ಲೋಕಾಯುಕ್ತ ದಾಳಿಯಿಂದ ಜೈಲು ಸೇರಿದ್ದ ಅಧಿಕಾರಿ ಸಾವು

ಚಿತ್ರದುರ್ಗ: ಲೋಕಾಯುಕ್ತ ದಾಳಿಗೆ ಒಳಗಾಗಿ ಜೈಲು ಸೇರಿದ್ದ ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು(೪೦) ಶನಿವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಜೈಲಲ್ಲಿ ಬೆಳಗ್ಗೆ ವಾಯುವಿಹಾರ ಮುಗಿಸಿಕೊಂಡು ಲವಲವಿಕೆಯಿಂದ ಇದ್ದ ಸಂದರ್ಭ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಜೈಲು ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆ ಬಳಿಕ ಚೆನ್ನಾಗಿಯೇ ಇದ್ದ ಅವರು ಅಂದಾಜು ೮.೩೦ಕ್ಕೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಏ. ೨೦ರಂದು ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಸೇರಿದ್ದರು. ಇ-ಖಾತೆ ಮಾಡಿಕೊಡಲು ೫೦ ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪುರಸಭೆ ಸದಸ್ಯ ಎನ್.ಶಾಂತಪ್ಪ ಬಳಿ ೨೫ ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಸುದ್ದಿ ಕೇಳಿ ಮರುದಿನ ತಿಮ್ಮರಾಜು ಅಜ್ಜಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು.
ಸಂಬಂಧಿಕರ ಆಕ್ರೋಶ: ಸಾವಿನ ಸುದ್ದಿ ಕೇಳುತ್ತಿದ್ದಂತೆ ಸಂಬಂಧಿಕರು, ಸ್ನೇಹಿತರು ಜಿಲ್ಲಾಸ್ಪತ್ರೆ ಬಳಿ ಜಮಾಯಿಸಿ ಲೋಕಾಯುಕ್ತ ದಾಳಿ, ಪುರಸಭೆ ಕೆಲ ಸದಸ್ಯರು ಮತ್ತು ಮುಖಂಡರ ಷಡ್ಯಂತ್ರವಾಗಿದೆ. ಬಹಳ ಜನರ ಕಿರುಕಳದಿಂದ ಅವರು ಮಾನಸಿಕವಾಗಿ ನೊಂದಿದ್ದರು. ಲೋಕಾಯುಕ್ತ ದಾಳಿ ಬಳಿಕ ಜೈಲು ಸೇರಿದ್ದರಿಂದ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಈ ಸಂಬಂಧ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು. ಬಳಿಕ ಪೊಲೀಸ್ ಠಾಣೆ ಹಾಗೂ ಎಸ್‌ಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸಂಜೆ ವೇಳೆಗೆ ಜಿಲ್ಲಾಸ್ಪತ್ರೆಗೆ ನ್ಯಾಯಾಧೀಶರು ಆಗಮಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಸಂಬಂಧಿಕರ ವಶಕ್ಕೆ ಒಪ್ಪಿಸಿದರು.