ಬೆಂಗಳೂರು: ದೇಶದ ಟೆಕ್ ಹಬ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರದ ಸಂಚಾರ ನಿರ್ವಹಣೆಯು ‘ಅತ್ಯಂತ ಕುಖ್ಯಾತ’ವಾಗಿದೆ ಎಂದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ (SP) ಸಂಸದ ರಾಜೀವ್ ರೈ ತೀವ್ರ ವಾಗ್ದಾಳಿ ನಡೆಸಿದರು.
ಹಾಗೇ ಈ ಟೀಕೆಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ದೆಹಲಿ ಟ್ರಾಫಿಕ್‌ನ ವಾಸ್ತವವನ್ನು ಅವರಿಗೆ ತೋರಿಸುವ ಮೂಲಕ ಸವಾಲು ಹಾಕಿದ್ದಾರೆ.
ಬೆಂಗಳೂರಿಗೆ ಭೇಟಿ ನೀಡಿದ್ದ ರಾಜೀವ್ ರೈ ಭಾನುವಾರ ತಮ್ಮ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣ ‘ಎಕ್ಸ್'(X) ಮೂಲಕ ಹಂಚಿಕೊಂಡಿದ್ದಾರೆ. “ನಗರದ ರಾಜಕುಮಾರ್ ಸಮಾಧಿ ರಸ್ತೆಯಲ್ಲಿ ಒಂದು ಗಂಟೆಗಿಂತ ಹೆಚ್ಚಿನ ಕಾಲ ಟ್ರಾಫಿಕ್‌ನಲ್ಲಿ ನಾನು ಸಿಲುಕಿಕೊಂಡಿದೆ.
ನಂತರ ಇದರಿಂದಾಗಿ ನನ್ನ ವಿಮಾನವೇ ತಪ್ಪುವ ಪರಿಸ್ಥಿತಿ ಬಂದಿತ್ತು,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಟ್ಯಾಗ್ ಮಾಡಿ ಆರೋಪಿಸಿದ್ದಾರೆ.
ರೈ, ಬೆಂಗಳೂರಿನಲ್ಲಿ ಅತಿ ಕೆಟ್ಟ ಸಂಚಾರ ನಿರ್ವಹಣೆಯಿದೆ ಎಂದು ಆರೋಪಿಸಿದ್ದು, ಸಂಚಾರ ಪೊಲೀಸರ ಮೇಲೆಯೂ ಬೇಜವಾಬ್ದಾರಿಯ ಆರೋಪ ಮಾಡಿದ್ದಾರೆ.
“ಸಂಚಾರ ಪೊಲೀಸರು ಅತ್ಯಂತ ಬೇಜವಾಬ್ದಾರಿ, ನಿಷಕ್ರಿಯೋಜಕರಾಗಿದ್ದಾರೆ. ಜೊತೆಗೆ ಫೋನ್ ಕರೆಗಳನ್ನು ಕೂಡ ಸ್ವೀಕರಿಸುವುದಿಲ್ಲ. ಇವರಿಂದಾಗಿ ಬೆಂಗಳೂರಿನಂತಹ ಸುಂದರ ನಗರದ ಹೆಸರು ಹಾಳಾಗುತ್ತಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಕೆಶಿ ತಿರುಗೇಟು: ಸಂಸದ ರಾಜೀವ್ ರೈ ಆಡಿದ ಈ ತೀಕ್ಷ್ಣ ಟೀಕೆಗೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಕ್ಷಣವೇ ಪ್ರತ್ಯುತ್ತರ ನೀಡಿದರು. “ನಾನು ದೆಹಲಿಯಲ್ಲಿ ಆ ಸಂಸದರನ್ನು ಭೇಟಿಯಾಗುತ್ತೇನೆ ಎಂದರು.
ನಂತರ ಅವರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಟ್ರಾಫಿಕ್ ನಿರ್ವಹಣೆಯನ್ನು ತೋರಿಸುತ್ತೇನೆ. ಹಾಗೇ ನಾನು ಅವರನ್ನೂ ಕೂಡ ಟ್ಯಾಗ್ ಮಾಡುತ್ತೇನೆ,” ಎಂದು ಡಿಕೆಶಿ ಸವಾಲಿನ ಧಾಟಿಯಲ್ಲಿ ಹೇಳಿದರು.
ಸಂಸದರ ಹೇಳಿಕೆಯು ಬೆಂಗಳೂರಿನ ನಾಗರಿಕರು ಹಾಗೂ ಉದ್ಯಮಿಗಳ ವಲಯದಲ್ಲಿ ಮತ್ತೊಮ್ಮೆ ಟ್ರಾಫಿಕ್ ಮತ್ತು ರಸ್ತೆ ಸಮಸ್ಯೆಗಳ ಕುರಿತು ಚರ್ಚೆ ಹುಟ್ಟುಹಾಕಿದೆ. ಇತ್ತೀಚೆಗಷ್ಟೇ ಹಲವು ಉದ್ಯಮಿಗಳು ಕೂಡ ನಗರದ ರಸ್ತೆ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದರು.

























