ವಿಶೇಷ ವರದಿ: ಪಿ.ವೈ.ರವಿಂದ್ರ ಹೇರ್ಳೆ
ರಾಮನಗರದ ನೆರೆ ಜಿಲ್ಲೆ ಮಂಡ್ಯದಲ್ಲಿ ಇತ್ತೀಚೆಗೆ ಸದ್ದುಮಾಡಿದ್ದ ಹೆಣ್ಣು ಭ್ರೂಣಹತ್ಯೆ ದಂಧೆ ಬೆಂಗಳೂರು ದಕ್ಷಿಣ (ರಾಮನಗರ)ಕ್ಕೆ ಕಾಲಿರಿಸಿದೆಯಾ? ಎಂಬ ಮಾತು ಕೇಳಿ ಬರುತ್ತಿದೆ.
ರಾಮನಗರದ ಜಿಲ್ಲಾಆಸ್ಪತ್ರೆಯಲ್ಲಿ ಭ್ರೂಣಲಿಂಗ ಪತ್ತೆ ಮಾಡಲಾಗಿದೆ ಎಂಬ ಗುಮಾನಿಯ ಮೇರೆಗೆ ಜಿಲ್ಲಾ ಆಸ್ಪತ್ರೆ ಅಲ್ಟ್ರಾಸ್ಕ್ಯಾನಿಂಗ್ ಸೆಂಟರ್ ಅನ್ನು ರಾಜ್ಯಮಟ್ಟದ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ತಡೆ ವಿಭಾಗದ ಅಧಿಕಾರಿಗಳು ಸೀಜ್‍ಮಾಡಿರುವುದು ಇಂತಹದೊಂದು ಪ್ರಕರಣ ನಡೆದ ಬಗ್ಗೆ ಶಂಕೆ ಮೂಡಿಸಿದೆ.
ಪಕ್ಕದ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದ್ದ ಹೆಣ್ಣುಭ್ರೂಣ ಪತ್ತೆ ಮತ್ತು ಹತ್ಯೆ ಜಾಲ, ಬೆಂಗಳೂರು ದಕ್ಷಿಣಜಿಲ್ಲೆಯೊಂದಿಗೂ ನಂಟು ಹೊಂದಿರುವು ಬಗ್ಗೆ ಹಲವು ಸುಳಿವು ಈಗಾಗಲೇ ಸಿಕ್ಕಿತ್ತು. ಜಿಲ್ಲೆಯ ಕೆಲ ಮಂದಿ ಸಹ ಮಂಡ್ಯ ಭ್ರೂಣಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಇದೀಗ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಭ್ರೂಣ ಪತ್ತೆಯಾಗಿದೆ ಎಂಬ ಪ್ರಬಲ ಶಂಕೆ ವ್ಯಕ್ತವಾಗಿರುವುದು, ರಾಮನಗರದಲ್ಲಿ ಹೆಣ್ಣುಭ್ರೂಣ ಹತ್ಯೆ ದಂಧೆ ರಕ್ಕೆಬಿಚ್ಚಿದೆಯಾ? ಎಂಬ ಪ್ರಶ್ನೆ ಮೂಡಿಸಿದೆ.
ಮಂಡ್ಯ ರೀತಿಯಲ್ಲೇ ಭ್ರೂಣಹತ್ಯೆ: ಇದೀಗ ಬೆಳಕಿಗೆ ಬಂದಿರುವ ಬೆಂಗಳೂರಿನ ತಾತಗುಣಿಯ ಮಹಿಳೆಯ ಭ್ರೂಣಹತ್ಯೆ ಪ್ರಕರಣದಲ್ಲಿ ರಾಮನಗರದ ಹಳೆಯ ಮನೆಯೊಂದರಲ್ಲಿ ಭ್ರೂಣಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಂಡ್ಯದಲ್ಲಿ ಸಹ ಇದೇ ರೀತಿ ಆಲೆಮನೆಯಲ್ಲಿ ಹೆಣ್ಣುಭ್ರೂಣಹತ್ಯೆ ನಡೆಸಲಾಗಿತ್ತು. ಜಿಲ್ಲೆಯಲ್ಲಿ ಹೆಣ್ಣುಭ್ರೂಣ ಹತ್ಯೆಯನ್ನು ಇದೇ ಮಾದರಿಯಲ್ಲಿ ನಡೆಸಲಾಗುತ್ತಿದೆ. ಹೆಣ್ಣುಭ್ರೂಣಹತ್ಯೆಯಲ್ಲಿ ಆರೋಗ್ಯ ಇಲಾಖೆಯ ಕೆಳಹಂತದ ಸಿಬ್ಬಂದಿಯೇ ಶಾಮೀಲಾಗಿರುವ ಮಾಹಿತಿ ಲಭ್ಯವಾಗಿದ್ದು, ಉನ್ನತ ತನಿಖೆಯಿಂದ ಇಡೀ ಪ್ರಕರಣ ಬಯಲಿಗೆ ಬರಬೇಕಿದೆ.
