ಯಾದಗಿರಿ(ಹುಣಸಗಿ): ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದುರ್ಘಟನೆಯಲ್ಲಿ ಮುಸ್ಲಿಂ ಉಗ್ರಗಾಮಿಗಳು ಪ್ರವಾಸಿಗರ ಧರ್ಮವನ್ನು ಕೇಳಿ ಹತ್ಯೆ ಮಾಡಿಲ್ಲ ಎಂಬ ಅರ್ಥ ಬರುವಂತಹ ರೀತಿಯಲ್ಲಿ ಪ್ರವಾಸಿ ಮೃತ ಭರತನ ಪತ್ನಿಯ ಹೇಳಿಕೆಯನ್ನು ಪ್ರಚೋದನಾಕಾರಿಯಾಗಿ ಸ್ಟೇಟಸ್ ಇಟ್ಟಿದ್ದ ಆರೋಪದಲ್ಲಿ ರಾಜನಕೋಳೂರು ಗ್ರಾಮದ ಮೀರಸಾಬ ಸೇರಿ ಮೂವರ ವಿರುದ್ಧ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜನಕೋಳೂರು ಗ್ರಾಮದ ಬೀದಿ ಬದಿ ಎಗ್‌ರೈಸ್ ಅಂಗಡಿ ಇಟ್ಟುಕೊಂಡು ಸಣ್ಣ ವ್ಯಾಪಾರ ಮಾಡುವ ಮೀರಸಾಬ ಕಳೆದ ಮೂರು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪೆಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತನಾದ ಭರತನ ಹೆಂಡತಿಯ ಚಿತ್ರದೊಂದಿಗೆ ಸಮಾಜದಲ್ಲಿ ಅಶಾಂತಿ ಮೂಡಿಸುವ ಪೋಸ್ಟ್ ಹಂಚಿಕೊಂಡಿದ್ದ. ಇದರಿಂದ ಊರಿನ ಯುವಕರು ಆಕ್ರೋಶಗೊಂಡಿದ್ದರು. ಶನಿವಾರ ರಾತ್ರಿ ಕೆಲವರು ಆತನ ಅಂಗಡಿಗೆ ಬಂದು ವಾಗ್ವಾದ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ನಂತರ ತನಿಖೆಗಿಳಿದ ಖಾಕಿ ಪಡೆ ಆತನ ಮೊಬೈಲ್‌ನಲ್ಲಿಯ ಎಲ್ಲ ಬಗೆಯ ಮಾಹಿತಿ ಕಲೆಹಾಕಿ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಸರ್ಕಾರದ ಪರವಾಗಿ ಪ್ರಕರಣ ದಾಖಲಿಸಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.