ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಬರುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಆಳಂದ ತಾಲೂಕಿನ ಮಾಡಿಯಾಳ ಕೆರೆ ಒಡೆದು ಗ್ರಾಮಕ್ಕೆ ನೀರು ನುಗ್ಗಿ 50ಕ್ಕೂ ಹೆಚ್ಚು ಕುಟುಂಬಗಳ ಸಾಮಗ್ರಿ ಹಾನಿಯಾಗಿವೆ. ಅಲ್ಲದೆ, ಕೆರೆ ನೀರಿನ ಪ್ರವಾಹಕ್ಕೆ ನೂರಾರು ಎಕರೆ ಬೆಳೆ ಹಾಗೂ ಹಳ್ಳದ ದಂಡೆಯ ಜಮೀನುಗಳ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಅಪಾರ ಹಾನಿಯಾಗಿದೆ.
ಅಲ್ಲದೆ ಕೆರೆ ನೀರು ಗ್ರಾಮದೊಳಗೆ ಅಗಸಿ ಹಳ್ಳ ಉಕ್ಕಿ ತುಂಬಿ ಬಂದು ಹನುಮಾನ ದೇವಸ್ಥಾನ ಜಲಾವೃತಗೊಂಡಿದೆ. ಮನೆಗಳಿಗೆ ನುಗ್ಗಿದ ನೀರಿನಿಂದ ನಿದ್ದೆಯಿಲ್ಲದೆ ರಾತ್ರಿ ಇಡೀ ನಿವಾಸಿಗಳು ಕಂಗಾಲಾಗಿ ಪರದಾಡಿದ್ದಾರೆ.
ಗ್ರಾಮಕ್ಕೆ ಕುಡಿಯುವ ನೀರಿನ ಟ್ಯಾಂಕ್ ಸ್ಥಳದಲ್ಲಿ ನೀರಿನ ಪ್ರವಾಹದಿಂದಾಗಿ ದೊಡ್ಡ ಬದು ಕೊಚ್ಚಿ ಹೋಗಿದೆ. ಕೆರೆ ಕೆಳಭಾಗದ ಸೇತುವೆ ಹಾನಿಯಾಗಿ 10 ಅಡಿ ತೆಗ್ಗುಬಿದ್ದು ಮಾಡಿಯಾಳದಿಂದ ಆಳಂದಕ್ಕೆ ಸಂಪರ್ಕ ರಸ್ತೆ ಸಂಚಾರ ಸದ್ಯ ಅವ್ಯವಸ್ಥೆಯಿಂದ ಕೂಡಿದೆ. ಮಾಡಿಯಾಳ ಕೆರೆ ಒಡೆದ ಸ್ಥಳಕ್ಕೆ ಜಿಪಂ ಎಇಇ ಸಂಗಮೇಶ ಬಿರಾದಾರ ಪರಿಶೀಲಿಸಿ ಹಾನಿಯ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕಮಲಾಪುರ ತಾಲೂಕಿನ ಮಹಾಗಾಂವ-ಆಳಂದ ರಾಜ್ಯ ಹೆದ್ದಾರಿಯಲ್ಲಿರುವ ಸೇತುವೆ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡು ಭಾನುವಾರ ಇಡೀ ದಿನ ಸಂಚಾರ ಅಸ್ತವ್ಯಸ್ತಗೊಂಡ ಪರಿಣಾಮ ಪ್ರಯಾಣಿಕರು ಪರದಾಡಿದರು. ಸೇತುವೆ ಮೇಲಿಂದ ನೀರು ಹರಿದು ಸಾಕಷ್ಟು ತೊಂದರೆಯನ್ನುಂಟು ಮಾಡಿತು.
ಶನಿವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಬೆಳಕೋಟಾ ಬಳಿಯ ಗಂಡೋರಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾದ ಕಾರಣ ಜಲಾಶಯ ಭರ್ತಿಯಾಯಿತು, 6,700 ಕ್ಯೂಸೆಕ್ ನೀರು ಬಿಡಲಾಯಿತು, ಬೆಳಗ್ಗೆ ನೀರು ಹರಿದು ಬಂದು ಸೇತುವೆ ಮುಳುಗಡೆಯಾಯಿತು.
ಈ ಮಾರ್ಗದಲ್ಲಿರುವ ಮಹಾಗಾಂವ ಕ್ರಾಸ್, ಮಹಾಗಾಂವ್, ಮಹಾಗಾಂವ ತಾಂಡಾ, ಮಡಕಿ, ಮಡಕಿ ತಾಂಡಾ, ಅಂಬಲಗಾ, ಮುಗಳಿ, ಮುಗಳಿ ತಾಂಡಾ, ಲೇಂಗಟಿ, ವಿಕೆ ಸಲಗರ ತಾಂಡಾ, ವಿಕೆ ಸಲಗರ, ಮುರಡಿ, ಮುದ್ದಡಗಾ ಗ್ರಾಮಗಳ ಪ್ರಯಾಣಿಕರು ನಿತ್ಯದ ಬೇಡಿಕೆಗಳ ಪೂರೈಕೆಗಾಗಿ ಕಲಬುರಗಿ, ಕಮಲಾಪುರ, ಮಹಾಗಾಂವ ಕ್ರಾಸ್‌ಗೆ ಪ್ರಯಾಣಿಸದೆ ಹಿಂದಿರುಗಿದರು.
ನಿರಂತರ ಮಳೆಯಿಂದ ಕಂಗೆಟ್ಟಿದ್ದ ರೈತರು ತಮ್ಮ ತಮ್ಮ ಜಮೀನಿನಲ್ಲಿ ಅಳಿದುಳಿದ ಬೆಳೆ ಉಳಿಸಿಕೊಳ್ಳಲು ಜಮೀನಿಗೆ ಹೋಗಬೇಕೆಂದರೆ ಸೇತುವೆ ಮುಳುಗಡೆಯಾಗಿದ್ದರಿಂದ ಮನೆಯಲ್ಲಿಯೇ ಉಳಿದರು, ಈಗಾಗಲೇ ಪರೀಕ್ಷೆ ಪೂರ್ಣಗೊಂಡು ದಸರಾ ರಜೆ ಆರಂಭವಾಗಿದ್ದರಿಂದ ಶಾಲಾ ಮಕ್ಕಳಿಗೆ ಯಾವುದೇ ಸಮಸ್ಯೆಯಾಗಲಿಲ್ಲ. ನಿರಂತರವಾಗಿ ನೀರು ಬಂದು ಸೇತುವೆಯ ಅಕ್ಕಪಕ್ಕದ ಜಮೀನುಗಳು ಜಲಾವೃತವಾಗಿದ್ದು ಬೆಳೆ ನಾಶವಾಗಿ ರೈತರು ದಿಕ್ಕು ತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
ಮುನ್ನೆಚ್ಚರಿಕೆ ವಹಿಸಲು ಸೂಚನೆ: ಬೆಣ್ಣೆತೋರಾ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಸತತವಾಗಿ ಮಳೆ ಬರುತ್ತಿರುವುದರಿಂದ ಜಲಾಶಯವು 100 ತುಂಬಿರುತ್ತದೆ. ಸದ್ಯ ಒಳಹರಿವು 43,000 ಕ್ಯೂಸೆಕ್ ಇದ್ದು ಹೊರಹರಿವು 46,000 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ನದಿಗೆ ಒಳಹರಿವು ಹೆಚ್ಚಾಗಿದ್ದು ಇನ್ನು ಹೆಚ್ಚಿನ ನೀರು ನದಿಗೆ ಹರಿಸಲಾಗುವುದರಿಂದ ನದಿ ದಂಡಿಗೆ ಜನ ಜಾನುವಾರುಗಳು ಹೋಗದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚಿಸಿದೆ.