ದಾವಣಗೆರೆ: ರಾಮನಗರ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಗೋಮಾಳ ಜಾಗವನ್ನು ಅತಿಕ್ರಮಿಸಿ ನಿರ್ಮಿಸಿಕೊಂಡಿದ್ದ ಮನೆಗಳ ತೆರವು ಕಾರ್ಯಾಚರಣೆಗೆ ಅಲ್ಲಿನ ನಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಘಟನೆ ಶನಿವಾರ ನಡೆಯಿತು.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅಲ್ಲಿನ ಸುಮಾರು 40 ಮನೆಗಳನ್ನು ತಹಶಿಲ್ದಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜೆಸಿಬಿಯಿಂದ ತೆರವುಗೊಳಿಸಲಾಯಿತು. ಈ ತೆರವು ಕಾರ್ಯಕ್ಕೆ ಅಲ್ಲಿನ ನಿವಾಸಿಗಳು ಜೆಸಿಬಿ ಅಡ್ಡಗಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದೊಂದು ಪಾರ್ಕ್ ಜಾಗವಾಗಿದ್ದು, ಇಲ್ಲಿ ಅತಿಕ್ರಮಣ ಮಾಡಿಕೊಂಡು ಮನೆ ನಿರ್ಮಿಸಲಾಗಿದೆ. ಆದ್ದರಿಂದ ಕೂಡಲೇ ತೆರವುಗೊಳಿಸುವಂತೆ ಒಂದು ತಿಂಗಳ ಹಿಂದೆಯೇ ತಪಶೀಲ್ದಾರ್ ನೋಟಿಸ್ ನೀಡಿದ್ದರು. ನಿರಾಶ್ರಿತ ಕೇಂದ್ರಕ್ಕೆ ತೆರಳುವಂತೆ ಸೂಚನೆ ನೀಡಿದ್ದರೂ ತೆರವುಗೊಳಿಸದ ಹಿನ್ನೆಲೆ ಶನಿವಾರ ತೆರವು ಕಾರ್ಯಚರಣೆ ನಡೆಯಿತು. ನಿವಾಸಿಗಳು ಅಧಿಕಾರಿಗಳ ಕೈಕಾಲು ಹಿಡಿದು ಬೇಡಿಕೊಂಡರೂ ಕಾರ್ಯಚರಣೆ ಮುಂದುವರೆದ್ದರಿಂದ ಮಹಿಳೆಯರು ಜೆಸಿಬಿ ಕೆಳಗೆ ಮಲಗಿ ಅಡ್ಡಿಪಡೆಸಲು ಮುಂದಾದರು.
ತಡೆಯೊಡ್ಡಲು ಮುಂದಾದ ಮಹಿಳೆಯರನ್ನು ಮಕ್ಕಳನ್ನು ಪೊಲೀಸರು ಎಳೆದಾಡಿದರು. ಅಲ್ಲಿನ ಪಾಲಿಕೆ ಮಾಜಿ ಸದಸ್ಯ ಪಾಮೇನಹಳ್ಳಿ ನಾಗರಾಜ್ ಕೂಡ ತಡೆಯಲು ಅಡ್ಡಬಂದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಕಾರಣ ಪೊಲೀಸ್ ಬಿಗಿ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಯಿತು.


























