ಒಂದೇ ದಿನ 7 ವಿಮಾನಗಳ ಪ್ರಯಾಣ ಹಠಾತ್ ರದ್ದು

ನವದೆಹಲಿ: ಅಹಮದಾಬಾದ್ ಘೋರ ವಿಮಾನ ಪತನದ ನಂತರ ಪ್ರತಿನಿತ್ಯ ಏರ್ ಇಂಡಿಯಾ ವಿಮಾನಗಳು ಒಂದಿಲ್ಲೊಂದು ರೀತಿಯಲ್ಲಿ ತೊಂದರೆಗೆ ಒಳಗಾಗುತ್ತಿವೆ. ಮಂಗಳವಾರ ಒಂದೇ ದಿನ ೭ ಏರ್ ಇಂಡಿಯಾ ವಿಮಾನಗಳ ಹಾರಾಟ ಏಕಾಏಕಿ ರದ್ದಾಗಿದ್ದು, ಬೇರೆ ಬೇರೆ ಊರುಗಳಿಗೆ ಹಾಗೂ ವಿದೇಶಗಳಿಗೆ ತೆರಳುವ ಪ್ರಯಾಣಿಕರು ಪರದಾಡುವಂತಾಯಿತು.
ಅದರಲ್ಲೂ ತಾಂತ್ರಿಕ ದೋಷಗಳು ಹಾಗೂ ವಿಮಾನ ಕಾರ್ಯಾಚರಣೆ ಸಮಸ್ಯೆಯಿಂದಾಗಿ ರದ್ದಾದ ವಿಮಾನಗಳ ಸಂಖ್ಯೆಯೇ ಹೆಚ್ಚು. ತಪಾಸಣೆಯನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ವಿದೇಶಕ್ಕೆ ಪ್ರಯಾಣಿಸಬೇಕಿದ್ದ ಏರ್ ಇಂಡಿಯಾದ ಒಟ್ಟು ೬ ಡ್ರೀಮ್‌ಲೈನರ್ ಫ್ಲೈಟ್ ರದ್ದಾಗಿವೆ.
ದೆಹಲಿ-ದುಬೈ (ಎಐ ೯೧೫), ದೆಹಲಿ-ವಿಯೆನ್ನಾ (ಎಐ ೧೫೩), ದೆಹಲಿ-ಪ್ಯಾರಿಸ್ (ಎಐ ೧೪೩), ಅಹ್ಮದಾಬಾದ್-ಲಂಡನ್ (ಎಐ ೧೫೯), ಬೆಂಗಳೂರು-ಲಂಡನ್ (ಎಐ ೧೫೩) ಹಾಗೂ ಲಂಡನ್-ಅಮೃತಸರ್ (ಎಐ ೧೭೦) ರದ್ದಾಗಿರುವ ವಿಮಾನಗಳು. ಇನ್ನು ಸ್ಯಾನ್‌ಫ್ರಾö್ಯನ್‌ಸ್ಕೋದಿಂದ ಮುಂಬೈಗೆ ಬರುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋಲ್ಕತಾದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.
ಮಸ್ಕತ್‌ನಿಂದ ಕೊಚ್ಚಿ ಮಾರ್ಗವಾಗಿ ದೆಹಲಿಗೆ ಹೊರಟಿದ್ದ ಇಂಡಿಗೊ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆ ನಾಗ್ಪುರದಲ್ಲಿ ಮಂಗಳವಾರ ಬೆಳಗ್ಗೆ ಎಮರ್ಜನ್ಸಿ ಲ್ಯಾಂಡಿಂಗ್ ಮಾಡಲಾಯಿತು. ಈ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಲೋಹಿತ್ ಮತಾನಿ, ಇಂಡಿಗೊ ಸಂಸ್ಥೆಯ ಅಧಿಕೃತ ಇಮೇಲ್ ಖಾತೆಗೆ ಬೆದರಿಕೆ ಸಂದೇಶ ಬಂದಿತ್ತು. ಕೂಡಲೇ ಬಾಂಬ್ ಬೆದರಿಕೆ ತಂಡದಿಂದ ಪರಿಶೀಲನೆ ನಡೆಸಲಾಯಿತು. ವಿಮಾನದಲ್ಲಿದ್ದ ಎಲ್ಲಾ ೧೫೭ ಜನ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.