ಅಂಕಣ ಬರಹ: ಕೈಗೆ ಬಂದು ಮತ್ತೆ ಮತ್ತೆ ಜಾರಿದ ಸಿಎಂ ಪಟ್ಟ

0
68

ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಶನಿವಾರ ಪ್ರಕಟವಾದ ಅಂಕಣ ಬರಹ

ರಾಜಕೀಯ ನಾಯಕತ್ವಕ್ಕೆ ಯೋಗ್ಯತೆಗಿಂತ ಯೋಗದ ಬಲವೇ ಯಾವಾಗಲೂ ನಿರ್ಣಾಯಕ ಎಂಬುದಕ್ಕೆ ನಿದರ್ಶನಗಳು ಹಲವಾರು. ಎಲ್ಲಾ ಯೋಗ್ಯತೆಯನ್ನು ಉಳ್ಳವರಿಗೆ ಪ್ರಧಾನಿ ಹಾಗೂ ಮುಖ್ಯಮಂತ್ರಿಯ ಸ್ಥಾನಗಳು ಇನ್ನೇನು ಒಲಿದೇಬಿಟ್ಟಿತು ಎನ್ನುವಷ್ಟರಲ್ಲಿ ಜಾರಿಹೋದ ಪ್ರಸಂಗಗಳು ಇತಿಹಾಸದಲ್ಲಿ ಸಾಕಷ್ಟು. ಇದರಿಂದ ಸ್ಪಷ್ಟವಾಗುವ ಅಂಶವೆಂದರೆ ಯಾವುದೇ ಸ್ಥಾನ ಒದಗಿಬರಲು ಆಯಾ ಸಂದರ್ಭದ ಪರಿಸ್ಥಿತಿ ಹಾಗೂ ಸಮುದಾಯದ ಒಲವು ನಿಲುವುಗಳು ಮುಖ್ಯ ಎಂಬುದು.

ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಸರಿಸುಮಾರು 1992-93ರಲ್ಲಿಯೇ ಕರ್ನಾಟಕದ ಮುಖ್ಯಮಂತ್ರಿಯಾಗುವ ಅವಕಾಶ ಸೃಷ್ಟಿಯಾಗಿದ್ದು ಬಹಳ ಜನರಿಗೆ ಗೊತ್ತಿರಲಾರದು. ಆದರೆ, ಅಂದಿನಿಂದ ಇಂದಿವರೆಗೂ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ಹಾಗೂ ಕಾರ್ಯಕ್ಷಮತೆಯನ್ನು ಮುಂದುವರಿಸಿಕೊಂಡು ಬಂದಿರುವ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಗಗನಕುಸುಮವಾಗಿಯೇ ಉಳಿಯಿತು ಎಂಬುದರ ಹಿಂದಿರುವುದು ರಾಜಕಾರಣದ ಗುರುತ್ವಾಕರ್ಷಣ ಶಕ್ತಿ ಜೊತೆಗೆ ಒಳಸುಳಿಗಳ ವಿರಾಟ್ ರೂಪ.

1992ರಲ್ಲಿ ಸಾರೆಕೊಪ್ಪ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತೀಯರ ಚಟುವಟಿಕೆ ಭುಗಿಲೆದ್ದು ವಿಧಾನಮಂಡಲದಲ್ಲಿಯೂ ಅದು ಪ್ರತಿಧ್ವನಿಯಾಗುವ ರೀತಿಯ ಬೆಳವಣಿಗೆ ಜರುಗಿತು. ಶಾಸಕಾಂಗ ಪಕ್ಷದ ಸಭೆಗಳಲ್ಲಿ ಮಾತಿನ ಚಕಮಕಿ ಘಟನಾವಳಿಗಳು ಜರುಗಿದ ಬೆನ್ನ ಹಿಂದೆಯೇ ಕಾಂಗ್ರೆಸ್ ಹೈಕಮಾಂಡ್ ಪರಿಸ್ಥಿತಿಯನ್ನು ಸರಿದೂಗಿಸಲು ನಾಯಕತ್ವ ಬದಲಾವಣೆ ಸಾಧ್ಯತೆಗಳನ್ನು ಪರಿಶೀಲಿಸುವ ಹಂತದಲ್ಲಿ ಉತ್ತರಾಧಿಕಾರಿ ಸ್ಥಾನಕ್ಕೆ ಆದ್ಯತೆಯ ಮೇಲೆ ಪರಿಶೀಲನೆಯಾದ ಹೆಸರು ಆಗಿನ ಮಂತ್ರಿ ಮಲ್ಲಿಕಾರ್ಜುನ ಖರ್ಗೆಯವರದು.

