ಪ್ರತಿ 6 ಗಂಟೆಗಳಿಗೊಮ್ಮೆ ಸ್ವಯಂಚಾಲಿತವಾಗಿ WhatsApp ಲಾಗ್ಔಟ್

0
23

ನವದೆಹಲಿ: ಮೆಸೇಜಿಂಗ್ ಆ್ಯಪ್‌ಗಳ ದುರುಪಯೋಗವನ್ನು ತಡೆಯಲು ಮತ್ತು ಸೈಬರ್‌ ಭದ್ರತೆಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, WhatsApp, Telegram, Signal, Snapchat, ShareChat ಸೇರಿದಂತೆ ಅನೇಕ ವೆಬ್‌ ಆಧಾರಿತ ಪ್ಲಾಟ್‌ಫಾರ್ಮ್‌ಗಳ ಕಾರ್ಯವಿಧಾನದಲ್ಲಿ ಮಹತ್ವದ ಬದಲಾವಣೆ ಸಂಭವಿಸಲಿದೆ.

ದೂರಸಂಪರ್ಕ ಇಲಾಖೆ (DoT) ಹೊರಡಿಸಿದ ಹೊಸ ಸುತ್ತೋಲೆಯ ಪ್ರಕಾರ, ಬಳಕೆದಾರರು ನೋಂದಣಿ ಸಮಯದಲ್ಲಿ ಬಳಸುವ ಸಿಮ್‌ ಕಾರ್ಡ್ (Subscriber Identity Module – SIM) ಮುಂದಿನ 90 ದಿನಗಳವರೆಗೆ ಆಪ್‌ಗೆ ನಿರಂತರವಾಗಿ ಲಿಂಕ್ ಆಗಿರಲೇಬೇಕು. ಸಾಧನದಲ್ಲಿ ಮೂಲ ಸಿಮ್ ಇಲ್ಲದಿದ್ದರೆ, ಬಳಕೆದಾರರಿಗೆ ಆಪ್‌ ಪ್ರವೇಶ ಸಂಪೂರ್ಣವಾಗಿ ನಿಷೇಧವಾಗುತ್ತದೆ.

WhatsApp Web ಹಾಗು ಇತರೆ ವೆಬ್ ಆಧಾರಿತ ಲಾಗಿನ್‌ಗಳಿಗೆ ದೊಡ್ಡ ಬದಲಾವಣೆ

ಹೊಸ ನಿರ್ದೇಶನದಂತೆ— WhatsApp Web, Telegram Web, Signal Web ಸೇರಿದಂತೆ ಎಲ್ಲಾ ವೆಬ್‌ ಪ್ಲಾಟ್‌ಫಾರ್ಮ್‌ಗಳು ಪ್ರತಿ 6 ಗಂಟೆಗೊಮ್ಮೆ ಬಳಕೆದಾರರನ್ನು ಸ್ವಯಂಚಾಲಿತವಾಗಿ ಲಾಗ್‌ಔಟ್ ಮಾಡಬೇಕಾಗುತ್ತದೆ. ಹೀಗಾಗಿ, ದಿನವಿಡೀ WhatsApp Web ಅನ್ನು ನಿರಂತರವಾಗಿ ತೆರೆದಿಟ್ಟು ಬಳಸುವ ಬಳಕೆದಾರರಲ್ಲಿ ವ್ಯತ್ಯಯ ಉಂಟಾಗಲಿದೆ.

ಯಾಕೆ ಹೊಸ ನಿಯಮ? ಸರ್ಕಾರದ ವಾದ ಏನು?: DoT ವರದಿ ಪ್ರಕಾರ, ಸೈಬರ್‌ ವಂಚಕರು ಮೂಲ ಸಿಮ್ ಇಲ್ಲದೆ ವಿವಿಧ ಸಾಧನಗಳಲ್ಲಿ WhatsApp ಹಾಗೂ ಇತರ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ವಂಚನೆ ನಡೆಸುತ್ತಿದ್ದರಿಂದ ಈ ನಿಯಮ ಅವಶ್ಯಕವಾಗಿದೆ. ವಂಚನೆಗಳ ಪ್ರಮುಖ ಮೂಲ ಭಾರತದ ಹೊರಗಿನಿಂದ ಆಗಿದ್ದು, ಸಿಮ್‌–ಆಧಾರಿತ ಪರಿಶೀಲನೆಯ ಮೂಲಕ ಈ ಕೆಟ್ಟ ನಡವಳಿಕೆಯನ್ನು ತಪ್ಪಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಪ್ಲಾಟ್‌ಫಾರ್ಮ್‌ಗಳಿಗೆ 120 ದಿನಗಳ ಗಡುವು: ಎಲ್ಲಾ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳು ಹೊಸ ನಿಯಮಕ್ಕೆ ಅನುಗುಣವಾಗಿ 120 ದಿನಗಳೊಳಗೆ DoT ಗೆ ಅನುಪಾಲನಾ ವರದಿ ಸಲ್ಲಿಸಬೇಕು. ವರದಿ ಸಲ್ಲಿಸದಿದ್ದರೆ Telecom Act 2023, Telecom Cybersecurity Rules ಸೇರಿದಂತೆ ಅನೇಕ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.

