ಹುಬ್ಬಳ್ಳಿ ಎನ್‌ಕೌಂಟರ್‌ ಪ್ರಕರಣ: ಆರೋಪಿ ಮೃತದೇಹ ಸಮಾಧಿ ಮಾಡಲಾಗುವುದು

ಬೆಂಗಳೂರು: ಹುಬ್ಬಳ್ಳಿಯಲ್ಲಿ ಎನ್​​ಕೌಂಟರ್ ಆದ ಬಿಹಾರದ ರಿತೇಶ್‌ ಕುಮಾರ್‌ ಮೃತದೇಹದ ಶವಸಂಸ್ಕಾರಕ್ಕೆ ತಡೆ ನೀಡಬೇಕು ಹಾಗೂ ತುರ್ತಾಗಿ ವಿಚಾರಣೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈ ಕೋರ್ಟ್‌ಗೆ ಆರೋಪಿ ರಿತೇಶ್ ಮೃತದೇಹವನ್ನು ಮುಂದಿನ ತನಿಖೆಗೆ ಲಭ್ಯವಾಗುವಂತೆ ಮಾಡುವ ಸಲುವಾಗಿ ದಹನ ಮಾಡದೆ ಸಮಾಧಿ ಮಾಡಲಾಗುವುದು ಎಂದು ಹೈಕೋರ್ಟ್​​ಗೆ ರಾಜ್ಯ ಸರ್ಕಾರ ತಿಳಿಸಿದೆ. ಪ್ರಕರಣಕ್ಕೆ ಆರೋಪಿಯ ಮೃತದೇಹವು ಪ್ರಮುಖ ಸಾಕ್ಷ್ಯವಾಗಿದ್ದು, ಮೃತದೇಹವನ್ನು ದಹನ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಮಾನವ ಹಕ್ಕುಗಳ ಪರ ಹೋರಾಡುತ್ತಿರುವ ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್ (ಪಿಯುಸಿಎಲ್) ಸಂಘಟನೆ ಮತ್ತು ಡಾ.ಮಧು ಭೂಷಣ್‌ ಎಂಬುವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್‌ ಶಶಿಕಿರಣ್‌ ಶೆಟ್ಟಿ, ಈ ರೀತಿಯ ಪ್ರಕರಣಗಳಲ್ಲಿ ಮೃತದೇಹವನ್ನು ದಹನ ಮಾಡುವುದಿಲ್ಲ. ಆದರೆ, ಮುಂದಿನ ತನಿಖೆಗೆ ನೆರವಾಗಬೇಕು ಎಂಬ ಕಾರಣದಿಂದ ಸಮಾಧಿ ಮಾಡಲಾಗುವುದು. ಆಗ ತನಿಖೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದರು.‌ ರಿತೇಶ್‌ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಬೇಕು. ಅದರ ವಿಡಿಯೊ ಮಾಡಬೇಕು. ರಿತೇಶ್‌ ಮೃತದೇಹದ ಮಾದರಿಗಳನ್ನು ಸಂಗ್ರಹಿಸಿಡಬೇಕು. ಈ ಸಂಬಂಧ ಅಫಿಡವಿಟ್‌ ಸಲ್ಲಿಸಲು ನ್ಯಾಯಾಲಯ ಆದೇಶಿಸಿದ್ದು ಅರ್ಜಿ ವಿಚಾರಣೆಯನ್ನು ಮುಂದೂಡಿದೆ.