ಕಾರು ಜಪ್ತಿಗೆ ಆದೇಶ: ಕೀ ಕೊಡದ ಜಿಲ್ಲಾಧಿಕಾರಿ

ಕೊಪ್ಪಳ: ಸುಮಾರು 13 ಲಕ್ಷ ರೂ. ಪಾವತಿ ಮಾಡದ್ದಕ್ಕೆ ಗಂಗಾವತಿ ನ್ಯಾಯಾಲಯವು ಜಿಲ್ಲಾಧಿಕಾರಿ ಕಾರು ಜಪ್ತಿಗೆ ಆದೇಶ ಮಾಡಿದ್ದು, ಜಪ್ತಿಗೆ ಬಂದ ನ್ಯಾಯಾಲಯದ ಸಿಬ್ಬಂದಿಗೆ ಕಾರು ಕೀಲಿ ಕೊಡದೇ ಡಿಸಿ ಕಳುಹಿಸಿದ್ದಾರೆ. ನ್ಯಾಯಾಲಯ ಆದೇಶಕ್ಕೆ ಡಿಸಿ ಕಿಮ್ಮತ್ತು ನೀಡಲಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಗಂಗಾವತಿಯ ವಾಲ್ಮೀಕಿ ವೃತ್ತದಿಂದ ಜಯನಗರ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಗಂಗಾವತಿ ನಗರಸಭೆಯಿಂದ ಅಗಲೀಕರಣ ಮಾಡಲಾಗಿದೆ. ಆಗ ಗಂಗಾವತಿಯ ಕಲ್ಮಠದ ಶ್ರೀಕೊಟ್ಟೂರೇಶ್ವರ ಸ್ವಾಮಿಗಳ ವಿವಿಧೋದ್ದೇಶ ಸಂಸ್ಥೆಯ ಅಧ್ಯಕ್ಷರು ಹಾಗೂ ಗಂಗಾವತಿ ವಿರೂಪಾಕ್ಷಪ್ಪ ಎಂಬುವವರ ಭೂಮಿ ಒತ್ತುವರಿ ಮಾಡಿ, ರಸ್ತೆ ಅಗಲೀಕರಣ ಮಾಡಲಾಗಿದೆ. ಈ ಹಿನ್ನೆಲೆ ತಮ್ಮ ಮಾಲೀಕತ್ವದ ಭೂಮಿಯಲ್ಲಿ ಗಂಗಾವತಿ ನಗರಸಭೆ ರಸ್ತೆ ನಿರ್ಮಾಣ ಮಾಡಿದ್ದು, ಈ ಕುರಿತು ಮಾಲೀಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಪರಿಹಾರವನ್ನೂ ನೀಡಿಲ್ಲ. ಈ ಮೂಲಕ ನಮಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಭೂ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಕಳೆದ ೨೦೧೭ರಿಂದ ಆರು ವರ್ಷ ವಿಚಾರಣೆ ಮಾಡಿದ ನ್ಯಾಯಾಲಯವು ೨೦೨೩ರ ಆಗಸ್ಟ್ ೧ರಂದು ಆದೇಶ ಮಾಡಿ, ಕಲ್ಮಠಕ್ಕೆ ೭,೯೪,೨೦೪ ರೂ. ಹಾಗೂ ವಿರೂಪಾಕ್ಷಪ್ಪ ಅವರಿಗೆ ೫,೪೫,೯೦೪ ರೂ. ಪರಿಹಾರ ಜಿಲ್ಲಾಧಿಕಾರಿ ನೀಡುವಂತೆ ಆದೇಶ ಮಾಡಿತ್ತು. ನ್ಯಾಯಾಲಯದ ಆದೇಶದಂತೆ ನಿಗದಿತ ಸಮಯಕ್ಕೆ ಡಿಸಿ ಕಚೇರಿಯಿಂದ ಹಣ ಪಾವತಿಸಿಲ್ಲ. ಹಾಗಾಗಿ ಭೂಮಿ ಕಳೆದುಕೊಂಡವರು ಆದೇಶ ಪಾಲನೆಗಾಗಿ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಕುಲಂಕುಷವಾಗಿ ವಾದ-ಪ್ರತಿವಾದ ಆಲಿಸಿದ ಗಂಗಾವತಿ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ರಮೇಶ ಎಸ್. ಗಾಣಿಗೇರ ಜಿಲ್ಲಾಧಿಕಾರಿ ಕಚೇರಿಯ ಕಾರು ಜಪ್ತಿಗೆ ಆದೇಶ ಮಾಡಿದ್ದು, ಈ ಹಿನ್ನಲೆಯಲ್ಲಿ ವಕೀಲರಾದ ಸಂಜಯ ಬಿ.ಚಾನಲ್, ರಾಮಣ್ಣ ಸೋದ್ರಾ ಹಾಗೂ ಉಮೇಶ ಡಿ. ತಮ್ಮ ಕಕ್ಷಿದಾರರೊಂದಿಗೆ ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಗೆ ಗುರುವಾರ ಬೆಳಿಗ್ಗೆಯೇ ಬಂದಿದ್ದರು.
ಜಿಲ್ಲಾಧಿಕಾರಿ ನ್ಯಾಯಾಲಯದ ಸಿಬ್ಬಂದಿಗೆ ಸೂಕ್ತ ರೀತಿ ಸ್ಪಂದಿಸಿಲ್ಲ. ಕಾರಿನ ಕೀ ನೀಡದೇ ನ್ಯಾಯಾಲಯದ ಸಿಬ್ಬಂದಿಗೆ ವಾಪಾಸ್ ಹೋಗುವಂತೆ ತಿಳಿಸಿದ್ದಾರೆ. ಕೊನೆಗೆ ವಕೀಲರು ಕಾರನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದ್ದು, ವಿಫಲರಾಗಿದ್ದಾರೆ.
ನ್ಯಾಯಾಲಯ ೨ನೇ ಬಾರಿಗೆ ಕಾರು ಜಪ್ತಿಗೆ ಆದೇಶ ಮಾಡಿದ್ದು, ನ್ಯಾಯಾಲಯದ ಆದೇಶ ಜಾರಿಗೆ ಕೊಪ್ಪಳ ಎಸ್ಪಿ ಅವರಿಗೂ ಸೂಚನೆ ನೀಡಿ, ಆದೇಶ ಮಾಡಿದ್ದರು. ಎಸ್ಪಿಯವರು ಕೂಡಾ ನಮಗೆ ಸಹಕಾರ ನೀಡಲಿಲ್ಲ. ನ್ಯಾಯಾಲಯದ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿಂತಿದ್ದರು. ಈ ವೇಳೆ ಜಿಲ್ಲಾಧಿಕಾರಿಯು ಹಿಂದಿನ ಬಾಗಿಲಿನಿಂದ ಹೊರಗೆ ಹೋಗಿ, ಕಾರು ತೆಗೆದುಕೊಂಡು ಹೋಗಿದ್ದಾರೆ ಎಂದು ವಕೀಲ ಸಂಜಯ್ ಬಿ. ಚಾನಲ್ ತಿಳಿಸಿದರು.