ದಾಂಡೇಲಿ: ಕರ್ನಾಟಕ ರಾಜ್ಯ ಗ್ರಹ ಮಂಡಳಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ದಾಂಡೇಲಿಯ ಅಂಬೇವಾಡಿಯಲ್ಲಿ ಕಳೆದ 8 ವರ್ಷಗಳಿಂದ 1106 ಜಿ+2 ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ನಿರ್ಮಾಣ ಕಾಮಗಾರಿ 12 ತಿಂಗಳಲ್ಲಿ ಬೆಂಗಳೂರಿನ ಗುತ್ತಿಗೆದಾರ ಕಂಪನಿ ಕಾಮಗಾರಿ ಫಲಾನುಭವಿಗಳಿಗೆ ನೀಡಬೇಕಿತ್ತು. ಆದರೆ ಇದುವರೆಗೆ ಕೇವಲ 100 ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ವಿತರಿಸಲಾಗಿದೆ.
84 ಮನೆಗಳ ಕಾಮಗಾರಿ ಮುಗಿದಿದೆ. ಅದನ್ನು ಫಲಾನುಭವಿಗಳಿಗೆ ವಿತರಿಬೇಕು ಉಳಿದ 914 ಮನೆಗಳ ಕಾಮಗಾರಿ ಪ್ರಾರಂಭಿಸಿ, ಬೇಗ ಮುಗಿಸಿ ಫಲಾನುಭವಿಗಳಿಗೆ ವಿತರಿಸುವಂತೆ ಆಗ್ರಹಿಸಿ ಫಲಾನುಭವಿಗಳು ದಾಂಡೇಲಿ ಸಮಗ್ರ ಅಭಿವ್ರದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ ನೇತ್ರತ್ವದಲ್ಲಿ ಸ್ಥಳೀಯ ನಗರ ಸಭೆ ಕಛೇರಿ ಎದುರಿಗಿರುವ ಡಾ.ಬಾಬಾಸಾಹೇಬ ಅಂಬೇಡ್ಕರ ಪ್ರತಿಮೆ ಎದುರು ಸರದಿ ಧರಣಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
ರಾಜ್ಯ ಗೃಹ ಮಂಡಳಿ 1106 ಫಲಾನುಭವಿಗಳಿಗೆ ಮನೆ ವಿತರಿಸುವುದಾಗಿ ಹೇಳಿ ಫಲಾನುಭವಿಗಳಿಂದ 50 ರಿಂದ 70 ಸಾವಿರ ರೂಪಾಯಿ ಹಣ ಪಾವತಿಸಿಕೊಂಡಿತ್ತು. 12 ತಿಂಗಳ ನಂತರ ಮನೆ ಫಲಾನುಭವಿಗಳಿಗೆ ವಿತರಿಸುವ ಭರವಸೆನೀಡಿತ್ತು. ಆದರೆ 8 ವರ್ಷಗಳಾದರೂ ಮನೆ ನೀಡಿಲ್ಲ. ಒಟ್ಟೂ 53 ಕೋಟಿ ರೂಪಾಯಿ ವೆಚ್ಚದ 1106 ಮನೆಗಳ ನಿರ್ಮಾಣ ಕಾಮಗಾರಿಯ ಕೆಲಸ ಅರ್ಧದಷ್ಟು ಆಗದೇ ಇರುವಾಗಲೇ ಗೃಹ ಮಂಡಳಿ ಅಧಿಕಾರಿಗಳ ಶಾಮೀಲಾತಿಯೊಂದಿಗೆ ಗುತ್ತಿಗೆದಾರ ಕಂಪನಿ 38 ಕೋಟಿ ಹಣ ಬಿಲ್ ಪಾವತಿಸಿಕೊಂಡಿದ್ದಾರೆ.
ಈಗ ಕೆಲಸ ಮಾಡಲು ಹಣವಿಲ್ಲ. ಯೋಜನಾವೆಚ್ಚ ಹೆಚ್ಚಾಗಿದೆ ಎಂದು ಸಕಾ೯ರದ ಅನುದಾನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆನ್ನಲಾಗಿದೆ. . ಅಧಿಕಾರಿಗಳು, ಗುತ್ತಿಗೆದಾರ ಕಂಪನಿಯ ನಡುವೆ ಫಲಾನುಭವಿಗಳು ಸಾಲ ಮಾಡಿ ಸೂರಿಗಾಗಿ ಗೃಹ ಮಂಡಳಿಗೆ ಹಣ ಕಟ್ಟಿ ವಂಚನೆಗೊಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ನೊಂದ ಫಲಾನುಭವಿಗಳು ಹೋರಾಟಕ್ಕೆ ಇಳಿದಿದ್ದು ಸ್ಥಳೀಯ ಶಾಸಕರು, ನಗರಸಭೆ, ಗೃಹ ಮಂಡಳಿ ಧರಣಿ ಸ್ಥಳಕ್ಕೆ ಬಂದು ಸಮಸ್ಯೆ ಇತ್ಯರ್ಥಪಡಿಸುವವರೆಗೆ ಹೋರಾಟ ಮುಂದುವರಿಸಲಾಗುವದೆಂದು ತಿಳಿಸಿದ್ದಾರೆ.