ಶಿವಾಜಿನಗರ ಕ್ಷೇತ್ರದ ಶಾಸಕ ಅನಂತಕೃಷ್ಣ ಅವರು ಹೈಕಮಾಂಡ್ ಮಟ್ಟದಲ್ಲಿ ಖರ್ಗೆಯವರ ನಾಯಕತ್ವದ ಅರ್ಹತೆಗಳನ್ನು ವಿವರಿಸಿ ಬಿಕ್ಕಟ್ಟಿನ ನಿವಾರಣೆಗೆ ಖರ್ಗೆಯವರ ನಾಯಕತ್ವ ಸೂಕ್ತ ಎಂಬ ಸೂತ್ರವನ್ನು ರೂಪಿಸಿದ್ದನ್ನು ದೆಹಲಿ ಮುಖಂಡರು ಬಹುತೇಕ ಒಪ್ಪಿಕೊಂಡಿದ್ದರು. ತದನಂತರ ಎಐಸಿಸಿ ವೀಕ್ಷಕರು ಪರಿಸ್ಥಿತಿಯ ಅಧ್ಯಯನಕ್ಕೆ ಬೆಂಗಳೂರಿಗೆ ಆಗಮಿಸಿದ ನಂತರ ಮಾತುಕತೆಯ ಕೇಂದ್ರಬಿಂದು ಖರ್ಗೆಯವರ ನಾಯಕತ್ವದ ಸುತ್ತಲೇ ಹರಿದಾಡುತ್ತಿತ್ತು. ಖರ್ಗೆಯವರ ಆತ್ಮೀಯ ಮಿತ್ರ ಧರಂಸಿಂಗ್ ಅವರೂ ಕೂಡಾ ಹೈಕಮಾಂಡ್ ವೀಕ್ಷಕರಿಗೆ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಟ್ಟಿದ್ದರು.

ಆದರೆ, ಆಗ ದೆಹಲಿ ರಾಜಕಾರಣದಲ್ಲಿ ಬಿಕ್ಕಟ್ಟು ತಲೆದೋರಿದ ಪರಿಣಾಮವಾಗಿ ರಾಜ್ಯ ನಾಯಕತ್ವದ ಬದಲಾವಣೆ ನೆನೆಗುದಿಗೆ ಬಿದ್ದಿತು. ಆದರೆ, ಮತ್ತೆ ಈ ವಿಚಾರಕ್ಕೆ ಮರುಜೀವ ಬರುವ ಹೊತ್ತಿಗೆ ವೀರಪ್ಪ ಮೊಯ್ಲಿ, ಎಸ್.ಎಂ. ಕೃಷ್ಣ, ಕೆ.ಎಚ್. ಪಾಟೀಲ್, ರಾಜಶೇಖರ ಮೂರ್ತಿ ಮೊದಲಾದವರ ಹೆಸರು ಸೇರ್ಪಡೆಯಾದವು. ಎಲ್ಲವೂ ಅಂದುಕೊಂಡತೆಯೇ ಆಗಿದ್ದಿದ್ದರೆ, ಹಾಗೂ ಬಂಗಾರಪ್ಪನವರು ತಟಸ್ಥ ಧೋರಣೆ ತಾಳಿದ್ದರೆ ಖರ್ಗೆಯವರು ಮುಖ್ಯಮಂತ್ರಿಯಾಗುವುದು ನಿಶ್ಚಿತವಾಗಿತ್ತು. ಆದರೆ, ನಂತರ ಮುಖ್ಯಮಂತ್ರಿಯಾದ ವೀರಪ್ಪ ಮೊಯ್ಲಿ ಅವರು. ಖರ್ಗೆಯವರು ಅವರ ಮಂತ್ರಿಮಂಡಲದಲ್ಲಿ ಸಚಿವರಾದರು ಅಷ್ಟೆ.

