ಕೊಪ್ಪಳ: ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಕೊಪ್ಪಳದ 19 ಪ್ರವಾಸಿಗರು ಶ್ರೀನಗರದಲ್ಲಿಯೇ ಸುರಕ್ಷಿತವಾಗಿರುವ ವರದಿಗಳು ಬಂದಿವೆ.
ಕೊಪ್ಪಳದಿಂದ ಮೂರು ಕುಟುಂಬದ 15 ಜನರು ಮತ್ತು ಹುಬ್ಬಳ್ಳಿಯ ಒಂದು ಕುಟುಂಬದ ನಾಲ್ವರು ಸೇರಿ ಒಟ್ಟು 19 ಜನ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಶರಣಪ್ಪ ಸಜ್ಜನ್, ಶಿವಕುಮಾರ ಪಾವಲಿಶೆಟ್ಟರ್, ಕಾಟನಪಾಷಾ ಮೂವರ ಕುಟುಂಬವು ಕೊಪ್ಪಳದಿಂದ ಸೋಮವಾರ ರಾತ್ರಿ ಕಾರಿನಲ್ಲಿ ಹುಬ್ಬಳ್ಳಿಗೆ ಹೋಗಿದ್ದು, ಕೊಪ್ಪಳ ಮೂಲದ ಸಿದ್ದು ಗಣವಾರಿ ಕುಟುಂಬವು ಹುಬ್ಬಳ್ಳಿಯಿಂದ ಸೇರ್ಪಡೆಯಾಗಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ೧೨ಕ್ಕೆ ೧೯ ಸೀಟ್ ಕಾಯ್ದಿರಿಸಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ವಿಮಾನವು ಮೇಲೆ ಹಾರಿ, ಮತ್ತೆ ಕೆಳಗಿಳಿಯಿತು. ಬಳಿಕ ಮಧ್ಯಾಹ್ನ ೨.೩೦ಕ್ಕೆ ವಿಮಾನವು ಮುಂಬೈ ಬಿಟ್ಟಿದ್ದು, ಸಂಜೆ ೬.೩೦ಕ್ಕೆ ಶ್ರೀನಗರ ತಲುಪಿದೆ. ಕೊಪ್ಪಳದ ಪ್ರವಾಸಿಗರು ಮುಂಬೈ ಬಿಟ್ಟಾಗಲೇ ಉಗ್ರರ ಗುಂಡಿನ ದಾಳಿ ಶುರವಾಗಿತ್ತು. ಬಳಿಕ ಸಂಜೆ ಶ್ರೀನಗರಕ್ಕೆ ಹೋಗುತ್ತಿದ್ದಂತೆಯೇ ಹೈ ಅಲರ್ಟ್ ಮಾಡಲಾಗಿತ್ತು. ವಿಮಾನ ಇಳಿಯುತ್ತಿದ್ದಂತೆಯೇ ಕುಟುಂಬಸ್ಥರು ಪ್ರವಾಸದಲ್ಲಿರುವ ತಮ್ಮ ಸಂಬಂಧಿಕರಿಗೆ ಕರೆ ಮಾಡಿದರು. ಆಗ ಗುಂಡಿನ ದಾಳಿಯ ವಿಷಯ ವಿನಿಮಯ ಮಾಡಿಕೊಂಡು, ಸುರಕ್ಷತೆಯಿಂದ ಇರುವುದಾಗಿ ಕುಟುಂಬಸ್ಥರಿಗೆ ಪ್ರವಾಸಿಗರು ತಿಳಿಸಿದ್ದರು.
ಘಟನೆ ತಿಳಿದು ಕೊಪ್ಪಳದ ಪ್ರವಾಸಿಗರು ಶ್ರೀನಗರದ ಲಾಡ್ಜ್ನಲ್ಲಿಯೇ ತಂಗಿದ್ದಾರೆ. ಹೊರಗಡೆಯೇ ಬಂದಿಲ್ಲ.