ಬಳಕೆದಾರರಿಗೆ ಇದು ಏನನ್ನು ಸೂಚಿಸುತ್ತದೆ? : ಮೊಬೈಲ್‌ಫೋನ್‌ನಲ್ಲಿ ಸಕ್ರಿಯ ಸಿಮ್ ಇದ್ದಾಗ ಮಾತ್ರ WhatsApp, Telegram, Signal ಸೇರಿದಂತೆ ಎಲ್ಲಾ ಆ್ಯಪ್‌ ಆಧಾರಿತ ಸಂವಹನ ಸೇವೆಗಳು ಕಾರ್ಯನಿರ್ವಹಿಸಲಿವೆ. ಸಿಮ್ ಬದಲಾವಣೆ, ಸಿಮ್ ನಿಷ್ಕ್ರಿಯಗೊಳಿಕೆ ಅಥವಾ eSIM ನಿಷ್ಕ್ರಿಯವಾದರೆ ಆ್ಯಪ್‌ಗಳಿಗೆ ಪ್ರವೇಶ ತಕ್ಷಣ ಅಸಾಧ್ಯ.

ವೆಬ್‌ ಲಾಗಿನ್‌ 6 ಗಂಟೆಗಿಂತ ಹೆಚ್ಚು ಕಾಲ ಸತತವಾಗಿ ಕಾರ್ಯನಿರ್ವಹಿಸುವುದಿಲ್ಲ: ಬಹು-ಸಾಧನ ಬಳಕೆ ಹಾಗೂ WhatsApp Web ಮೇಲೆ ಅವಲಂಬಿತವಾಗಿರುವ ಉದ್ಯೋಗಿ–ವ್ಯಾಪಾರ ಬಳಕೆದಾರರಿಗೆ ಇದು ದೊಡ್ಡ ಬದಲಾವಣೆ. ಮುಂದಿನ ದಿನಗಳಲ್ಲಿ ವಂಚನೆ, ನಕಲಿ ಸಂಖ್ಯೆಗಳ ಬಳಕೆ ಮತ್ತು ಅಂತಾರಾಷ್ಟ್ರೀಯ ಸೈಬರ್‌ ದುರುಪಯೋಗವನ್ನು ತಡೆಯುವಲ್ಲಿ ಇದು ಪರಿಣಾಮಕಾರಿ ಕ್ರಮವಾಗಬಹುದು.

ಸರ್ಕಾರದ ಈ ನಿರ್ದೇಶನವು ಈಗಾಗಲೇ ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಗೆ ಕಳುಹಿಸಲಾಗಿದ್ದು, ಮುಂದಿನ ತಿಂಗಳುಗಳಲ್ಲಿ ಹಂತ ಹಂತವಾಗಿ ಜಾರಿಗೆ ಬರಲಿದೆ.

Previous articleಉತ್ತರ ಪ್ರದೇಶ ಸಚಿವರ ಗಂಭೀರ ಟೀಕೆ: “ದೆಹಲಿ ಟ್ರಾಫಿಕ್ ತೋರಿಸುತ್ತೇನೆ”, ಡಿಕೆಶಿ ತಿರುಗುಬಾಣ
Next articleಗ್ಲಾಸ್ ತುಂಬಿದ ಲಾರಿ ಪಲ್ಟಿ – ತಪ್ಪಿದ ಭಾರೀ ಅನಾಹುತ

LEAVE A REPLY

Please enter your comment!
Please enter your name here