು ಹಾರ್ನಬಿಲ್ ಕುರಿತು ಮಾತನಾಡಲಿದ್ದಾರೆ ಎಂದು ಹೇಳಿದರು.

ಜನಪ್ರತಿನಿಧಿಗಳ ಗೈರು ಹಾಜರಿ ಗಮನಸೆಳೆದಿತು: ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಇದ್ದರೂ, ಹಿರಿಯ ಶಾಸಕ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಸೇರಿದಂತೆ ಹಲವು ಜನಪ್ರತಿನಿಧಿಗಳ ಗೈರು ಹಾಜರಿ ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ಇದೇ ವೇಳೆ ಕಾಳಿ ರಿಸರ್ವ್ ಫಾರೆಸ್ಟ್ ಡಿಎಫ್‌ಒ ಹಾಗೂ ನಿರ್ದೇಶಕ ನಿಲೇಶ್ ಶಿಂಧೆ ದೇವಬಾ ಅವರ ಅನುಪಸ್ಥಿತಿಯೂ ಗಮನಕ್ಕೆ ಬಂತು.

ಇದನ್ನೂ ಓದಿ: ರೋಗಗ್ರಸ್ತ ಆಡಳಿತದಿಂದ ಜನಸಾಮಾನ್ಯರ ಜೊತೆಗೆ ಸರ್ಕಾರಿ ಸೇವಕರೂ ಹೈರಾಣು

ಇತರ ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಕಾರವಾರ ಅರಣ್ಯ ವಲಯದ ಡಿಎಫ್‌ಒ ರವಿಶಂಕರ್, ಸಾಮಾಜಿಕ ಅರಣ್ಯ ವಿಭಾಗದ ಮಂಜುನಾಥ ನಾವಿ. ಬೆಳಗಾವಿ ವಿಭಾಗದ ಡಿಎಫ್‌ಒ ಮಂಜುನಾಥ ಚೌಹಾನ್. ತಹಶೀಲ್ದಾರ್ ಶೈಲೇಶ್ ಪರಮಾನಂದ. ಸಹಿತ ಅರಣ್ಯ ಇಲಾಖೆ ಅಧಿಕಾರಿಗಳು, ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Previous articleವೈದ್ಯಕೀಯ ಲೋಕದಲ್ಲಿ ಹೊಸ ಮೈಲಿಗಲ್ಲು: ಭಾರತದಲ್ಲೇ ಮೊದಲ ‘AI’ ಮೊಣಕಾಲು ಶಸ್ತ್ರಚಿಕಿತ್ಸೆ ಯಶಸ್ವಿ!