ಪೊಲೀಸರ ತನಿಖೆಯ ಗುಣಮಟ್ಟ ಹೆಚ್ಚಿಸಿ

0
33

ಬೆಂಗಳೂರು: ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಕಡಿಮೆ ಆಗಿರುವುದು ಸಮಾಧಾನದ ಸಂಗತಿಯಾದರೂ ಪೊಲೀಸರ ತನಿಖೆಯ ಗುಣಮಟ್ಟ ಕಡಿಮೆಯಾಗಿದ್ದು ಇದನ್ನು ಹೆಚ್ಚಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಮತ್ತು ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಈ ಸೂಚನೆಗಳನ್ನು ನೀಡಿದರು.
ಬೀದರ್‌ನಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿ ಯಾರು ಎಂದು ಗೊತ್ತಾಗಿದ್ದರೂ 5 ತಿಂಗಳುಗಳಿಂದ ಆತನನ್ನು ಬಂಧಿಸದೇ ಇರುವುದನ್ನು ಉಲ್ಲೇಖಿಸಿ ಹೇಳಿದರು. ಬಿಡಿ ಬಿಡಿ ಪ್ರಕರಣಗಳಲ್ಲಿ ತನಿಖೆಯ ಗುಣಮಟ್ಟ ಹೆಚ್ಚಿದ್ದರೂ ಒಟ್ಟಾರೆಯಾಗಿ ಗಮನಿಸಿದಾಗ ತನಿಖೆಯ ಗುಣಮಟ್ಟ ಕುಸಿದಿರುವುದು ಸ್ಪಷ್ಟವಾಗುತ್ತಿದೆ ಎಂದರು.
ನಾನು 1983 ರಿಂದ ಶಾಸಕನಾಗಿ ಸಿಎಂ ಆಗಿದ್ದೀನಿ. ಬೆಂಗಳೂರಿನಲ್ಲಿ ನಡೆದ ಇಂಥಾ ಕಾಲ್ತುಳಿತ ಪ್ರಕರಣವನ್ನು ಹಿಂದೆಂದೂ ನಾನು ನೋಡಿರಲಿಲ್ಲ. ಗುಪ್ತಚರ ಇಲಾಖೆ ಇರುವುದು ಏಕೆ? ಸರಿಯಾದ ಸಮಗ್ರ ಮಾಹಿತಿ ನೀಡಲಿಲ್ಲ. ಪರಿಣಾಮ 11 ಮಂದಿ ಮೃತಪಟ್ಟರು ಎಂದು ತಿಳಿಸಿದರು.
ಕಾಲ್ತುಳಿತ ಘಟನೆ ನಡೆದ ದಿನ‌ ಮಧ್ಯಾಹ್ನ 3.50ಕ್ಕೆ ಸಾವುಗಳು ಸಂಭವಿಸಿದ್ದವು. ಆದರೂ ಸರಿಯಾದ ಮಾಹಿತಿ ಕೊಟ್ಟಿರಲಿಲ್ಲ. ಇದು ತಪ್ಪಲ್ಲವಾ? 5.45ಕ್ಕೆ ನಾನಾಗೇ ಕೇಳಿದಾಗಲೂ ಒಂದೇ ಸಾವು ಆಗಿದೆ ಎನ್ನುವ ಮಾಹಿತಿ ನೀಡಿದರು. ಅಷ್ಟೊತ್ತಿಗಾಗಲೇ 11 ಸಾವು ಆಗಿಬಿಟ್ಟಿತ್ತು. ಹಿರಿಯ ಅಧಿಕಾರಿ ಸರಿಯಾದ ಮಾಹಿತಿಯನ್ನು ತಕ್ಷಣ ನಮಗೆ ನೀಡಿದ್ದರೆ ಸ್ಟೇಡಿಯಂ ಕಾರ್ಯಕ್ರಮ ರದ್ದುಗೊಳಿಸಲು ಸೂಚನೆ ನೀಡಬಹುದಿತ್ತು. ಹಿರಿಯ ಅಧಿಕಾರಿಗಳ ಸಸ್ಪೆಂಡ್ ಮಾಡಬೇಕಾಗಿ ಬಂದಿದ್ದಕ್ಕೆ ನನಗೂ ಬೇಸರ ಇದೆ. ಆದರೆ ತಪ್ಪಾಗಿದ್ದು ನಿಜ ತಾನೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಅಪರಾಧ ಪ್ರಕರಣಗಳಲ್ಲಿ ಆರೋಪ ಪಟ್ಟಿಯನ್ನು ಸೂಕ್ತವಾಗಿ, ಪರಿಣಾಮಕಾರಿಯಗಿ, ಸರಿಯಾದ ಸಮಯಕ್ಕೆ ಸಲ್ಲಿಸದಿರುವುದೂ ದೊಡ್ಡ ವೈಫಲ್ಯ. ಇಂಥಾದ್ದನ್ನು ಸಹಿಸಲು ಸಾಧ್ಯವಿಲ್ಲ ಎಂದರು.

Previous articleಕಡಲ್ಕೊರೆತ ತಡೆಗೆ ಮುಂಜಾಗ್ರತಾ ಕ್ರಮ: ಸುರಕ್ಷಿತ ಸ್ಥಳಕ್ಕೆ ತೆರಳಲು ಸಲಹೆ
Next article2026ರಲ್ಲಿ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