ಹುಬ್ಬಳ್ಳಿ: ನಗರದಲ್ಲಿ ಐದು ವರ್ಷದ ಬಾಲಕಿ ಮೇಲೆ ಅಪಹರಣ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವುದು ರಾಕ್ಷಸಿ ಕೃತ್ಯವಾಗಿದೆ. ಇಡೀ ದೇಶದ ಜನತೆಯ ಮನಸು ಕಲುಷಿತವಾಗಿದೆ. ರಾಜ್ಯ ಸರಕಾರ ಇಂತಹ ಕೃತ್ಯ ಎಸಗುವವರಿಗೆ ಭಯ ಹುಟ್ಟುವಂತ ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಮಂಗಳವಾರ ಸಬ್‌ಜೈಲ್ ಹತ್ತಿರದ ಮೃತ ಬಾಲಕಿಯ ಮನೆಗೆ ಭೇಟಿ ನೀಡಿದ ಅವರು, ಬಾಲಕಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ತಂದೆ ಪೇಟಿಂಗ್, ತಾಯಿ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ತಾಯಿ ಕೆಲಸಕ್ಕೆ ಹೋದಾಗ ಆಟವಾಡುತ್ತಿದ್ದ ಮಗುವನ್ನು ಆರೋಪಿ ಎತ್ತಿಕೊಂಡು ಹೋಗಿ ಬರ್ಬರವಾಗಿ ಹತ್ಯೆ ಮಾಡಿರುವುದು ಹೇಯ ಕೃತ್ಯ. ಬಾಲಕಿ ಕುಟುಂಬದವರು ಕಡು ಬಡವರಾಗಿದ್ದು, ರಾಜ್ಯ ಸರಕಾರ ಹತ್ತು ಲಕ್ಷ ಘೋಷಣೆ ಮಾಡಿದೆ. ೨೫ ಲಕ್ಷ ರೂಪಾಯಿ ಘೋಷಣೆ ಮಾಡಬೇಕು ಎಂದು ಆಗ್ರಹಿಸುತ್ತೇನೆ ಎಂದರು.
ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬೆಳಗಾವಿ, ಬೆಂಗಳೂರು ಸೇರಿ ಎಲ್ಲ ಕಡೆ ಇಂತಹ ಘಟನೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಭಿಗಿ ಆಡಳಿತ ಕುಸಿದಿರುವುದೇ ಇಂತಹ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಗೃಹ ಸಚಿವರು, ಮುಖ್ಯಮಂತ್ರಿಗಳು ಉತ್ತಮ ಆಡಳಿತ ಕೊಡಬೇಕಾಗಿದೆ. ಆರೋಪಿಗಳಿಗೆ ಭಯ ಬರುವಂತೆ ಸ್ಥಿತಿ ನಿರ್ಮಾಣ ಮಾಡಬೇಕು ಎಂದರು.
ಆರೋಪಿ ಗಾಂಜಾ ಸೇವನೆ ಮಾಡಿ ಇಂತಹ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಹೀಗಾಗಿ ನಗರ ಸೇರಿದಂತೆ ಎಲ್ಲ ನಗರಗಳಲ್ಲೂ ಗಾಂಜಾ ತಡೆಗೆ ಹೆಚ್ಚಿನ ಕಡಿವಾಣ ಹಾಕಬೇಕು. ಗಾಂಜಾದ ಮೂಲ ನಾಶ ಮಾಡಬೇಕು. ಇದಕ್ಕೆ ರಾಜ್ಯ ಸರಕಾರ ಜಾಗೃತಿ ಕಾರ್ಯಕ್ರಮ ಹಾಕಿಕೊಳ್ಳಬೇಕು. ಇನ್ನಾದರೂ ರಾಜ್ಯ ಸರಕಾರ ಎಚ್ಚರಿಕೆ ಎಂದು ತಿಳಿದು ಕಾನೂನು ವ್ಯವಸ್ಥೆ ಮಾಡಬೇಕು ಎಂದರು.
ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಗುಂಡು ಹಾಕಿರುವುದು ಒಳ್ಳೆಯ ಕಾರ್ಯವಾಗಿದೆ. ಬರ್ಬರವಾಗಿ ಹತ್ಯೆ ಮಾಡಿದ ವ್ಯಕ್ತಿಗೆ ಶಿಕ್ಷೆ ನೀಡಿರುವುದು ಶ್ಲಾಘಿಸುತ್ತೇನೆ. ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಆರೋಪಿಯ ಪೋಸ್ಟ್ ಮಾರ್ಟ್ಂ ಮಾಡುವ ಅವಶ್ಯಕತೆ ಇದೆ. ಪಿಐಎಲ್ ಕುರಿತು ನ್ಯಾಯಾಲಯ ತೀರ್ಮಾನ ಮಾಡಲಿದೆ ಎಂದರು.