“ಎಲ್ಲಾ ಗೊಂದಲ ಸರಿಪಡಿಸಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಸಾಮಾಜಿಕ ನ್ಯಾಯ ಒದಗಿಸುತ್ತೇವೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ರಾಮನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಏರ್ಪಡಿಸಿದ್ದ ಮಾಜಿ ಸಿಎಂ ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ಜಾತಿಗಣತಿ ವಿಚಾರವಾಗಿ ಸರ್ಕಾರದ ವಿರುದ್ಧ ಟೀಕೆ ವ್ಯಕ್ತವಾಗುತ್ತಿವೆ ಎಂದು ಕೇಳಿದಾಗ, “ಬಿಜೆಪಿ ಹಾಗೂ ಬೇರೆ ಪಕ್ಷದವರು ಷಡ್ಯಂತ್ರ ರೂಪಿಸಿ, ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ” ಎಂದರು.
“ಜಾತಿಗಳ ಪಟ್ಟಿಯಲ್ಲಿ ಅಕ್ಷರಗಳ ಆಧಾರದ ಮೇಲೆ ಸಮುದಾಯಗಳನ್ನು ಪಟ್ಟಿ ಮಾಡಲಾಗಿದೆ. ಪ್ರತಿ ಮನೆ ಮನೆಗೆ ಹೋಗಿ, ಎಲ್ಲರ ಮಾಹಿತಿ ಸಂಗ್ರಹಿಸುತ್ತೇವೆ” ಎಂದು ತಿಳಿಸಿದರು.
ಮೇಲ್ಮನೆ ಮಾಜಿ ಸಭಾಪತಿ ಸುದರ್ಶನ್ ಅವರು ತಮ್ಮ ಭಾಷಣದಲ್ಲಿ ನಿಮಗೆ ಕೆಲವು ಸಲಹೆ ನೀಡಿದ್ದಾರಲ್ಲ ಎಂದು ಕೇಳಿದಾಗ, “ಅವರು ಸಲಹೆ ನೀಡಿದ್ದು, ಹಿಂದುಳಿದ ವರ್ಗಗಳ ಆಯೋಗಕ್ಕೆ ನಿಮ್ಮ ಸಲಹೆಯನ್ನು ತಿಳಿಸಿ ಎಂದು ಅವರಿಗೆ ಹೇಳಿದ್ದೇವೆ. ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ನಾವು ಈ ವಿಚಾರವಾಗಿ ಚರ್ಚೆ ಮಾಡುತ್ತೇವೆ” ಎಂದರು.
ಸೆಪ್ಟೆಂಬರ್ 22ರಿಂದ ಸಮೀಕ್ಷೆ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಕುರಿತು ಸಮೀಕ್ಷೆಯನ್ನು ದಿನಾಂಕ 22-09-2025 ರಿಂದ 07-10-2025ರವರೆಗೆ ಕೈಗೊಳ್ಳುವ ಕುರಿತು ಆದೇಶವನ್ನು ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಳ್ಳಲು ಸರ್ಕಾರದ ಅನುಮೋದನೆ ನೀಡಿ ಆದೇಶಿಸಿದೆ. ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಇವರು ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ದಿನಾಂಕ 22-09-2025 ರಿಂದ 07-10-2025ರ ತನಕ ಕೈಗೊಳ್ಳಲು ಉದ್ದೇಶಿಸಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಅವರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ಹಾಗೂ ಸಮೀಕ್ಷಾದಾರರಿಗೆ ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಹಾಗೂ ಸಾರ್ವಜನಿಕರನ್ನು ಸಮೀಕ್ಷಾ ಕಾರ್ಯದಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ಅರಿವು ಮೂಡಿಸಲು ತಿಳಿಸಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ದಿನಾಂಕ:22-09-2025 ರಿಂದ 07-10-2025ರ ವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ರಾಜ್ಯಾದ್ಯಂತ ಕೈಗೊಳ್ಳಲು ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ: ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆಯನ್ನು ದಿನಾಂಕ 22-09-2025 ರಿಂದ 07-10-2025ರ ವರೆಗೆ ಕೈಗೊಳ್ಳಲು ಸರ್ಕಾರದ ಅನುಮೋದನೆ ನೀಡಿ ಆದೇಶಿಸಿದೆ ಎಂದು ಹೇಳಿದೆ.