ಬೆಂಗಳೂರು: ಹುಬ್ಬಳ್ಳಿ ಮತ್ತು ಕುಷ್ಟಗಿ ನಿಲ್ದಾಣಗಳ ನಡುವೆ ಹೊಸ ದೈನಂದಿನ ಎಕ್ಸ್‌ಪ್ರೆಸ್ ರೈಲು ಸೇವೆ ನಾಳೆಯಿಂದ ಆರಂಭವಾಗಲಿದೆ.
ಈ ಕುರಿತಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ, ಹುಬ್ಬಳ್ಳಿ – ಕುಷ್ಟಗಿಯ ನಡುವೆ ನೂತನ ಎಕ್ಸ್‌ಪ್ರೆಸ್ ರೈಲ್ವೆ ಸಂಪರ್ಕವನ್ನು ನನ್ನ ಕೋರಿಕೆಯ ಮೇರೆಗೆ ಅನುಮೋದನೆ ನೀಡಿದ್ದು, ನಾಳೆ ಬೆಳಗ್ಗೆ 10.30 ಕ್ಕೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಕುಷ್ಟಗಿಯಿಂದ ಹುಬ್ಬಳ್ಳಿಗೆ ಉದ್ಘಾಟನಾ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿ – ಕುಷ್ಟಗಿ ಎಕ್ಸ್‌ಪ್ರೆಸ್ ರೈಲು ಪ್ರತಿನಿತ್ಯ ಸಂಚರಿಸಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾನ್ಯ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಎಂದಿದ್ದಾರೆ
ಈ ವಿಶೇಷ ರೈಲು ಕುಷ್ಟಗಿಯಿಂದ ಹೊರಟು ಲಿಂಗನಬಂಡಿ, ಹನಮಾಪೂರ, ಯಲಬುರ್ಗಾ, ಸಂಗನಾಳ, ಕುಕನೂರು, ತಳಕಲ್, ಬನ್ನಿಕೊಪ್ಪ, ಸೋಂಪುರ ರೋಡ್, ಹಳ್ಳಿಗುಡಿ ಹಾಲ್ಟ್, ಹರ್ಲಾಪುರ, ಕಣಗಿನಹಾಳ, ಗದಗ, ಹುಲಕೋಟಿ, ಅಣ್ಣಿಗೇರಿ, ಶಿಶ್ವಿನಹಳ್ಳಿ, ಹೆಬಸೂರ ಮತ್ತು ಕುಸುಗಲ್ ನಿಲ್ದಾಣಗಳಲ್ಲಿ ನಿಲುಗಡೆ ಆಗಿ ಹುಬ್ಬಳ್ಳಿಗೆ ತಲುಪಲಿದೆ.

