ಅಡಿಕೆ ಬೆಳೆದ ರೈತರನ್ನು ಕಾಡುತ್ತಿದೆ ಎಲೆಚುಕ್ಕಿ, ಕೊಳೆ ರೋಗ

0
53

ಅಡಿಕೆ ಬೆಳೆದ ಮಲೆನಾಡು ಭಾಗದ ರೈತರು ಕೂಲಿಯಾಳುಗಳ ಕೊರತೆ, ಕಾಡು ಪ್ರಾಣಿಗಳ ಕಾಟ, ಎಲೆಚುಕ್ಕಿ, ಕೊಳೆ ರೋಗ ಸೇರಿದಂತೆ ನಾನಾ ಕಾರಣದಿಂದ ಕಂಗೆಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಭಾರೀ ಮಳೆಯಾಗುತ್ತಿದ್ದು, ಕೊಳೆ ರೋಗ ತೋಟವನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಸಹ ಈ ಕುರಿತು ಮಾತನಾಡಿದ್ದಾರೆ. “ಎಲೆಚುಕ್ಕಿ ರೋಗ ಹಾಗೂ ಅಡಿಕೆ ಕೊಳೆ ರೋಗವು ಮಲೆನಾಡಿನ ರೈತರ ಜೀವನದ ಆರ್ಥಿಕತೆಯನ್ನು ಕಸಿಯುತ್ತಿದ್ದು, ಕೃಷಿ ವಿಜ್ಞಾನಿಗಳು ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಗುಣಪಡಿಸುವ ಕಾರ್ಯ ಮಾಡಬೇಕು” ಎಂದು ಕರೆ ನೀಡಿದ್ದಾರೆ.

ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ವಿಶ್ವವಿದ್ಯಾಲಯದ 13ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಶಾಸಕರು ಮಾತನಾಡಿದರು.

“ಮಲೆನಾಡಿನ ಭಾಗದಲ್ಲಿ ಅಡಿಕೆ ಮರಕ್ಕೆ ಎಲೆಚುಕ್ಕಿ ರೋಗ ಹಾಗೂ ಹೆಚ್ಚಿನ ಮಳೆಯಿಂದಾಗಿ ಅಡಿಕೆ ಕೊಳೆ ರೋಗ ಉಂಟಾಗಿದ್ದು, ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗುತ್ತಿದ್ದಾರೆ” ಎಂದರು.

“ಎತ್ತರಕ್ಕೆ ಬೆಳೆಯಬೇಕಾದ ಮರಗಳು ಈ ರೋಗದಿಂದ ನೆಲಕಚ್ಚುತ್ತಿವೆ. ಹಾಗಾಗಿ ಕೃಷಿ ವಿಜ್ಞಾನಿಗಳು ಸ್ಥಳೀಯ ಹಾಗೂ ಅಂತರಾಷ್ಟ್ರೀಯ ವಿಜ್ಞಾನಿಗಳೊಂದಿಗೆ ಚರ್ಚಿಸಿ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿ ಔಷಧಿಯನ್ನು ಕಂಡುಹಿಡಿಯಬೇಕು. ಇದರಿಂದ ರೈತರ ಬದುಕಿಗೆ ಅನುಕೂಲಕವಾಗುತ್ತದೆ” ಎಂದು ಕರೆ ಕೊಟ್ಟರು.

“ರೈತರು ಪ್ರಗತಿಯಾದಾಗ ಮಾತ್ರ ಈ ದೇಶ ಪ್ರಗತಿಯಾಗುವುದು. ಆದ್ದರಿಂದ ರೈತರ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಬೇಕು. ಅದರಿಂದ ಅವರ ಆದಾಯವೂ ಕೂಡ ಹೆಚ್ಚಾಗುತ್ತದೆ. ಆದರೆ ಇತ್ತೀಚಿಗೆ ಕೃಷಿ ವಲಯವು ಸಾಕಷ್ಟು ನಷ್ಟಕ್ಕೀಡಾಗಿದ್ದು, ಉತ್ಪಾದನೆಯಲ್ಲಿ ಹಿನ್ನೆಡೆ ಅನುಭವಿಸುತ್ತಿದೆ. ಹಾಗಾಗಿ ರೈತರು ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅವಳಡಿಸಿಕೊಳ್ಳಬೇಕು” ಎಂದರು.