1994ರಿಂದ 99ರವರೆಗೆ ಜನತಾದಳದ ಸರ್ಕಾರ ಕರ್ನಾಟಕದಲ್ಲಿ ಎಚ್.ಡಿ. ದೇವೇಗೌಡ ಹಾಗೂ ಜೆ.ಎಚ್. ಪಟೇಲರ ನಾಯಕತ್ವದಲ್ಲಿ ಕಾರ್ಯ ನಿರ್ವಹಿಸಿತು. ಆಂತರಿಕ ಕಿತ್ತಾಟ ಹಾಗೂ ನಾಯಕರ ವ್ಯಕ್ತಿಗತ ವೈಷಮ್ಯದ ಪರಿಣಾಮವಾಗಿ ಅವಧಿಯುದ್ಧಕ್ಕೂ ಆಡಳಿತದಲ್ಲಿ ಗಲಾಟೆಯೇ ಹೆಗ್ಗುರುತಾಗಿಹೋಯಿತು. ಆಗಿನ ಸರ್ಕಾರದ ರೀತಿ ನೀತಿಗಳನ್ನು ಪರಿಣಾಮಕಾರಿಯಾಗಿ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆಯವರು ಬಿಡಿಸಿಟ್ಟು ಸಾರ್ವಜನಿಕ ಅಭಿಪ್ರಾಯ ಸರ್ಕಾರದ ವಿರುದ್ಧ ರೂಪುಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ವಿಧಾನಪರಿಷತ್ತಿನಲ್ಲಿ ಎಚ್.ಕೆ. ಪಾಟೀಲರು ಪ್ರತಿಪಕ್ಷದ ನಾಯಕರಾಗಿ ಸರ್ಕಾರದ ವಿರೋಧಿ ಭಾವನೆ ಸೃಷ್ಟಿಯಾಗುವ ವಾತಾವರಣ ನಿರ್ಮಿಸಿದ್ದರು. 1999ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಎಸ್.ಎಂ. ಕೃಷ್ಣ ಅವರು ಪ್ರದೇಶ ಕಾಂಗ್ರೆಸ್ ಅಧ್ಯಕರಾಗಿ ನಿಯೋಜನೆಗೊಂಡ ನಂತರ ರಾಜಕೀಯ ಪರಿಸ್ಥಿತಿ ಹೊಸ ತಿರುವು ಪಡೆಯಿತು. ಅಲ್ಲಿಯವರೆಗೂ ಖರ್ಗೆಯವರೇ ಮುಂದಿನ ಮುಖ್ಯಮಂತ್ರಿ ಎಂಬ ಭಾವನೆ ಬೇರೂರಿತ್ತು. ಆದರೆ, ಕೃಷ್ಣ ಸಾರಥ್ಯದಲ್ಲಿ ಪಾಂಚಜನ್ಯ ಯಾತ್ರೆಯ ಮೂಲಕ ರಾಜ್ಯಾದ್ಯಂತ ಸರ್ಕಾರಿ ವಿರೋಧಿ ಭಾವನೆ ಮತ್ತಷ್ಟು ಹೆಚ್ಚಾದ ಮೇಲೆ ಎಲ್ಲರ ಗಮನ ಕೃಷ್ಣ ಅವರ ಕಡೆಗೆ ತಿರುಗಿತು.

ಚುನಾವಣಾ ಫಲಿತಾಂಶ ಬಂದ ನಂತರ ನಾಯಕತ್ವದ ಅಭ್ಯರ್ಥಿ ಘೋಷಣೆ ಒಂದೆರಡು ದಿನ ವಿಳಂಬವಾಯಿತು. ಆಗಲೂ ಖರ್ಗೆಯವರಿಗೆ ಅದೃಷ್ಟ ಒದಗಬಹುದು ಎಂಬ ಲೆಕ್ಕಾಚಾರಗಳಿದ್ದವು. ಆದರೆ, ಲೆಕ್ಕಾಚಾರಗಳೆಲ್ಲಾ ತಿರುಗಿದ್ದು ಕೃಷ್ಣ ಅವರ ನಾಯಕತ್ವದ ಕಡೆಗೆ. ಎರಡನೆ ಬಾರಿ ಅವಕಾಶ ವಂಚಿತರಾದ ಖರ್ಗೆಯವರು ಗೃಹ ಖಾತೆ ಮಂತ್ರಿಯಾಗಿ 5 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು.

2004ರ ಚುನಾವಣೆಯ ಸಂದರ್ಭದಲ್ಲಿ ತ್ರಿಶಂಕು ವಿಧಾನಸಭೆ ಸೃಷ್ಟಿಯಾದಾಗಲೂ ಖರ್ಗೆಯವರು ಜೆಡಿಎಸ್ ಬೆಂಬಲದೊಂದಿಗೆ ಸರ್ವಸಮ್ಮತ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಯಾಗಬಹುದು ಎಂಬ ಭಾವನೆ ಮೂಡಿತ್ತು. ಎಸ್.ಎಂ. ಕೃಷ್ಣ ಅವರು ಕೂಡಾ ದೆಹಲಿಯಲ್ಲಿ ದೇವೇಗೌಡರ ಸಂಗಡ ಸಮಾಲೋಚಿಸಿ ಸರ್ಕಾರ ರಚನೆಯ ಸಾಧ್ಯತೆಗಳ ಯತ್ನದಲ್ಲಿ ತೊಡಗಿದ್ದರು. ಆದರೆ, ಇವೆರಡರ ನಡುವೆ ದೇವೇಗೌಡರ ಬೆಂಬಲ ದೊರಕಿದ ಧರಂಸಿಂಗ್ ಅವರು ಮುಖ್ಯಮಂತ್ರಿಯಾದರು. ಪ್ರಾಣಮಿತ್ರ ಧರಂಸಿಂಗ್ ಮುಖ್ಯಮಂತ್ರಿಯಾದದ್ದು ಖರ್ಗೆ ಯವರಿಗೆ ತೃಪ್ತಿಯ ವಿಷಯವಾಗಿದ್ದರೂ ಕಡೆಘಳಿಗೆಯಲ್ಲಿ ಮತ್ತೆ ಅವಕಾಶ ತಪ್ಪಿದ್ದು ಬೇಸರಕ್ಕೆ ಕಾರಣವಾಗಿದ್ದಂತೂ ನಿಜ.

