ಬೆಂಗಳೂರು: ಕರ್ನಾಟಕ–ಬವೇರಿಯಾ ಹೊಸ ಯುಗದ ಸಹಕಾರ ಆಗಲಿದ್ದು ಕೃಷಿಯಿಂದ ತಂತ್ರಜ್ಞಾನದವರೆಗೆ ದ್ವಿಪಕ್ಷೀಯ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯ ಸಚಿವ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಜರ್ಮನಿಯ ಬವೇರಿಯನ್ ಪ್ರಾಂತ್ಯದ ಮುಖ್ಯಸ್ಥರಾದ ಡಾ. ಫ್ಲೋರಿಯಾನ್ ಹೆರ್ಮನ್ (Dr. Florian Herrmann) ಹಾಗೂ ಅವರ ನಿಯೋಗದ ಸದಸ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡು, ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದೆ.
ಇದೇ ವೇಳೆ ಎಐ, ಕ್ವಾಂಟಂ ತಂತ್ರಜ್ಞಾನ, ಬಿಟಿ, ಸ್ಮಾರ್ಟ್ ಸಿಟಿ, ಉನ್ನತ ಶಿಕ್ಷಣ ಮತ್ತು ಸುಸ್ಥಿರ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಉದ್ದೇಶದಿಂದ ಜರ್ಮನಿಯ ಬವೇರಿಯಾ ಪ್ರಾಂತ್ಯ ಮತ್ತು ರಾಜ್ಯ ಸರಕಾರಗಳು ಒಡಂಬಡಿಕೆಗೆ ಅಂಕಿತ ಹಾಕಲಾಯಿತು.
ಈ ಒಡಂಬಡಿಕೆಯು ಮುಂದಿನ 5 ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ. ಇದರ ಅನ್ವಯ ಇಂಡಸ್ಟ್ರಿ 4.0, ವೈಮಾಂತರಿಕ್ಷ, ವೈದ್ಯಕೀಯ ತಂತ್ರಜ್ಞಾನ, ಪರಿಸರ ತಂತ್ರಜ್ಞಾನ, ನಗರ ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿ ಮತ್ತು ನೇಮಕ, ಉದ್ಯಮಶೀಲತೆ, ಸೈಬರ್ ಸೆಕ್ಯುರಿಟಿ ಕ್ಷೇತ್ರಗಳಲ್ಲೂ ಪರಸ್ಪರ ಸಹಕಾರ ಸ್ಥಾಪನೆಯಾಗಲಿದೆ.
ಬವೇರಿಯನ್ ನಿಯೋಗಕ್ಕೆ ರಾಜ್ಯದ ಕೈಗಾರಿಕಾ ಕಾರ್ಯಪರಿಸರದ ಬಗ್ಗೆ ವಿವರವಾಗಿ ತಿಳಿಸಿ, ಹೂಡಿಕೆಗೆ ಅವಕಾಶವಿರುವ ಕ್ಷೇತ್ರಗಳತ್ತ ಗಮನ ಸೆಳೆಯಲಾಯಿತು ಎಂದಿದ್ದಾರೆ, ಇನ್ನು ಸಚಿವ ಸಂಪುಟದ ಪ್ರಿಯಾಂಕ್ ಖರ್ಗೆ, ಕೈಗಾರಿಕಾ ಇಲಾಖೆ ಮತ್ತು ಆಡಳಿತ ಸುಧಾರಣೆ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

