‘ಕೌಂತೇಯ’ನ ಅಖಾಡದಲ್ಲಿ ರವಿ ಪುತ್ರನ ವಿಲನ್ ಅವತಾರ!

0
5

ಬೆಂಗಳೂರು: ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಎಂದರೆ ಸಾಮಾನ್ಯವಾಗಿ ಲವರ್ ಬಾಯ್ ಪಾತ್ರಗಳೇ ಕಣ್ಮುಂದೆ ಬರುತ್ತವೆ. ಆದರೆ, ಈ ಬಾರಿ ಅವರು ತಮ್ಮ ಹಳೆಯ ಇಮೇಜ್ ಬದಿಗಿಟ್ಟು ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.

‘ಕೌಂತೇಯ’ ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ನೆಗೆಟಿವ್ (ಖಳನಾಯಕ) ಶೇಡ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗದಲ್ಲಿ ಸಂಚಲನ ಮೂಡಿಸಲು ಸಜ್ಜಾಗಿದ್ದಾರೆ.

ಏನಿದು ‘ಕೌಂತೇಯ’ನ ಮಿಸ್ಟ್ರಿ?: ಶ್ರೀ ಮಾಂಕಾಳಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಪಕ್ಕಾ ಮರ್ಡರ್ ಮಿಸ್ಟ್ರಿ ಕಥಾಹಂದರವನ್ನು ಹೊಂದಿದೆ. ಮೈಸೂರಿನ ಸುಂದರ ತಾಣಗಳಲ್ಲಿ ಈಗಾಗಲೇ ಶೇ. 70ರಷ್ಟು ಚಿತ್ರೀಕರಣವನ್ನು ಪೂರೈಸಿರುವ ಚಿತ್ರತಂಡ, ಶೀಘ್ರದಲ್ಲೇ ಕುಂಬಳಕಾಯಿ ಒಡೆಯುವ ತವಕದಲ್ಲಿದೆ.

ಬಿ.ಕೆ. ಚಂದ್ರಹಾಸ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ, ಹಿರಿಯ ನಟ ಅಚ್ಯುತ್ ಕುಮಾರ್ ಪ್ರಮುಖ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಗಳಾಗಿ ಶರಣ್ಯ ಶೆಟ್ಟಿ ನಟಿಸುತ್ತಿದ್ದಾರೆ.

ಮೂವರು ನಾಯಕಿಯರ ದರ್ಬಾರ್: ಚಿತ್ರದಲ್ಲಿ ಗ್ಲಾಮರ್‌ಗೂ ಕೊರತೆಯಿಲ್ಲ. ಮನೋರಂಜನ್‌ಗೆ ಜೋಡಿಯಾಗಿ ಹೊಸ ಪ್ರತಿಭೆ ಅನನ್ಯ ರಾಜಶೇಖರ್ ನಟಿಸುತ್ತಿದ್ದು, ಚೊಚ್ಚಲ ಚಿತ್ರದಲ್ಲೇ ಪ್ರಮುಖ ಪಾತ್ರ ಪಡೆದ ಖುಷಿಯಲ್ಲಿದ್ದಾರೆ. ಇನ್ನುಳಿದಂತೆ, ಬಿಗ್ ಬಾಸ್ ಖ್ಯಾತಿಯ ನಟಿ ಪ್ರಿಯಾಂಕಾ ತಿಮ್ಮೇಶ್ ಇದೇ ಮೊದಲ ಬಾರಿಗೆ ಖಾಕಿ ತೊಟ್ಟಿದ್ದಾರೆ. ಎಸಿಪಿ ಪಾತ್ರದಲ್ಲಿ ಖಡಕ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕರ ಮಾತು: ಕೌಂತೇಯ ಎಂದರೆ ಕುಂತಿಪುತ್ರ ಎಂದರ್ಥ. ಮಹಾಭಾರತದ ಎಳೆಗೂ ಮತ್ತು ಈ ಮರ್ಡರ್ ಮಿಸ್ಟ್ರಿಗೂ ಏನು ಸಂಬಂಧ? ಇಲ್ಲಿ ನಿಜವಾದ ಕೌಂತೇಯ ಯಾರು? ಎಂಬುದೇ ಚಿತ್ರದ ಜೀವಾಳ. ಪ್ರೇಕ್ಷಕರ ಊಹೆಗೂ ನಿಲುಕದಂತಹ ಚಿತ್ರಕಥೆಯನ್ನು ನಾವು ಸಿದ್ಧಪಡಿಸಿದ್ದೇವೆ. ರವಿ ಪುತ್ರನ ಗೆಟಪ್ ಸೀಕ್ರೆಟ್ ಆಗಿದ್ದು, ಸದ್ಯದಲ್ಲೇ ಝಲಕ್ ಬಿಡುಗಡೆ ಮಾಡುತ್ತೇವೆ, ಎಂದು ನಿರ್ದೇಶಕ ಚಂದ್ರಹಾಸ ತಿಳಿಸಿದ್ದಾರೆ.

ಹರಿ ಚುರುಕು ಸಂಭಾಷಣೆ ಮತ್ತು ಪಿ.ಎಲ್. ರವಿ ಛಾಯಾಗ್ರಹಣ ಚಿತ್ರದ ತೂಕ ಹೆಚ್ಚಿಸಿದೆ. ರೊಮ್ಯಾಂಟಿಕ್ ಹಿರೋ ಆಗಿದ್ದ ಮನೋರಂಜನ್, ಈಗ ರಗಡ್ ವಿಲನ್ ಆಗಿ ಬದಲಾಗಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

Previous articleಗಿಲ್ಲಿ ನಟ ಅಭಿನಯದ ‘ಸೂಪರ್ ಹಿಟ್’ ಚಿತ್ರದ ಟೀಸರ್ ಬಿಡುಗಡೆ
Next articleಗಣರಾಜ್ಯೋತ್ಸವಕ್ಕೆ ‘ಕಲ್ಟ್’ ದರ್ಬಾರ್: ಝೈದ್ ಖಾನ್ ಪ್ರೇಮ ವಿರಹಕ್ಕೆ ಫ್ಯಾನ್ಸ್ ಫಿದಾ!

LEAVE A REPLY

Please enter your comment!
Please enter your name here