ಕುಷ್ಟಗಿ: ಆಪರೇಷನ್ ಸಿಂಧೂರ ಮೂಲಕ ಯುದ್ಧದ ಕಾರ್ಮೋಡ ಏರ್ಪಟ್ಟ ಹಿನ್ನೆಲೆಯಲ್ಲಿ ರಜೆಯ ಮೇಲಿದ್ದ ಪಟ್ಟಣದ ಸೈನಿಕನಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ಬಂದ ಕಾರಣ ಹೊರಟಿರುವ ವೀರೇಶ ಹಿರೇಮನಿ ಅವರನ್ನು ಜನರು ಹಣೆಗೆ ತಿಲಕ ಇಟ್ಟು ಬೀಳ್ಕೊಟ್ಟರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮುಸ್ಲಿಂ ಸಮಾಜ ಸೇರಿದಂತೆ ಎಲ್ಲಾ ಸಮಾಜದ ಬಾಂಧವರು ಎಲ್ಲಾ ಸಮಾಜದವರು ಜಮಾಗೊಂಡು ವೀರೇಶ್ ಹಿರೇಮನಿ ಅವರಿಗೆ ಸಿಹಿ ನೀಡಿ, ತಿಲಕ ಇಟ್ಟು ಸಂಭ್ರಮಿಸಿದರು. ನಂತರ ಸೈನಿಕ ವೀರೇಶ್ ಹಿರೇಮನಿ ಮಾತನಾಡಿ, ನಾನು 30 ದಿನಗಳ ಕಾಲ ವೈಯಕ್ತಿಕ ರಜೆ ಮೇಲೆ ಬಂದಿದ್ದೇನೆ. ಭಾರತ ಮತ್ತು ಪಾಕಿಸ್ತಾನ್ ನಡುವೆ ಆಪರೇಷನ್ ಸಿಂಧೂರ ನಡೆದಿದ್ದು, ಮೇ 16ರಂದು ಕರ್ತವ್ಯಕ್ಕೆ ಹಾಜರಾಗಬೇಕಾಗಿತ್ತು ಆದರೆ ಸೈನ್ಯದಿಂದ ತತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ಬಂದ ಹಿನ್ನೆಲೆಯಲ್ಲಿ ಹೊರಟಿದ್ದೇನೆ ಎಂದರು.
ನಾನು ಪಂಜಾಬ್ ಗಡಿಯಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದೇನೆ, ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿ ಮರಳಿ ಬಂದ ಮೇಲೆ ಯಾವ ರೀತಿ ಕಾರ್ಯಾಚರಣೆ ನಡೆದಿದೆ ಎಂಬುದನ್ನು ನಾನು ಹೇಳುತ್ತೇನೆ. ನನಗೆ ಅತೀವ ಸಂತೋಷವಾಗಿದ್ದು ನನ್ನ ಕುಟುಂಬಕ್ಕೆ ಸ್ವಲ್ಪ ಮನಸ್ಸಿಗೆ ನೋವಾಗಿರಬಹುದು. ಆದರೆ ನನಗೆ ಗ್ರಾಮ ದೇವತೆ, ಕುಷ್ಟಗಿ ಜನತೆಯ ಬೆಂಬಲ ಸಿಕ್ಕಿರುವುದು ನನ್ನ ನೂರು ಜನ್ಮದ ಪುಣ್ಯ ಎಂದರು.
ನನ್ನ 28 ವರ್ಷದ ಕರ್ತವ್ಯದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದೇನೆ. ಅದೇ ರೀತಿಯಾಗಿ ಆಪರೇಷನ್ ಸಿಂಧೂರದಲ್ಲಿ ಭಾಗವಹಿಸುತ್ತಿರುವುದು ನನ್ನ ನೂರು ಜನ್ಮದ ಪುಣ್ಯ, ನನಗೆ ಯಾವುದೇ ಭಯವಿಲ್ಲ, ನಮ್ಮ ಮಿಲಿಟರಿ ಪಡೆ ಜಯಶಾಲಿಯಾಗಲಿದೆ ಎಂಬುದು ನನಗೆ ವಿಶ್ವಾಸವಿದೆ ಎಂದರು.