ವಿಕೃತ ಮನಸ್ಥಿತಿಯ ವ್ಯಕ್ತಿಗೆ ಪೊಲೀಸರಿಂದ ಸರಿಯಾದ ಶಿಕ್ಷೆ

ದಾವಣಗೆರೆ: ಹುಬ್ಬಳ್ಳಿಯಲ್ಲಿ ಬಾಲಕಿ ಮೇಲೆ ಅಪರಾಧ ಎಸಗಿದ ವಿಕೃತ ಮನಸ್ಥಿತಿಯ ವ್ಯಕ್ತಿಗೆ ಪೊಲೀಸರು ಸರಿಯಾದ ಶಿಕ್ಷೆ ನೀಡಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಪೊಲೀಸರಿಗೆ ಶಬ್ಬಾಶ್‌ಗಿರಿ ನೀಡಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ಯೆಗೊಳಗಾದ ಮಗು, ತಾಯಿ ಮತ್ತು ಕುಟುಂಬಕ್ಕೆ ತಾತ್ಕಾಲಿಕವಾಗಿ ನ್ಯಾಯ ಸಿಕ್ಕಂತಾಗಿದೆ. ಆದರೆ ಮಗುವನ್ನು ವಾಪಸ್ ಅವರಿಗೆ ಕೊಡಿಸಲು ಸಾಧ್ಯವಾಗದಿರುವುದೇ ನೋವಿನ ಸಂಗತಿ ಎಂದು ಮಮ್ಮುಲ ಮರುಗಿದರು.
ಹುಬ್ಬಳ್ಳಿಯಲ್ಲಿ ಮಗುವಿನ ತಾಯಿಯನ್ನು ಭೇಟಿ ಮಾಡಿದ್ದು, ನಾಲ್ಕಾರು ಮನೆಗಳಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಸಾಕುತ್ತಿದ್ದ ಆಕೆಗೆ ಎರಡು ಹೆಣ್ಣು ಮಕ್ಕಳು ಇವೆ. ಇನ್ನೊಂದು ವಿಶೇಷ ಚೇತನ ಮಗುವಿದೆ. ಮಗುವಿನ ಸ್ಥಿತಿಯನ್ನು ನಾನು ವಿಡಿಯೋಗಳಲ್ಲಿ ನೋಡಿದ್ದು, ಎಂತಹವರಿಗಾದರೂ ಹೃದಯ ಮಿಡಿಯುತ್ತದೆ. ಅದನ್ನು ನೋಡಿದ ಸಾಮಾನ್ಯರಿಗೂ ಅಪರಾಧಿಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ ಎಂದು ತಿಳಿಸಿದರು.
ತಾಯಿ ಸುಶಿಕ್ಷಿತಳಾಗಿದ್ದು, ಮಗು ಕಾಣೆಯಾದ ತಕ್ಷಣ, ಸಿಸಿಟಿವಿ ಪರಿಶೀಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿದ್ದರಿಂದ ಗಂಟೆಯೊಳಗೇ ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿಸಿದರು.