ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ

0
65

ಕಲಬುರಗಿ: ನಗರದ ರೈಲ್ವೆ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಬಂದ ಹಿನ್ನೆಲೆ ಪೊಲೀಸರು ನಿಲ್ದಾಣಕ್ಕೆ ಧಾವಿಸಿ ವ್ಯಾಪಕ ತಪಾಸಣೆ ನಡೆಸಿದ್ದಾರೆ.

ಅನಾಮಧೇಯ ವ್ಯಕ್ತಿಯೊಬ್ಬ ಮಂಗಳವಾರ ಮಧ್ಯಾಹ್ನ ಕಲಬುರಗಿ ನಗರದ 112ಗೆ ಕರೆ ಮಾಡಿ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿರುವುದರಿಂದ ನಗರದ ಸ್ಟೇಷನ್ ಬಜಾರ ಪೊಲೀಸ್ ಅಧಿಕಾರಿಗಳು ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದೊಂದಿಗೆ ಕೂಡಲೇ ನಿಲ್ದಾಣಕ್ಕೆ ಧಾವಿಸಿ ತಪಾಸಣೆ ನಡೆಸಿದ್ದಾರೆ.

ನಿಲ್ದಾಣದ ಮೂಲೆ ಮೂಲೆಯಲ್ಲಿ ವ್ಯಾಪಕ ತಪಾಸಣೆ ನಡೆಸಿದ ತಂಡ ಪ್ರಯಾಣಿಕರ ಬ್ಯಾಗ್, ಅನುಮಾನಾಸ್ಪದ ವಸ್ತುಗಳು, ಡಸ್ಟಬಿನ್ ಸೇರಿದಂತೆ ಎಲ್ಲೆಡೆ ವ್ಯಾಪಕ ತಪಾಸಣೆ ನಡೆಸಿದ ನಂತರ ಏನೂ ಪತ್ತೆಯಾಗದ ಕಾರಣ ಇದು ಹುಸಿ ಕರೆ ಎಂದು ಪರಿಗಣಿಸಿದೆ. ಆದಾಗ್ಯೂ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ರೈಲ್ವೆ ಪೊಲೀಸರು ಮೊಬೈಲ್ ನಂಬರ್ ಮೂಲಕ ವ್ಯಕ್ತಿಯನ್ನು ಟ್ರೇಸ್ ಮಾಡಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರು ಸ್ನೇಹಿತರ ನಡುವೆ ಗಲಾಟೆಯಾಗಿದ್ದು, ಒಬ್ಬಾತ ಇನ್ನೊಬ್ಬನನ್ನು ಪೊಲೀಸರಿಂದ ಪಾಠ ಕಲಿಸಬೇಕೆಂಬ ಉದ್ದೇಶದಿಂದ ಪೊಲೀಸ್ ಸಂಖ್ಯೆ 112ಗೆ ಕರೆ ಮಾಡಿ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದಾನೆಂದು ಸುಳ್ಳು ಹೇಳಿದ್ದಾನೆ.

ಇನ್ನೂ ಆತನ ಹೆಸರು ಹೇಳುತ್ತಿಲ್ಲವೆಂದು ವಿಚಾರಣೆ ನಡೆಸುತ್ತಿರುವ ರೈಲ್ವೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ಕಲಬುರಗಿ ವಿಮಾನ ನಿಲ್ದಾಣಕ್ಕೂ ಹುಸಿ ಬಾಂಬ್ ಬೆದರಿಕೆ ಕರೆ ಬಂದಿತ್ತು.

Previous articleಮಳೆ ಅಬ್ಬರ: ರಾಜ್ಯದ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ
Next articleಮಲಪ್ರಭಾ ನದಿಗೆ 12 ಸಾವಿರ ಕ್ಯೂಸೆಕ್ ನೀರು: ಪ್ರವಾಹಕ್ಕೆ ಬಹುತೇಕ ಬೆಳೆಗಳು ಜಲಾವೃತ

LEAVE A REPLY

Please enter your comment!
Please enter your name here