ಅಂಕಣ ಬರಹ: ಸೋಲಾರ್ ಪಂಪ್‌ಸೆಟ್‌ಗೆ ನಿರಾಸಕ್ತಿ

0
83

ಸೋಮವಾರದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಎಚ್‌.ಆರ್‌. ಶ್ರೀಶ ಅವರ ಅಂಕಣ ಬರಹ

ಎಲ್ಲ ರಾಜ್ಯಗಳಲ್ಲಿ ಸೋಲಾರ್ ಪಂಪ್‌ಸೆಟ್ ಅಳವಡಿಕೆ ಸಮರೋಪಾದಿಯಲ್ಲಿ ನಡೆಯುತ್ತಿದ್ದರೆ ನಮ್ಮಲ್ಲಿ ಮಾತ್ರ ಕುಂಟುತ್ತಾ ಸಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ರಾಜ್ಯಕ್ಕೆ ಒಂದು ರೀತಿಯ ಉದಾಸೀನ. ಹೀಗಾಗಿ ರಾಜಕೀಯ ಬಣ್ಣ ನೀಡಲಾಗಿದೆ. ಸರ್ಕಾರದ ಒಲವು ಯಾವ ಕಡೆ ಇದೆ ಎಂದು ನೋಡಿಕೊಂಡು ಅಧಿಕಾರಿಗಳು ಕೆಲಸ ಮಾಡುತ್ತಾರೆ.

ಸೋಲಾರ್ ಪಂಪ್‌ಸೆಟ್ ಎಂದು ವಿಧಾನಸೌಧದಲ್ಲಿರುವವರು ತೀರ್ಮಾನಿಸಿದರೆ ಬೆಸ್ಕಾಂ ಜೆಇ ಕೂಡ ಅದೇರೀತಿ ವರ್ತಿಸುವುದು ಸಹಜ. ಇದಕ್ಕೆ ಲಂಚದ ಹಾವಳಿಯೂ ಸೇರಿದೆ. ರಾಜಾಸ್ತಾನಲ್ಲಿ 85 ಸಾವಿರ್ ಸೋಲಾರ್ ಪಂಪ್‌ಸೆಟ್‌ಗಳಿವೆ. ನಮ್ಮಲ್ಲಿ ಇನ್ನೂ 40 ಸಾವಿರ ಪಂಪ್‌ಸೆಟ್ ಹೊಂದುವ ಗುರಿಯನ್ನು ಪ್ರಕಟಿಸಲಾಗಿದೆ. ಈಗ 12,000 ಪಂಪ್‌ಸೆಟ್ ಅಳವಡಿಕೆಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ.

ಇದಕ್ಕೆ ರಾಜಕೀಯ ಕಾರಣ ಒಂದು ಕಡೆಯಾದರೆ ಮತ್ತೊಂದು ಕಡೆ ಸರ್ಕಾರ 10 ಅಶ್ವಶಕ್ತಿಯವರೆಗೆ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುತ್ತಿದೆ. ಇದರಿಂದ ರೈತರು ಸೋಲಾರ್ ಕಡೆ ತಿರುಗಿ ನೋಡುತ್ತಿಲ್ಲ. ರಾಜ್ಯದಲ್ಲಿ 34 ಲಕ್ಷ ಪಂಪ್‌ಸೆಟ್‌ಗಳಿವೆ. ರಾಜ್ಯ ಸರ್ಕಾರ 19 ಸಾವಿರ ಕೋಟಿ ರೂ. ಸಹಾಯಧನ ನೀಡುತ್ತಿದೆ. ಪುಕ್ಕಟೆ ವಿದ್ಯುತ್ ಸಿಗುವಾಗ ರೈತರು ಸೋಲಾರ್‌ಗೆ ಹೋಗುವುದಿಲ್ಲ.

