ಅಗಳಕೇರಾದಲ್ಲಿ ಕಾರ್ಮಿಕರ ಮೇಲೆ ವಾಮಾಚಾರ: ಗ್ರಾಮಸ್ಥರಿಂದ ಧರ್ಮದೇಟು, ನಾಲ್ವರು ಪೊಲೀಸ್ ವಶಕ್ಕೆ‌

ಕೊಪ್ಪಳ: ಕಳೆದ ಮೂರು ದಿನಗಳ ಹಿಂದಷ್ಟೇ ಮೃತರಾದ ತಾಲೂಕಿನ ಅಗಳಕೇರಾ ಗ್ರಾಮದ ನಿವೃತ್ತ ಶಿಕ್ಷಕ ಸಿದ್ದಪ್ಪ ಮಡಿವಾಳರ ಸಮಾಧಿಯ ಮೇಲೆ ಗುರುವಾರ ನಡುರಾತ್ರಿ ವಾಮಾಚಾರ ಮಾಡುತ್ತಿದ್ದ ಕಾರಣಕ್ಕೆ ಓರ್ವ ಪೂಜಾರಿ ಮತ್ತು ಐವರು ಯುವಕರಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಪೂಜಾರಿ ಸೇರಿ ನಾಲ್ವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ.
ಹಿಟ್ನಾಳ ಗ್ರಾಮದ ಅಂಬಾದೇವಿ ಪೀಠ ಸ್ಥಾಪನೆ ಮಾಡಿ, ಜನರಿಗೆ ದೇವರ ಹೆಸರಲ್ಲಿ ಚೀಟಿ ಕೊಡುತ್ತಿದ್ದ ಸರಮಸ್ ಅಲಿ ವಾಮಾಚಾರ ಮಾಡುತ್ತಿದ್ದ ಪೂಜಾರಿ. ಈತನಿಗೆ ಹಣ ಕೊಟ್ಟು, ಹೊಸಪೇಟೆ ತಾಲೂಕಿನ ವ್ಯಾಸನಕೇರೆ ರೇಲ್ವೆ ಸ್ಟೇಷನ್ ನಿವಾಸಿಗಳಾದ ಶ್ರೀನಿವಾಸ್, ನಾಗಾರಾಜ, ಶ್ರೀಧರ್, ಯೂನುಸ್ ಎಂಬುವವರು ತಮ್ಮ ಮೂವರು ಕಾರ್ಮಿಕರು ಬೇರೆ ಕಡೆಗೆ ಹೋಗದಂತೆ ವಾಮಾಚಾರ ಮಾಡಿಸುತ್ತಿದ್ದರು ಎಂದು ದೂರಲಾಗಿದೆ.
ಗುರುವಾರ ನಡುರಾತ್ರಿ ಐಪಿಎಲ್ ಪಂದ್ಯ ವೀಕ್ಷಿಸಿ ಬರುವಾಗ ಸ್ಮಶಾನದಲ್ಲಿ ಬೆಂಕಿ ಹಚ್ಚಿದ್ದನ್ನು 15 ಯುವಕರು ಗಮನಿಸಿದ್ದಾರೆ. ಓರ್ವ ವ್ಯಕ್ತಿ ಪೂಜೆ ಮಾಡುತ್ತಿದ್ದ ಹಾಗೂ ಯುವಕರು ಸಮಾಧಿಯ ಮುಂದೆ ನಗ್ನವಾಗಿ ನೃತ್ಯ ಮಾಡುತ್ತಿದ್ದನ್ನು ಕಂಡು ಗ್ರಾಮಸ್ಥರಿಗೆ ಕರೆದಿದ್ದಾರೆ. ಗ್ರಾಮಸ್ಥರು ಬಂದು, ಹಿಟ್ನಾಳದ ವಾಮಾಚಾರಿ ಸರಮಸ್ ಅಲಿ ಸೇರಿ ಐದಾರು ಯುವಕರನ್ನು ಥಳಿಸಿ, ಪೊಲೀಸರಿಗೆ ಒಪ್ಪಿಸಿದರು.