“ಕೃಷಿ, ತೋಟಗಾರಿಕೆ ಇಲಾಖೆಗಳು ವಿಶ್ವವಿದ್ಯಾಲಯದ ಮೂಲಕ ಹಲವಾರು ಯೋಜನೆಗಳನ್ನು ರೈತರಿಗೆ ತಲುಪಿಸುವಂತಹ ಕಾರ್ಯ ಮಾಡುತ್ತಿದೆ. ರೈತರು ಇದರ ಸದುಪಯೋಗ ಪಡೆದು, ಯಾವುದೇ ನಷ್ಟ ಅನುಭವಿಸದೆ ಕೃಷಿ ಉತ್ಪನ್ನಗಳನ್ನು ಬೆಳೆಯಬೇಕು. ಆ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ರೈತರು ಇಂತಹ ಕಾರ್ಯಸಾಧನೆ ಮಾಡಲು ವಿಶ್ವವಿದ್ಯಾಲಯಗಳು, ಇಲ್ಲಿನ ವಿಜ್ಞಾನಿಗಳು ಕೂಡ ಸಹಕಾರ ನೀಡಬೇಕು” ಎಂದು ಶಾಸಕರು ತಿಳಿಸಿದರು.

ಸಂಸ್ಥಾಪನಾ ದಿನದ ಉಪನ್ಯಾಸ ನೀಡಿದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಟಿ.ಎಸ್.ಹೂವಯ್ಯ ಗೌಡ, “ಒಂದು ಸಂಸ್ಥೆಯ ಪ್ರಾರಂಭ, ಅದರ ಬೆಳವಣಿಗೆ, ಅದು ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ತಿಳಿಸಲು ಇಂತಹ ಸಂಸ್ಥಾಪನಾ ದಿನ ಆಚರಣೆ ಮಾಡಲಾಗುತ್ತದೆ. ಅದರಂತೆ ಕೆಳದಿ ಶಿವಪ್ಪನಾಯಕರ ಹೆಸರು ಪಡೆದಿರುವ ವಿಶ್ವವಿದ್ಯಾಲಯವು ತನ್ನದೇ ಆದ ಅನೇಕ ಸಾಧನೆಗಳನ್ನು ಜನರಿಗೆ ತಿಳಿಸುವ ದಿಸೆಯಲ್ಲಿ ಈ ಆಚರಣೆ ಮಾಡಿಕೊಳ್ಳುತ್ತಿದೆ. ಶಿಸ್ತಿಗೆ ಇನ್ನೊಂದು ಹೆಸರೇ ಶಿವಪ್ಪನಾಯಕ. ಅವರ ಆಡಳಿತ ಅವಧಿಯಲ್ಲಿ ಅವರು ವಿಧಿಸಿದ ಕಂದಾಯ ತೆರಿಗೆ ವೈಜ್ಞಾನಿಕತೆಯಿಂದ ಕೂಡಿತ್ತು. ಹಾಗಾಗಿ ಈಗಲೂ ಶಿವಪ್ಪನಾಯಕರ ತೆರಿಗೆ ನೀತಿ ರಾಜ್ಯಕ್ಕೆ ಮಾದರಿಯಾಗಿದೆ” ಎಂದರು.

“ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಗಳನ್ನು ರಾಜ್ಯದಲ್ಲಿ ಸ್ಥಾಪಿಸುವ ಮೂಲಕ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದು, ವಿಜ್ಞಾನದ ವಿದ್ಯಾರ್ಥಿಗಳು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಸ್ವಾಮಿನಾಥನ್, ವರ್ಗೀಸ್‌ರಂತಹ ವಿಜ್ಞಾನಿಗಳ ಆಹಾರ ಕ್ರಾಂತಿ, ಹಸಿರು ಕ್ರಾಂತಿಗಳ ಮೂಲಕ ರೈತರಿಗೆ ಸಹಕಾರಿಯಾಗಿದ್ದಾರೆ. ನೀವುಗಳು ಇಂತಹ ಮಾರ್ಗದಲ್ಲಿ ಸಾಗಬೇಕು. ವಿಜ್ಞಾನದಲ್ಲಿ ಮಿತಿಯಿಲ್ಲದಷ್ಟು ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳಬೇಕು. ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ತರಬೇಕು” ಎಂದು ಸಲಹೆ ನೀಡಿದರು.

Previous articleದಾವಣಗೆರೆ: ವಿವಾದಕ್ಕೆ ಕಾರಣವಾದ ಆಕ್ಷೇಪಾರ್ಹ ಫ್ಲೆಕ್ಸ್
Next articleರೈಲು ಆಧಾರಿತ ಲಾಂಚರ್‌ನಿಂದ ಅಗ್ನಿ-ಪ್ರೈಮ್ ಕ್ಷಿಪಣಿ ಯಶಸ್ವಿ ಪರೀಕ್ಷೆ

LEAVE A REPLY

Please enter your comment!
Please enter your name here