ಬಾಗಲಕೋಟೆ: ಉಚ್ಚಾಟನೆ ಅಧಿಕಾರ ಟ್ರಸ್ಟಿಗೆ ಇಲ್ಲ, ಹೊಸ ಪೀಠ ಕಟ್ಟುವುದಿಲ್ಲ

0
31

ಬಾಗಲಕೋಟೆ: ಲಿಂಗಾಯತ ಪಂಚಮಸಾಲಿ ಪೀಠವನ್ನು ಕಲ್ಲುಮಣ್ಣಿನಿಂದ ಕಟ್ಟಿಲ್ಲ, ಭಕ್ತರ ಮನಸ್ಸಿನಲ್ಲಿ ಕಟ್ಟಿದ್ದೇನೆ, ನನ್ನನ್ನು ತೆಗೆದು ಹಾಕುವ ಅಧಿಕಾರ ಪರಮಾತ್ಮನ ಸ್ವರೂಪಿಯಾದ ಭಕ್ತರ ಕೈಯಲ್ಲಿದೆ ಹೊರತು ಯಾವುದೇ ಟ್ರಸ್ಟಿಗೆ ಇಲ್ಲ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ `ತಮ್ಮ ಉಚ್ಚಾಟನೆಯ ಟ್ರಸ್ಟ್ ನಿರ್ಧಾರ’ಕ್ಕೆ ತಿರುಗೇಟು ನೀಡಿದ್ದಾರೆ.

ಸೋಮವಾರ ಮಧ್ಯಾಹ್ನ ಬೆಂಬಲಿಗ ಭಕ್ತರೊಂದಿಗೆ ಕೂಡಲಸಂಗಮದ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಸ್ವಾಮೀಜಿ ಕಾಲ್ನಡಿಗೆಯಲ್ಲೇ ಭಕ್ತರೊಂದಿಗೆ ಐಕ್ಯಮಂಟಪ, ಶ್ರೀಸಂಗಮನಾಥನ ದರ್ಶನ ಪಡೆದರು. ನಂತರ ಅದೇ ಪ್ರಾಂಗಣದ ಆಲದ ಮರದ ಬಳಿ ಭಕ್ತರ ಸಭೆ ನಡೆಸಿದರು. ಶ್ರೀಗಳನ್ನು ಹೂಮಾಲೆ ಹಾಕಿ ಸ್ವಾಗತಿಸಿದ ಭಕ್ತರು, ಶ್ರೀಗಳನ್ನು ಪೀಠದಿಂದ ಉಚ್ಚಾಟಿಸಿರುವುದಾಗಿ ಘೋಷಿಸಿರುವ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಧಿಕ್ಕಾರ ಕೂಗಿದರು.

ನಂತರ ಸಭೆಯಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಸ್ವಾಮೀಜಿ, ಯಾವುದೇ ಧರ್ಮಗುರುಗಳನ್ನು ಉಚ್ಚಾಟನೆ ಮಾಡುವ ಅಧಿಕಾರ ಇರೋದು ಕೇವಲ ಭಕ್ತರಿಗೆ ಮಾತ್ರ. ಉಚ್ಚಾಟನೆ ಏಕಪಕ್ಷೀಯ, ಕಾನೂನು ಬಾಹೀರವಾಗಿದೆ. ಭಕ್ತರ ತೀರ್ಮಾನವೇ ಅಂತಿಮ. ಮೂರನಾಲ್ಕು ದಿನದಲ್ಲಿ ಕೂಡಲಸಂಗಮದಲ್ಲಿ ರಾಜ್ಯ ಮಟ್ಟದ ಸಭೆಯನ್ನು ಕರೆಯುತ್ತೇನೆ. ಸಭೆಯಲ್ಲಿ ಭಕ್ತರು ಏನು ಹೇಳುತ್ತಾರೆಯೋ ಹಾಗೆ ಮಾಡುತ್ತೇನೆ. ಹೊಸ ಪೀಠ ಕಟ್ಟುವುದಿಲ್ಲ, ಆದರೆ ಕೂಡಲಸಂಗಮದಲ್ಲಿಯೇ ಮತ್ತೊಂದು ಮಠ ಕಟ್ಟುವ ವಿಚಾರವಿದೆ ಎಂದರು.

ಕೂಡಲಸಂಗಮದಲ್ಲಿ 13 ಗುಂಟೆ, ದಾವಣಗೆರೆಯಲ್ಲಿ ಭಕ್ತರು ದಾನ ಮಾಡಿದ ಭೂಮಿಯಿದೆ. ಅಲ್ಲಿ ನಾನು ಯಾವ ಚಟುವಟಿಕೆ ಮಾಡಿಲ್ಲ. ಇವತ್ತಿನವರೆಗೆ ಭಕ್ತರ ಕಾಣಿಕೆ, ಮಠದ ಆಸ್ತಿಯಿಂದ ವೈಯಕ್ತಿಕವಾಗಿ ಏನನ್ನೂ ಮಾಡಿಕೊಂಡಿಲ್ಲ. ಸುಖಾಸುಮ್ಮನೆ ತೇಜೋವಧೆ ಮಾಡುವ ಕೆಲಸ ಮಾಡಬಾರದು. ಜನರಿಗೆ ಸತ್ಯ ಏನು ಅಂತ ಗೊತ್ತಿದೆ. ಏನೆ ಬಂದರೂ ಗಟ್ಟಿಯಾಗಿ ಎದುರಿಸುತ್ತೇನೆ ಎಂದು ನುಡಿದರು.

2ಎ ಮೀಸಲಾತಿ ಪಾದಯಾತ್ರೆ ಶುರುವಾದಾಗಿನಿಂದ ಇಂಥ ನೂರಾರು ಷಡ್ಯಂತ್ರ ಮಾಡುತ್ತಲೇ ಬಂದಿದ್ದಾರೆ. ನಾನು ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಮಠವನ್ನು ಭಕ್ತರು ಎಲ್ಲಿ ತೋರಿಸುತ್ತಾರೋ ಅಲ್ಲಿ ಆರಂಭಿಸುತ್ತೇನೆ ಎಂದರು.

Previous articleಶಿವಮೊಗ್ಗ: ಜಿಎಸ್‌ಟಿಯಿಂದ ದೇಶದ ಆರ್ಥಿಕ ಅಭಿವೃದ್ಧಿ – ವಿಜಯೇಂದ್ರ
Next articleಹುಬ್ಬಳ್ಳಿ – ಕೊಲ್ಲಂ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು, ವೇಳಾಪಟ್ಟಿ

LEAVE A REPLY

Please enter your comment!
Please enter your name here