ಇದು ಸ್ಪಷ್ಟ. ಎಸ್ಕಾಂಗಳಿಗೆ ಸರ್ಕಾರ ನೀಡುವ ಸಹಾಯಧನ ಕಾಮಧೇನು ಇದ್ದಂತೆ. ಕೆಲಸವಿಲ್ಲದೆ ಬೋನಸ್ ಕೊಟ್ಟಂತೆ. ರಾಜ್ಯದಲ್ಲಿ ಯಾವ ಪಂಪ್‌ಸೆಟ್‌ಗೂ ಮೀಟರ್ ಇಲ್ಲ. ಅದರಿಂದ ಪ್ರತಿ ತಿಂಗಳೂ ಮೀಟರ್ ರೀಡಿಂಗ್ ಮಾಡುವ ಕಷ್ಟವಿಲ್ಲ. ಪ್ರತಿ ಎಸ್ಕಾಂನಲ್ಲೂ ಒಂದೆರಡು ಪಂಪ್‌ಸೆಟ್‌ಗಳಿಗೆ ಪ್ರಾಯೋಗಿಕವಾಗಿ ಮೀಟರ್ ಅಳವಡಿಸಿ ಅದರ ಮೇಲೆ ಎಲ್ಲ ಪಂಪ್‌ಸೆಟ್‌ಗಳ ವಿದ್ಯುತ್ ಬಳಕೆ ಲೆಕ್ಕ ಹಾಕಲಾಗುವುದು. ಆ ಪಂಪ್‌ಸೆಟ್‌ಗಳಲ್ಲಿ ಎಷ್ಟು ಬಳಕೆಯಲ್ಲಿದೆ ಯಾರಿಗೂ ತಿಳಿಯದು. ಎಸ್ಕಾಂ ಲೆಕ್ಕದಲ್ಲಿ ಮಾತ್ರ ಇದೆ. ಅದಕ್ಕೆ ಸರ್ಕಾರದ ಸಹಾಯಧನ ಬಂದೇ ಬರುತ್ತದೆ.

ಈ ರೀತಿ ಬರುವ ಹಣದಲ್ಲಿ ವಿದ್ಯುತ್ ವಿತರಣ ನಷ್ಟವನ್ನು ಸರಿತೂಗಿಸಲಾಗುವುದು. ಒಂದುವೇಳೆ ರೈತ ಸೋಲಾರ್ ಪಂಪ್ ಹಾಕಿಸಿಕೊಂಡಲ್ಲಿ ಇವೆಲ್ಲವೂ ನಿಂತು ಹೋಗುತ್ತದೆ. ಅಲ್ಲದೆ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಕಡಿದು ಹೋದಲ್ಲಿ ರೈತರು ಹಣ ಕೊಟ್ಟು ಕರೆಸುತ್ತಾರೆ. ಹೀಗಾಗಿ ಕಂಪನಿ ಕ್ಷೇಮ, ಕೆಲಸವಿಲ್ಲದೆ ರೈತರಿಂದ ಹಣ ಬರುತ್ತದೆ. ಅದಕ್ಕಾಗಿ ಅವರು ಸೋಲಾರ್ ಪಂಪ್‌ಸೆಟ್ ಬಗ್ಗೆ ಯಾವ ಪ್ರಚಾರವನ್ನೂ ಮಾಡೋಲ್ಲ.

ಸೋಲಾರ್ ಪಂಪ್‌ಸೆಟ್‌ನಲ್ಲಿ 7.5 ಅಶ್ವಶಕ್ತಿಯವರೆಗೆ ವಿದ್ಯುತ್ ಸಂಪರ್ಕ ಪಡೆಯಬಹುದು. ಇದಕ್ಕೆ ಸಹಾಯಧನ ಇದೆ. ಸೋಲಾರ್ ಪಂಪ್‌ಸೆಟ್ 10-15 ಆಶ್ವಶಕ್ತಿಯ ಸಾಮರ್ಥ್ಯ ಲಭ್ಯವಿದೆ. ಆದರೆ ಸಹಾಯಧನ 7.5 ಅಶ್ವಶಕ್ತಿಗೆ ಸೀಮಿತ. ಬಹಳ ವಿಚಿತ್ರದ ಸಂಗತಿ ಎಂದರೆ ಎಸ್ಕಾಂಗಳ ವಿದ್ಯುತ್ ಉಚಿತವಾಗಿ ಪಡೆದರೆ 10 ಆಶ್ಚಶಕ್ತಿಯವರೆಗೆ ಪಂಪ್‌ಸೆಟ್ ಓಡಿಸಬಹುದು. ಸೋಲಾರ್ ಬಳಸಿದರೆ 7.5 ಆಶ್ವಶಕ್ತಿ ಮೇಲೆ ಸಹಾಯಧನ ಇಲ್ಲ. ರೈತರು ಸೋಲಾರ್ ಬಳಸಿದರೆ 10 ಆಶ್ವಶಕ್ತಿಪಂಪಸೆಟ್‌ಗೆ ಬೇಕಾಗುವ ವಿದ್ಯುತ್ ಉಳಿತಾಯವಾಗುತ್ತದೆ. ಅದನ್ನು ಬೇರೆ ಕಡೆ ಮಾರಾಟ ಮಾಡಬಹುದು. ಸೋಲಾರ್ ಸಹಾಯಧನವನ್ನು 10 ಅಶ್ವಶಕ್ತಿವರೆಗೆ ವಿಸ್ತರಿಸಿದರೆ ತೊಂದರೆ ಏನೂ ಇಲ್ಲ.

ಮನೆ ಮೇಲೆ ಸೋಲಾರ್ ಫಲಕ ಅಳವಡಿಕೆ ಕಷ್ಟದ ಕೆಲಸವಲ್ಲ. ಅದೇ ರೈತರ ಸೋಲಾರ್ ಪಂಪ್‌ಸೆಟ್ ಪಡೆಯಬೇಕು ಎಂದರೆ ಹರಸಾಹಸ ಮಾಡಬೇಕು. ಸೋಲಾರ್ ಪಂಪ್‌ಸೆಟ್‌ಗೆ ಕೇಂದ್ರ ಸರ್ಕಾರ ಶೇ. 30, ರಾಜ್ಯ ಸರ್ಕಾರ ಶೇ.50 ಸಹಾಯಧನ ನೀಡುತ್ತದೆ. ಉಳಿದ ಶೇ. 20 ರಷ್ಟು ಹಣವನ್ನು ರೈತ ಭರಿಸಬೇಕು. ಈಗ 10 ಎಚ್‌ಪಿ ಸೋಲಾರ್ ಪಂಪ್‌ಸೆಟ್‌ಗೆ 5.50 ಲಕ್ಷ ರೂ. ಬೇಕು. 7.5 ಎಚ್‌ಪಿಗೆ 3 ಲಕ್ಷ ರೂ. ಆಗುತ್ತದೆ.

ಇದಕ್ಕೆ ವಿಎಫ್‌ಡಿ ಪಂಪ್ ಬಳಸಬೇಕು. ಬೆಳಗ್ಗೆ 6 ರಿಂದ ಸಂಜೆ 6 ವರೆಗೆ ವಿದ್ಯುತ್ ಲಭ್ಯ. ರೈತರು 15 ಸಾವಿರದಿಂದ 50 ಸಾವಿರರೂ. ವರೆಗೆ ವೆಚ್ಚ ಮಾಡಬೇಕು. ರೈತರ ಪಾಲಿಗೆ ಬೇರೆ ರಾಜ್ಯಗಳಲ್ಲಿ ಬಡ್ಡಿರಹಿತ ಸಾಲ ನೀಡುವ ವ್ಯವಸ್ಥೆ ಇದೆ. ಕೆಲವು ಬ್ಯಾಂಕ್‌ಗಳು ನೇರವಾಗಿ ಸೋಲಾರ್ ಪಂಪ್‌ಸೆಟ್‌ಗಳಿಗೆ ಸಾಲ ಕೊಡುತ್ತವೆ. ರಾಜಾಸ್ತಾನದಲ್ಲಿ ರೈತರ ಪಾಲನ್ನೂ ಸರ್ಕಾರವೇ ಭರಿಸುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಸಣ್ಣ ರೈತರಿಗೆ ಶೇ. 90, ದೊಡ್ಡ ರೈತರಿಗೆ ಶೇ. 80 ರಷ್ಟು ಸಹಾಯಧನ ಒದಗಿಸಲಾಗುತ್ತಿದೆ.

ಮನೆ ಮೇಲೆ ಸೋಲಾರ್ ಹಾಕಿಸುವುದು ಸುಲಭ. ಸೋಲಾರ್ ಅಳವಡಿಸುವವನೂ ತನ್ನ ದರದ ಪಟ್ಟಿಯನ್ನು ಇಂಟರ್‌ನೆಟ್ ಮೂಲಕ ನಮೂದಿಸಬೇಕು. ಎಲ್ಲವೂ ಬ್ಯಾಂಕ್ ಮೂಲಕ ನಡೆಯುತ್ತದೆ. ಸೋಲಾರ್ ಪಂಪ್‌ಸೆಟ್ ಈ ರೀತಿ ಸುಲಭವಾಗಿ ಸಿಗುವುದಿಲ್ಲ. ಮೊದಲು ರೈತ ತನ್ನ ಹೆಸರನ್ನು ನಮೂದಿಸಿಕೊಳ್ಳಬೇಕು. ಆಮೇಲೆ ವಿದ್ಯುತ್ ಕಂಪನಿ ಟೆಂಡರ್ ಕರೆಯುತ್ತದೆ. ಟೆಂಡರ್ ಪಡೆದವರು ನಿಮ್ಮನ್ನು ಸಂಪರ್ಕಿಸುತ್ತಾರೆ. ಎಷ್ಟೋ ಬಾರಿ ಟೆಂಡರ್ ಪಡೆದು ಕೊಂಡವರ ಬಳಿ ಏನೂ ಇರುವುದಿಲ್ಲ. ಅವರು ನಿಜವಾಗಿ ಕೆಲಸ ಮಾಡುವ ಕಂಪನಿಗೆ ತಮ್ಮ ಟೆಂಡರ್ ಕೊಟ್ಟು ಹಣ ಪಡೆದುಕೊಳ್ಳುತ್ತಾರೆ. ಅವರು ಯಾವಾಗ ಹೊಲಕ್ಕೆ ಬರುತ್ತಾರೋ ತಿಳಿಯದು. ಅವರನ್ನು ಕಂಡು ಹಿಡಿಯುವುದೇ ಕಷ್ಟ.

ಬೆಸ್ಕಾಂ ಅಧಿಕಾರಿಗಳನ್ನು ಮಾತನಾಡಿಸುವುದೇ ಕಷ್ಟ. ಅವರನ್ನು ಮುಟ್ಟಿದರೆ ದುಡ್ಡು ಕೊಡಬೇಕು. ಸ್ಪಾಟ್‌ಗಂತೂ ಬರುವುದೇ ಇಲ್ಲ. ಲಂಚ ಕೊಟ್ಟರೆ ಸರ್ಕಾರಿ ಪುಕ್ಕಟೆ ಸಿಗುವಾಗ ಸೋಲಾರ್‌ಗೆ ಯಾಕೆ ಹೋಗಬೇಕು. ಕೆಲವು ರೈತರು ಬುದ್ದಿವಂತರು. ಬೆಳಗಿನ ವೇಳೆ ಸೋಲಾರ್ ಪಂಪ್‌ಸೆಟ್ ಮೂಲಕ ನೀರು ಹಾಯಿಸಿಕೊಂಡು ಕಡಿಮೆ ಬಿದ್ದಲ್ಲಿ ರಾತ್ರಿ ವೇಳೆ ಸರ್ಕಾರಿ ಕರೆಂಟ್ ಬಳಸಲು ಮತ್ತೊಂದು ಪಂಪ್‌ಸೆಟ್ ಇಟ್ಟುಕೊಂಡಿದ್ದಾರೆ.

ಇದಕ್ಕಾಗಿ ಕೃಷಿ ಹೊಂಡ ಮಾಡಿಕೊಂಡು ಸೋಲಾರ್ ಪಂಪ್ ತಾವೇ ಹಾಕಿಕೊಂಡು ನೀರು ಬಳಸುತ್ತಾರೆ. ರಾತ್ರಿ ವೇಳೆ ಸರ್ಕಾರಿ ಕರೆಂಟ್ ಬಳಸಿಕೊಂಡು ತೆರೆದ ಬಾವಿ ನೀರು ಬಳಸುತ್ತಾರೆ. ಇದರಿಂದ ಅವರು 6 ಎಕರೆ ನೀರಾವರಿ ಮಾಡಲು ಸಾಧ್ಯವಾಗಿದೆ. ಸೋಲಾರ್ ಪಂಪ್‌ಸೆಟ್ ಹಾಕಿಸಿಕೊಳ್ಳಬೇಕು ಎಂದರೆ ಅಧಿಕಾರಿಗಳಿಗೆ ದುಂಬಾಲು ಬೀಳಬೇಕು. ಪುಕ್ಕಟೆ ವಿದ್ಯುತ್ ಸಿಗುವಾಗ ಸೋಲಾರ್ ಬೇಡವೇ ಬೇಡ ಎಂಬುದು ರೈತರ ವಾದ. ಇದರಲ್ಲಿ ಸತ್ಯಾಂಶವೂ ಇದೆ.

ರಾಜ್ಯದಲ್ಲಿ ಒಟ್ಟು ಉತ್ಪಾದನೆಯಾಗುವ ವಿದ್ಯುತ್ ನಲ್ಲಿ ಶೇ. 40-42 ರಷ್ಟು ವಿದ್ಯುತ್ ಕೃಷಿಗೆ ಉಚಿತವಾಗಿ ನೀಡಬೇಕು. ಉಳಿದ ವಿದ್ಯುತ್‌ನಲ್ಲಿ ಎಸ್ಕಾಂಗಳು ಲಾಭಗಳಿಸಬೇಕು ಹೀಗಾಗಿ ಕಂಪನಿಗಳು ಸರ್ಕಾರದ ಸಹಾಯಧನಕ್ಕೆ ಕೈಚಾಚುವುದು ಅನಿವಾರ್ಯ. ಹುಬ್ಬಳ್ಳಿ ವಿದ್ಯುತ್ ಕಂಪನಿ ಸಂಪೂರ್ಣವಾಗಿ ಸರ್ಕಾರದ ಸಹಾಯಧನದ ಮೇಲೆ ನಿಂತಿದೆ.

ಒಂದು ವೇಳೆ ಸೋಲಾರ್ ಪಂಪ್‌ಸೆಟ್ ಅಧಿಕಗೊಂಡಲ್ಲಿ ಸರ್ಕಾರ ವಿದ್ಯುತ್‌ಗೆ ಕೊಡುವ ಸಹಾಯಧನವನ್ನು ಕಡಿಮೆ ಮಾಡಬೇಕು. ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಎಸ್ಕಾಂಗಳು ಸರ್ಕಾರದ ಸಹಾಯಧನವನ್ನು ಮುಂದುವರಿಯುವಂತೆ ನೋಡಿಕೊಳ್ಳುವುದು ಅನಿವಾರ್ಯ. ಅದರಿಂದಲೇ ಸೋಲಾರ್ ಪಂಪ್‌ಸೆಟ್ ಬಗ್ಗೆ ಯಾವುದೇ ಎಸ್ಕಾಂಗಳು ಮಾತನಾಡುವುದಿಲ್ಲ. ರೈತರಿಗೆ ಇದರ ಬಗ್ಗೆ ಮಾಹಿತಿಯನ್ನೂ ಕೊಡುವುದಿಲ್ಲ.

ಸರ್ಕಾರವೇನೋ 40 ಸಾವಿರ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸುವುದಾಗಿ ಹೇಳುತ್ತಿದೆ. ಈ ಗುರಿ ತಲುಪುವುದು ಕಷ್ಟ. ಸೋಲಾರ್ ಪಂಪ್‌ಸೆಟ್‌ಗಳಿಗೆ ನಮ್ಮ ರಾಜ್ಯ ಹೊರತುಪಡಿಸಿ ಉಳಿದ ಕಡೆ ಉತ್ತಮ ಬೇಡಿಕೆ ಇದೆ. ಇಲ್ಲಿ ಟೆಂಡರ್ ಪಡೆಯುವವರಲ್ಲಿ ಬಹುತೇಕ ಮಧ್ಯವರ್ತಿಗಳು. ಹೀಗಾಗಿ ವರ್ಷವಾದರೂ ಸಹಾಯಧನ ಬರುವುದಿಲ್ಲ.

