ದಾಂಡೇಲಿ: ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗಲೇ ಬೇಡ್ತಿ ವರದಾ ನದಿ ಯೋಜನೆ ಸಿದ್ಧವಾಗಿತ್ತು. ಅವರ ಬಜೆಟ್‌ನಲ್ಲಿ ಘೋಷಣೆ ಆಗಿತ್ತು ಎಂಬ ನಿಜವನ್ನು ಮೀನುಗಾರಿಕೆ, ಬಂದರು ಸಚಿವ ಮಂಕಾಳ ವೈದ್ಯ ಬಹಿರಂಗ ಮಾಡಿದರು.
ಭಟ್ಕಳದಲ್ಲಿ ಜಿಲ್ಲಾ ಕೇಂದ್ರದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈಗಿನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಆಗ ಯಡಿಯೂರಪ್ಪ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದರು. ಅಲ್ಲದೆ ಆಗ ಜಿಲ್ಲೆಯ ಐದು ಜನ ಶಾಸಕರು ಬಿಜೆಪಿಯವರು. ಒಬ್ಬರು ಮಂತ್ರಿಯಾಗಿದ್ದರು. ಆಗ ಬೇಡ್ತಿ ವರದಾ ನದಿ ಜೋಡಣೆ ವಿರೋಧಿಸದವರು ಈಗ ವಿರೋಧಿಸುತ್ತಾರೆ. ಹಾವೇರಿ, ಕೊಪ್ಪಳ, ಗದಗ ಜಿಲ್ಲೆಗೆ ನೀರು ಕೊಡುವುದಾಗಿ ಅಲ್ಲಿನ ಬಿಜೆಪಿಗರು ಹೇಳುತ್ತಿದ್ದಾರೆ ಎಂದು ಸಚಿವ ಮಂಕಾಳ ವೈದ್ಯ ಟೀಕಿಸಿದರು.
ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ ಬಜೆಟ್‌ನ 21ನೇ ಪುಟ, 89ನೇ ಪ್ಯಾರಾ ತೆಗೆದು ನೋಡಲಿ. ಅವರೇ ನಿರ್ಧಾರ ತೆಗೆದುಕೊಂಡವರು. 23 ಸಾವಿರ ಕೋಟಿ ಯೋಜನೆಯಲ್ಲಿ ಶೇ. 90 ಪಾಲು ಕೇಂದ್ರದ್ದು. ಈಗ ನಿಲ್ಲಿಸಲಿ. ಬೇಡ ಅಂದವರಾರು?
ನಾವು ಯೋಜನೆ ಬೇಡ ಅಂದಿದ್ದರೆ, ಕೇಂದ್ರ ಸರ್ಕಾರದ 23 ಸಾವಿರ ಕೋಟಿ ಯೋಜನೆ ಅನುಷ್ಠಾನಕ್ಕೆ ಅಡ್ಡಗಾಲು ಎನ್ನುತ್ತಿದ್ದರು. ಈಗ ಅವರೇ ಜಾರಿ ಮಾಡಲು ಮುಂದಾಗಿ ಈಗ ವಿರೋಧಿಸುತ್ತಿದ್ದಾರೆ. ಅವರ ಪಕ್ಷದ ಸಂಸದ ಬೊಮ್ಮಾಯಿಗೆ ಈ ಯೋಜನೆ ಬೇಕು. ಅವರ ಪಕ್ಷದಲ್ಲಿ ಗೊಂದಲ ಇದೆ. ಅದನ್ನು ಸರಿ ಮಾಡಿಕೊಳ್ಳಲಿ ಎಂದರು.
ಕೇಂದ್ರ ಬಜೆಟ್‌ನಿಂದ ಜಿಲ್ಲೆಗೆ, ಕರ್ನಾಟಕಕ್ಕೆ ಏನೂ ನಿರೀಕ್ಷೆ ಮಾಡಿಲ್ಲ. ಬಿಜೆಪಿ ಸಂಸದರಿಗೆ ನರೇಂದ್ರ ಮೋದಿ ಎದುರು ನಿಲ್ಲಲು ತಾಕತ್ತು ಇಲ್ಲ ಎಂದು ಸಚಿವ ಮಂಕಾಳ ವೈದ್ಯ ಟೀಕಿಸಿದರು.