ಸರ್ಕಾರಿ ಆಸ್ಪತ್ರೆಯೇ ಬಳಕೆಯಾಗುತ್ತಿದೆಯೇ?: ಬೆಂಗಳೂರು ದಕ್ಷಿಣ ಜಿಲ್ಲೆ ಸರ್ಕಾರಿ ಆಸ್ಪತ್ರೆಯಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಆಗಾಗ್ಗ ಸುದ್ದಿ ಯಾಗುತ್ತಲೇ ಇದೆ. 2022ರಲ್ಲಿ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲೇ ಮೃತ ಹೆಣ್ಣು ಭ್ರೂಣ ಪತ್ತೆಯಾಗಿತ್ತು.
2023ರಲ್ಲಿ ಮಾಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಹ ಮೃತ ಹೆಣ್ಣು ಭ್ರೂಣ ಪತ್ತೆಯಾಗಿತ್ತು. 2024ರಲ್ಲಿ ಕನಕಪುರ ತಾಲ್ಲೂಕು ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರದಲ್ಲಿ ಅಕ್ರಮವಾಗಿ ಸ್ಕ್ಯಾನಿಂಗ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸ್ಕ್ಯಾನಿಂಗ್ ಯಂತ್ರವನ್ನು ಸೀಜ್ ಮಾಡಲಾಗಿತ್ತು. ಇದೀಗ ಜಿಲ್ಲಾಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರ ಸೀಜ್ ಮಾಡಲಾಗಿದೆ.
ಡಾ.ಶಶಿಕಲಾಗೆ ಹಿಂದೆ ನೋಟೀಸ್ ನೀಡಲಾಗಿತ್ತು: ಜಿಲ್ಲಾಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿರುವ ಡಾ.ಶಶಿಕಲಾ ಅವರಿಗೆ ಈ ಹಿಂದೆ ಎರಡು ಬಾರಿ ಜಿಲ್ಲಾ ಪಿಸಿ ಅಂಡ್ ಪಿಎನ್‍ಡಿಸಿ ಸಮಿತಿ ನೋಟೀಸ್ ಜಾರಿ ಮಾಡಿತ್ತು. ಕೆಲ ವರ್ಷಗಳ ಹಿಂದೆ ಚನ್ನಪಟ್ಟಣ ತಾಲ್ಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಹಾಗೂ ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಪಿಸಿ ಅಂಡ್ ಪಿಎನ್‍ಡಿಸಿ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಇವರು ಸ್ಕ್ಯಾನಿಂಗ್ ಮಾಡುವಾಗ ಇಲಾಖೆ ನಿಯಮಾನುಸಾರ ಬಾಲಿಕಾ ಸಾಪ್ಟ್‍ವೇರ್‌ನಲ್ಲಿ ದಾಖಲೆಗಳನ್ನು ನಮೂದಿಸದಿರುವುದು ಪತ್ತೆಯಾಗಿತ್ತು.
ಈ ಸಂದರ್ಭದಲ್ಲಿ ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ, ಕೆಲಸದ ಒತ್ತಡ ಹೆಚ್ಚು ಇದೆ ನಾನು ಎಲ್ಲವನ್ನೂ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ನೋಟೀಸ್‍ಗೆ ಡಾ.ಶಶಿಕಲಾ ಉತ್ತರ ನೀಡಿದ್ದರು ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಪ್ರಕರಣ ದಾಖಲಿಸಲು ಸೂಚನೆ: ಜಿಲ್ಲಾ ಆಸ್ಪತ್ರೆಯ ಸ್ಕ್ಯಾನಿಂಗ್‍ಸೆಂಟರ್ ಸೀಜ್ ಆಗಿರುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾ ಭ್ರೂಣಲಿಂಗ ಪತ್ತೆ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಹತ್ಯೆ ತಡೆ ಕಾಯಿದೆಯ ಸಲಹಾಸಮಿತಿ ಜಿಲ್ಲಾಮಟ್ಟದ ತುರ್ತುಸಭೆಯನ್ನು ನಡೆಸಲಾಗಿದ್ದು, ಸಭೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸದಂತೆ ಉನ್ನತಮಟ್ಟದ ತನಿಖೆಗೆ ಜಿಲ್ಲಾಧಿಕಾರಿಗೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ಪ್ರಕರಣದ ಬಗ್ಗೆ ತೀವ್ರ ಆಕ್ಷೇಪವ್ಯಕ್ತವಾಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು, ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ಅನುಮತಿ ಪಡೆದು, ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಡಾ.ರಾಜು, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಈ ಕುರಿತು ಮಾತನಾಡಿ, “ನಗರದಲ್ಲಿ ಇರುವ ಜಿಲ್ಲಾ ಆಸ್ಪತ್ರೆಯ ಸ್ಕ್ಯಾನಿಂಗ್‍ಸೆಂಟರ್ ಸೀಜ್ ಮಾಡಿರುವ ಬಗ್ಗೆ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಸಂಬಂಧ ಕಾನೂನು ಕ್ರಮಕ್ಕೆ ಹಾಗೂ ತನಿಖೆಯನ್ನು ನಡೆಸುವ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲು ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದ್ದು, ಜಿಲ್ಲಾಧಿಕಾರಿ ಅನುಮತಿ ಪಡೆದು ಮುಂದಿನ ಕ್ರಮ ವಹಿಸಲಾಗುವುದು” ಎಂದು ಹೇಳಿದ್ದಾರೆ.