ಭೂ ವಿವಾದ: ಕುಮಾರಸ್ವಾಮಿ ವಿರುದ್ಧದ ಆರೋಪ, ಹೈಕೋರ್ಟ್‌ನಿಂದ ನಿರ್ದೇಶನ!

0
27

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸುತ್ತ ಈಗ ಭೂ ವಿವಾದದ ಬಿಸಿ ಏರಿದೆ. ರಾಮನಗರ ಜಿಲ್ಲೆಯ ಕೇತಗಾನಹಳ್ಳಿ ಗ್ರಾಮದ ಬಳಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ.

ಈ ಪ್ರಕರಣದ ಸಮಗ್ರ ವರದಿಯನ್ನು ಸಲ್ಲಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗೆ ಹೈಕೋರ್ಟ್ ಸೂಚನೆ ನೀಡಿದ್ದು, ಬೇರೆಯವರಿಗೆ ಮಂಜೂರಾಗಿದ್ದ ಭೂಮಿಯನ್ನು ಖರೀದಿಸಿದ್ದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ಹಾಜರುಪಡಿಸುವಂತೆ ತಾಕೀತು ಮಾಡಿದೆ.

ಪ್ರಕರಣದ ಹಿನ್ನೆಲೆ ಮತ್ತು ಹೈಕೋರ್ಟ್‌ನ ಪ್ರಶ್ನೆ: ಕೇತಗಾನಹಳ್ಳಿ ಸರ್ವೆ ನಂಬರ್ 8, 9, 10, 16, 17 ಮತ್ತು 79ರಲ್ಲಿ ಸುಮಾರು 14 ಎಕರೆ ಸರ್ಕಾರಿ ಭೂಮಿಯನ್ನು ಎಚ್.ಡಿ. ಕುಮಾರಸ್ವಾಮಿ ಸಂಬಂಧಿ ಹಾಗೂ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಸೇರಿದಂತೆ ಹಲವರು ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಬಹಳ ಹಿಂದಿನಿಂದಲೂ ಇದೆ.

ಈ ಬಗ್ಗೆ ಲೋಕಾಯುಕ್ತ ವರದಿಯೂ ಇದ್ದು, ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳುವಂತೆ 2020ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ಆದರೆ, ಈ ಆದೇಶವನ್ನು ಜಾರಿಗೆ ತಂದಿಲ್ಲ ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಇದರ ಬೆನ್ನಲ್ಲೇ ಸರ್ಕಾರ ಐಎಎಸ್ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ 2025ರ ಜನವರಿ 28ರಂದು ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ಎಸ್‌ಐಟಿ ರಚನೆಗೆ ತಡೆ ನೀಡಿತ್ತು. ಈಗ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ಕೆ ರಾಜೇಶ್‌ ರೈ ವಿಭಾಗೀಯ ಪೀಠ ನಡೆಸುತ್ತಿದೆ.

ವಿಚಾರಣೆ ಸಂದರ್ಭದಲ್ಲಿ, “ಬೇರೆಯವರಿಗೆ ಮಂಜೂರಾಗಿದ್ದ ಭೂಮಿಯನ್ನು ಖರೀದಿಸಿದ್ದರೆ ಅದಕ್ಕೆ ದಾಖಲೆ ಇರಬೇಕಲ್ಲವೇ? ಅವುಗಳನ್ನು ಸಲ್ಲಿಸಿ” ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿದ್ದು, ಕುಮಾರಸ್ವಾಮಿ ಪರ ವಕೀಲರಿಗೆ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದೆ.

ಕುಮಾರಸ್ವಾಮಿ ಪರ ವಾದ ಮತ್ತು ನ್ಯಾಯಪೀಠದ ಪ್ರತಿಕ್ರಿಯೆ: ಕುಮಾರಸ್ವಾಮಿ ಪರ ಹಿರಿಯ ವಕೀಲ ಉದಯ ಹೊಳ್ಳ “ಇದು ರಾಜಕೀಯ ಪ್ರೇರಿತ ದೂರು. ದೂರುದಾರ ಜಿ. ಮಾದೇಗೌಡ ಕುಮಾರಸ್ವಾಮಿ ರಾಜಕೀಯ ಎದುರಾಳಿ. ನಮ್ಮ ಅರ್ಜಿದಾರರ ಜಮೀನು ಶುದ್ಧ ಕ್ರಯಪತ್ರ ಹೊಂದಿದೆ. ಒತ್ತುವರಿಯಾಗಿದ್ದರೆ ಅದನ್ನು ಬಿಟ್ಟುಕೊಡುತ್ತಿದ್ದರು” ಎಂದು ವಾದ ಮಂಡಿಸಿದರು.

ಅಲ್ಲದೆ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ (2020 ಜೂನ್ 6), ರಾಮನಗರ ಜಿಲ್ಲಾಧಿಕಾರಿ (2020 ಏಪ್ರಿಲ್ 7) ಮತ್ತು ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ (2021 ಮಾರ್ಚ್ 3) ಅವರು ನೀಡಿದ ವರದಿಗಳು ಕುಮಾರಸ್ವಾಮಿ ಪರವಾಗಿವೆ ಎಂದು ತಿಳಿಸಿದರು.

ಆದರೆ ನ್ಯಾಯಪೀಠವು ಈ ವಾದಗಳನ್ನು ಆಲಿಸಿ, ವಿವಾದಿತ ಜಮೀನಿಗೆ ಸಂಬಂಧಿಸಿದಂತೆ ರಾಮನಗರ ಜಿಲ್ಲಾಧಿಕಾರಿ ಸಮಗ್ರ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ. ಅಲ್ಲದೆ, ಏಕಸದಸ್ಯ ಪೀಠದ ಆದೇಶಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಇದೇ 27ರವರೆಗೆ ವಿಸ್ತರಿಸಿ ವಿಚಾರಣೆಯನ್ನು ಮುಂದೂಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಕುತೂಹಲ ಮೂಡಿಸಿದ್ದು, ಜಿಲ್ಲಾಧಿಕಾರಿಗಳ ವರದಿ ಏನಾಗಿರಲಿದೆ ಎಂಬುದು ಕಾದು ನೋಡಬೇಕಿದೆ.

Previous articleಚಾಮರಾಜನಗರ: ಕನ್ನಡ ರಾಜ್ಯೋತ್ಸವ, ಗಡಿನಾಡಿನಲ್ಲಿ ತಯಾರಿ ಹೇಗಿದೆ?
Next articleಸೆಹ್ವಾಗ್ ದಾಂಪತ್ಯದಲ್ಲಿ ಬಿರುಕು: ಕಾರಣ ಬಿಸಿಸಿಐ ಅಧ್ಯಕ್ಷ? ವೈರಲ್ ಆಗ್ತಿರುವ ಸುದ್ದಿಗಳು!

LEAVE A REPLY

Please enter your comment!
Please enter your name here