ಇದಾದ ನಂತರ ಖರ್ಗೆಯವರು ಪ್ರತಿಪಕ್ಷದ ನಾಯಕರಾಗಿ ಸಿಂಹನಾದ ಮೊಳಗಿಸುತ್ತಿದ್ದರೂ ಆಂತರಿಕ ಬೆಳವಣಿಗೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದ ಸಿದ್ದರಾಮಯ್ಯನವರಿಗೆ ಶಾಸಕಾಂಗದ ನಾಯಕತ್ವ ದೊರಕಿತು. ಇದಾದ ನಂತರದ ಕ್ಷಿಪ್ರ ಬೆಳವಣಿಗೆಯಲ್ಲಿ ಖರ್ಗೆಯವರು 2009ರ ಲೋಕಸಭಾ ಚುನಾವಣೆಯಲ್ಲಿ ಲೋಕಸಭೆಗೆ ಗೆದ್ದು ಸಚಿವರಾದರು. ತದನಂತರ 2013ರಲ್ಲಿ ಮುಖ್ಯಮಂತ್ರಿ ಸ್ಥಾನ ಸಿದ್ದರಾಮಯ್ಯನವರ ನಾಯಕತ್ವಕ್ಕೆ ಒದಗಿಬಂದಾಗ ದೆಹಲಿಯಲ್ಲಿದ್ದ ಖರ್ಗೆಯವರು ನಿಟ್ಟುಸಿರುಬಿಟ್ಟಿದ್ದರೆ ಅದು ಸ್ವಾಭಾವಿಕವಷ್ಟೆ.

ಹೀಗೆ ಒಟ್ಟು ನಾಲ್ಕು ಬಾರಿ ಮುಖ್ಯಮಂತ್ರಿಯಾಗುವ ಅವಕಾಶಗಳನ್ನು ಕಳೆದುಕೊಂಡ ಖರ್ಗೆಯವರು ಇತ್ತೀಚೆಗೆ ಬೆಂಗಳೂರಿನಲ್ಲಿ 1999ರಲ್ಲಿ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ ಬೆಳವಣಿಗೆಯ ಬಗ್ಗೆ ತಮ್ಮ ಭಾವನೆಗಳನ್ನು ಹೊರಹಾಕಿರುವುದರಲ್ಲಿ ಸಾಧ್ಯತೆಗಳನ್ನು ಗುರುತಿಸುವವರು ಹಲವಾರು ಮಂದಿ. ಹಾಗೆಯೇ ಆದ್ಯತೆಗಳನ್ನು ಈಗಲೂ ಹುಡುಕುತ್ತಿರುವವರು ಲೆಕ್ಕವಿಲ್ಲದಷ್ಟು ಮಂದಿ. ಏನೇ ಆದರೂ ಸುದೀರ್ಘ ರಾಜಕೀಯ ಅನುಭವ ಹಾಗೂ ಜ್ಞಾನ ಹೊಂದಿರುವ ಖರ್ಗೆಯವರಿಗೆ ಕರ್ನಾಟಕದ ನಾಯಕತ್ವ ದೊರಕಿದ್ದಿದ್ದರೆ ಹಲವಾರು ದೃಷ್ಟಿಕೋನಗಳಿಂದ ಒಂದು ಐತಿಹಾಸಿಕ ಬೆಳವಣಿಗೆಗೆ ಕಾರಣವಾಗುತ್ತಿತ್ತು.

Previous articleಸಂಪಾದಕೀಯ: ಮಾಲೇಗಾಂವ್ ಸ್ಫೋಟ ನಿಜ ದ್ರೋಹಿ ಯಾರು?
Next articleಆರ್‌ಪಿಎಫ್‌ಗೆ ಮೊದಲ ಮಹಿಳಾ ಡಿಜಿ ನೇಮಕ: ಸೋನಾಲಿ ಮಿಶ್ರಾ ಪರಿಚಯ

LEAVE A REPLY

Please enter your comment!
Please enter your name here