ಸರ್ಕಾರ ಕೊಡುವ ಸೋಲಾರ್ ಪಂಪ್‌ಸೆಟ್‌ಗೆ ಕಾದರೆ ಭವಿಷ್ಯವಿಲ್ಲ ಎಂದು ಸ್ವಂತ ಹಣ ಇರುವವರು ಕಡಿಮೆ ವೆಚ್ಚೆದಲ್ಲಿ ಸೋಲಾರ್ ಪಂಪ್‌ಸೆಟ್ ಪಡೆದುಕೊಳ್ಳುತ್ತಿದ್ದಾರೆ. ಉಳಿದವರು ಸರ್ಕಾರದ ಪುಕ್ಕಟೆ ವಿದ್ಯುತ್‌ಗೆ ಕಾಯುತ್ತಿದ್ದಾರೆ. ಈಗ ಅಕ್ರಮ-ಸಕ್ರಮದಲ್ಲಿರುವ 2ಲಕ್ಷಕ್ಕೂ ಹೆಚ್ಚು ರೈತರಿಗೆ ಸೋಲಾರ್ ಪಂಪ್‌ಸೆಟ್ ಕೊಡಲು ರಾಜ್ಯ ಸರ್ಕಾರ ಹೊರಟಿದೆ. ಏಕೆಂದರೆ ಇದರಲ್ಲಿ ಸರ್ಕಾರ ಹಣ ತೊಡಗಿಸಬೇಕಿಲ್ಲ.

ಮುಂದಿನ ವರ್ಷದಿಂದ ಸೋಲಾರ್ ಪಂಪ್‌ಸೆಟ್‌ಗೆ ಶೇ.50 ಸಹಾಯಧನ ನೀಡುವುದನ್ನು ಕೈಬಿಟ್ಟು ಅದನ್ನು ಶೇ. 30ಕ್ಕೆ ಸೀಮಿತಗೊಳಿಸುವ ಹುನ್ನಾರ ನಡೆಯುತ್ತಿದೆ. ಬೆಂಗಳೂರು ನಗರದಲ್ಲಿ ಬಿ ಖಾತೆ ಮಾಡಿಸಲು ಮನೆಮನೆಗೂ ಹೋಗುವ ಬಿಬಿಎಂಪಿ ಅಧಿಕಾರಿಗಳು ಬಡ ರೈತನಿಗೆ ಸೋಲಾರ್ ಪಂಪ್‌ಸೆಟ್ ಬಗ್ಗೆ ಕಚೇರಿ ಹೋದರೂ ತಿಳವಳಿಕೆ ನೀಡುವ ಕೆಲಸ ಏಕೆ ಮಾಡುತ್ತಿಲ್ಲ ಎಂಬುದನ್ನು ಸರ್ಕಾರವೇ ಹೇಳಬೇಕು. ಮಹಾರಾಷ್ಟ್ರದಲ್ಲಿ ರೈತನಿಗೆ ಸುಲಭವಾಗಿ ಸೋಲಾರ್ ಪಂಪ್‌ಸೆಟ್ ಸಿಗುತ್ತದೆ. ಅದೇಪಕ್ಕದಲ್ಲಿರುವ ಬೆಳಗಾವಿ ರೈತನಿಗೆ ಸೋಲಾರ್ ಪಂಪ್‌ಸೆಟ್ ನೀಡುವ ಕೇಂದ್ರದ ಕುಸುಮ್ ಯೋಜನೆ ಗಗನ ಕುಸುಮ.

Previous articleIndia-England 4th Test:‌‌ ಆಂಗ್ಲರ­ ಗೆಲುವಿನ ಓಟಕ್ಕೆ ಭಾರತ ಬ್ರೇಕ್
Next articleಅಂಕಣ ಬರಹ: ರ‍್ಯಾಂಕುಗಳ ಧಾವಂತದಲ್ಲಿ ಮಕ್ಕಳ ಬದುಕು ಕೊನೆಗೊಳ್ಳುವುದು ಬೇಡ

LEAVE A REPLY

Please enter your comment!
Please enter your name here