ಬಸವ ಸಾಗರ ಜಲಾಶಯಕ್ಕೆ ಭದ್ರತೆ ಹೆಚ್ಚಳ

ಯಾದಗಿರಿ: ಯುದ್ಧದ ಭೀತಿ ಹಿನ್ನೆಲೆಯಲ್ಲಿ  ಜಿಲ್ಲೆಯ ಜೀವನಾಡಿ ನಾರಾಯಣಪುರ ಜಲಾಶಯಕ್ಕೆ ಹೆಚ್ಚಿನ ಪೊಲೀಸ್ ನಿಯೋಜಿಸುವ ಮೂಲಕ ಭದ್ರತೆ ಹೆಚ್ಚಿಸಲಾಗಿದೆ.

ಭಾರತೀಯ ಸೇನೆ  “ಆಪರೇಷನ್ ಸಿಂಧೂರ” ಮೂಲಕ ಉಗ್ರರ ಹೆಡೆ ಮುರಿ ಕಟ್ಟುವ ಕೆಲಸದಲ್ಲಿ ನಿರತವಾಗಿರುವ ಹಿನ್ನೆಲೆಯಲ್ಲಿ ಮುಂಜ್ರಾಗತೆ ಕ್ರಮವಾಗಿ , ಜಿಲ್ಲೆಯ ನಾರಾಯಣಪುರದ ಬಸವ ಸಾಗರ ಅಣೆಕಟ್ಟಿನ ಮುಖ್ಯದ್ವಾರ ಸೇರಿ ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಪಾಯಿಂಟ್ ಗೇಟ್ ಬಳಿ ಸಿಸಿ ಕ್ಯಾಮೆರಾ ಜೊತೆಗೆ ಹೆಚ್ಚಿನ ಕಾಖಿ ಪಡೆ ನಿಯೋಜನೆ ಮಾಡಲಾಗಿದೆ.

ಈ ಹಿಂದೆ ಒದಗಿಸಲಾಗುತ್ತಿದ್ದ 12 ಮೀಸಲು ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದ ಕಡೆಯಲ್ಲಿ ಇದೀಗ ಶಸ್ತ್ರಾಸ್ತ್ರ ಸಹಿತ  ಒಂದೊಂದು ಗೇಟ್ ಬಳಿ ಒಬ್ಬ ಪಿಎಸ್‌ಐ, 9 ಜನ ಪೊಲೀಸ್ ಸಿಬ್ಬಂದಿಗಳು ಸೇರಿ 54 ಸಿಬ್ಬಂದಿಗಳನ್ನು 24 ಗಂಟೆ ಎರಡು ಸರತಿಯಂತೆ ಬಂದೋಬಸ್ತ್ ಏರ್ಪಡಿಸಲಾಗಿದ್ದು,  ಡ್ಯಾಂ ಆವರಣದ ಬಳಿಯು ಸಿಸಿಟಿವಿ ಕ್ಯಾಮರಾಗಳ ಸಹ ಅಳವಡಿಸಿದೆ.

ಎಲ್ಲಾ ವಾಹನಗಳ ತಪಾಸಣೆಗೆ ಕಡ್ಡಾಯವಾಗಿದ್ದು, ಡ್ಯಾಂ ಮೇಲೆ ವಾಹನಗಳ ಪ್ರವೇಶ ಸಂಪೂರ್ಣ ನಿರ್ಬಂಧಿಸಿಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.